Advertisement

ಬರ ನಿರ್ವಹಣೆಯಲ್ಲಿ  ಜನರ ಸಹಭಾಗಿತ್ವ  ಅಗತ್ಯ

03:46 PM Sep 17, 2017 | Team Udayavani |

ಚಿತ್ರದುರ್ಗ: ಅತಿವೃಷ್ಟಿ ಅನಿರೀಕ್ಷಿತವಾದರೆ, ಬರ ನಿಧಾನಗತಿಯಲ್ಲಿ ಬರುವಂತಹದ್ದಾಗಿದೆ. ಸಾರ್ವಜನಿಕ ಸಹಭಾಗಿತ್ವ ಇಲ್ಲದಿದ್ದರೆ ಬರ ನಿರ್ವಹಣೆ ಕಷ್ಟಸಾಧ್ಯ ಎಂದು ಜಿಲ್ಲಾಧಿಕಾರಿ ವಿ.ವಿ. ಜೋತ್ಸ್ನಾ ತಿಳಿಸಿದರು

Advertisement

ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಮಂತ್ರಾಲಯದ ಪಿ.ಐ.ಬಿ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಮಾಧ್ಯಮ ಪ್ರತಿನಿಧಿಗಳಿಗೆ ಶನಿವಾರ ಏರ್ಪಡಿಸಲಾಗಿದ್ದ ಬರ ನಿರ್ವಹಣೆ ಜಾಣ್ಮೆ, ನೆಲ ಜಲ ಸಂರಕ್ಷಣೆ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಬರ ಜಿಲ್ಲೆಯ ಪ್ರಮುಖ ಸಮಸ್ಯೆಯಾಗಿದೆ. ಶೇ. 90ರಷ್ಟು ಜನರು ಬರಗಾಲದಿಂದ ಉಂಟಾಗುತ್ತಿರುವ ಸಮಸ್ಯೆಗಳನ್ನೇ ಹೇಳುತ್ತಾರೆ. ಬರ ನಿರ್ವಹಣೆಯಲ್ಲಿ ಜಾಣ್ಮೆ ತೋರಿದಲ್ಲಿ ಹೆಚ್ಚು ತೊಂದರೆ ಅನುಭವಿಸುವುದಕ್ಕಿಂತ ಪ್ರಮಾಣವನ್ನು ಕಡಿಮೆ ಮಾಡಬಹುದಾಗಿದೆ ಎಂದರು.

ಬರ ನಿರ್ವಹಣೆಗಾಗಿ ತಜ್ಞರು ಕೈಗೊಂಡಿರುವ ವಿವಿಧ ಸಂಶೋಧನೆಗಳ ಬಗೆಗಿನ ಅಧ್ಯಯನ ವರದಿಗಳನ್ನು ಪರಿಶೀಲಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುತ್ತದೆ. ಬರ ಎದುರಿಸಲು ಜನರು ಸನ್ನದ್ಧರಾಗಬೇಕು. ಮಳೆ ಬಂದಾಗ ಅಂತರ್ಜಲ ಸಂರಕ್ಷಣೆ ಸೇರಿದಂತೆ ನೀರಿನ ಮಿತಬಳಕೆಯನ್ನು ಕೈಗೊಳ್ಳಬೇಕಾಗಿದೆ. ಬರ ನಿರ್ವಹಣೆಯನ್ನು ಸರ್ಕಾರದಿಂದ ಮಾತ್ರ ಮಾಡಲಾಗುವುದಿಲ್ಲ. ಈ ಕಾರ್ಯದಲ್ಲಿ ಜನರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ನಮ್ಮ ಪೂರ್ವಜರು ನಿರ್ಮಾಣ ಮಾಡಿದ ಕೆರೆ, ಕಟ್ಟೆಗಳ ಮೂಲಕ ನೀರಿನ ಸಂಗ್ರಹ ಮತ್ತು ಸಂರಕ್ಷಣೆ  ಮಾಡಲಾಗುತ್ತಿದ್ದು, ಇದು ಸಾಂಪ್ರದಾಯಿಕ ಕ್ರಮವಾಗಿದೆ. ಇದರೊಂದಿಗೆ ಜನರಲ್ಲಿ ನೆಲ-ಜಲದ ಸಂರಕ್ಷಣೆಯ  ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಮಾಧ್ಯಮಗಳ ಪಾತ್ರ ಬಹುಮುಖ್ಯ. ಮಾಧ್ಯಮಗಳಲ್ಲಿ ವರದಿಯಾಗುವುದರಿಂದ ಜನರು ಅದನ್ನು ಗ್ರಹಿಸುತ್ತಾರೆ ಮತ್ತು ಅವರಲ್ಲಿ ನಂಬಿಕೆಯನ್ನು ಹುಟ್ಟು ಹಾಕುತ್ತದೆ ಎಂದರು.

Advertisement

ಬಬ್ಬೂರು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ| ಓಂಕಾರಪ್ಪ ಮಾತನಾಡಿ, ಬರಗಾಲದಿಂದ ನೇರವಾಗಿ ತೊಂದರೆಯಾಗವುದು ರೈತರಿಗೆ. ರೈತರು ಸ್ವತಃ ಕೃಷಿ ಡಾಕ್ಟರ್‌ಗಳಾಗಬೇಕು. ಹೆಚ್ಚು ರಾಸಾಯನಿಕಗಳನ್ನು ಬಳಕೆ ಮಾಡುವುದರಿಂದ ಭೂಮಿಯಲ್ಲಿನ ಫಲವತ್ತತೆ ಹಾಗೂ ಜೀವಾಣುಗಳು ನಾಶವಾಗಿ ಭೂಮಿ ಬರಡಾಗುತ್ತದೆ. ಸಲಹೆ ನೀಡುವವರು ಕೃಷಿ ತಜ್ಞರಾಗುವುದಿಲ್ಲ. ಈ ನಿಟ್ಟಿನಲ್ಲಿ ರೈತರು ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ಅಂದರೆ ಬರೀ ರಾಸಾಯಿನಿಕ ಬಳಕೆಯ ಬದಲು ಕೊಟ್ಟಿಗೆ ಹಾಗೂ ಸಾವಯವ ಗೊಬ್ಬರವನ್ನು ಹೆಚ್ಚು ಬಳಕೆ ಮಾಡುವುದರಿಂದ ಭೂಮಿಯಲ್ಲಿನ ಫಲವತ್ತತೆಯನ್ನು ಕಾಪಾಡಿಕೊಂಡು ಬೆಳೆಗಳಿಗೆ ಬರುವ ಅನೇಕ ರೋಗಾಣುಗಳನ್ನು ತಡೆಗಟ್ಟಬಹುದಾಗಿದೆ ಎಂದರು.

ಕೃಷಿಗೆ ಹೊರಗಿನ ಮತ್ತು ಮನೆಯ ಮದ್ದು ಬೇಕಾಗಿದೆ. ಜನ, ದನ, ವನ ಇದ್ದರೆ ಮಾತ್ರ ಕೃಷಿ ಚಟುವಟಿಕೆ ಸಾಧ್ಯ. ಹಿಂದೆ ಅವಿಭಕ್ತ ಕುಟುಂಬಗಳಿರುತ್ತಿದ್ದವು. ಮನೆಯಲ್ಲಿ ಸಾಕಷ್ಟು ಜನರಿದ್ದರೂ ಜಾನುವಾರುಗಳನ್ನು ಸಾಕಣೆ ಮಾಡುತ್ತಿದ್ದರು. ಇದರಿಂದ ಗೊಬ್ಬರ ಮನೆಯಲ್ಲಿಯೇ ಸಿಗುತ್ತಿತ್ತು. ಈಗ ಆಹಾರ ಹಾಗೂ ಪೌಷ್ಟಿಕತೆಯ ಸಮಸ್ಯೆ ಇದೆ. ರೈತ ಚೆನ್ನಾಗಿದ್ದರೆ ಮಾತ್ರ ನಾವೆಲ್ಲರೂ ಚೆನ್ನಾಗಿರಬಹುದು ಎಂದು ಅಭಿಪ್ರಾಯಪಟ್ಟರು.

ಅಭಿವೃದ್ಧಿ ಪರಿಸರ ಬರಹಗಾರ ಶಿವಾನಂದ ಕಳವೆ, ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಮೇಟಿಕುರ್ಕೆಯ  ಎಸ್‌.ಎಂ. ಶಾಂತವೀರಯ್ಯ, ಸಾವಯವ ಕೃಷಿಕ ಚಳ್ಳಕೆರೆ ತಾಲೂಕಿನ ಹಾಲಗೊಂಡನಹಳ್ಳಿಯ ಕೆ.ವಿ. ರುದ್ರಮುನಿಯಪ್ಪ, ಪತ್ರಕರ್ತ ಗಾಣಧಾಳು ಶ್ರೀಕಂಠ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಪಿಐಬಿ ಉಪನಿರ್ದೇಶಕ  ಶಿವರಾಂ ಪೈಲೂರು ಸ್ವಾಗತಿಸಿದರು. ಜಿಲ್ಲಾ ವಾರ್ತಾಧಿಕಾರಿ ಧನಂಜಯ ನಿರೂಪಿಸಿದರು.

ಮಳೆ ನೀರು ಇಂಗಿಸುವ ಕಾರ್ಯಕ್ಕೆ ಹೆಚ್ಚು ಒತ್ತು
ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮಳೆ ನೀರು ಹರಿದು ಹೋಗದಂತೆ ನಿಲ್ಲಿಸಿ ಇಂಗಿಸುವ ಕೆಲಸ ಮಾಡಬೇಕಾಗಿದೆ. ಇದಕ್ಕಾಗಿಯೇ ಕೃಷಿ, ತೋಟಗಾರಿಕೆ ಇಲಾಖೆಗಳ ಮೂಲಕ ಕೃಷಿಹೊಂಡ, ಚೆಕ್‌ಡ್ಯಾಂ,  ನಾಲಾ ಬದು ನಿರ್ಮಾಣ ಸೇರಿದಂತೆ ಅನೇಕ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ನೆಲ, ಜಲ ಸಂರಕ್ಷಣೆಗೆ ಒತ್ತು ನೀಡಲಾಗಿದೆ ಎಂದು ಜಿಪಂ ಸಿಇಒ ಪಿ.ಎನ್‌. ರವೀಂದ್ರ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next