Advertisement

ಬರ ನಿರ್ವಹಣೆಗೆ ಮತ್ತೆ 40 ಲಕ್ಷ ಅನುದಾನ

02:31 PM Mar 15, 2017 | Team Udayavani |

ಧಾರವಾಡ: ಬರ ಪರಿಸ್ಥಿತಿ ನಿರ್ವಹಿಸಲು ಪ್ರತಿ ತಾಲೂಕಿಗೆ ಈ ಹಿಂದೆ ನೀಡಿದ್ದ 60 ಲಕ್ಷ ರೂ.ಗಳ ಜೊತೆಗೆ ಮತ್ತೆ 40 ಲಕ್ಷ ರೂ.ಗಳನ್ನು ಹೆಚ್ಚುವರಿಯಾಗಿ ಒದಗಿಸಲಾಗಿದ್ದು,ಅಧಿಕಾರಿಗಳು ರಜೆ ಪಡೆಯದೇ, ಕೇಂದ್ರ ಸ್ಥಾನ ಬಿಟ್ಟು ತೆರಳದೇ ಕರ್ತವ್ಯ ನಿರ್ವಹಿಸಿ ಜನರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಬೆಳಗಾವಿ ವಿಭಾಗದ ಬರ ಪರಿಶೀಲನಾ ಸಂಪುಟ ಉಪಸಮಿತಿ ಅಧ್ಯಕ್ಷ ಆರ್‌.ವಿ.ದೇಶಪಾಂಡೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲೆಯ ಬರ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿಅವರು ಮಾತನಾಡಿದರು. ಮಾರ್ಚ್‌ ತಿಂಗಳ ನಂತರ ಕನಿಷ್ಠ ಇನ್ನೂ ಎರಡು ತಿಂಗಳು ಕಾಲ ಪರಿಸ್ಥಿತಿಯ ಗಂಭೀರತೆ ಮುಂದುವರಿಯಲಿದೆ. ಈ ಬಾರಿ ಉತ್ತಮಮಳೆಯಾಗುವ ನಿರೀಕ್ಷೆ ಇದೆ.

ಅಲ್ಲಿಯವರೆಗೂ ಅಧಿಕಾರಿಗಳು ಜನ ಜಾನುವಾರುಗಳಿಗೆ ಸಮರ್ಪಕವಾಗಿ ಕುಡಿಯುವ ನೀರು, ಮೇವು ಒದಗಿಸಲು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು. ಅದರಲ್ಲೂ ವಿಶೇಷವಾಗಿ ಅರಣ್ಯ ಪ್ರದೇಶದ ಪ್ರಾಣಿಗಳಿಗೆ ಕುಡಿಯುವ ನೀರಿನ ತೊಂದರೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

2016ರ ಮುಂಗಾರು ಹಂಗಾಮಿನಲ್ಲಿ ನಷ್ಟ ಅನುಭವಿಸಿದ ರೈತರಿಗೆ ಇನ್‌ಪುಟ್‌ ಸಬ್ಸಿಡಿ ಒದಗಿಸಲು ಕೇಂದ್ರ 1692 ಕೋಟಿ ರೂ. ನೆರವು ಘೋಷಿಸಿದ್ದು, ಈವರೆಗೆ 450 ಕೋಟಿ ರೂ. ಬಿಡುಗಡೆ ಮಾಡಿ ಬಳಕೆ ಪ್ರಮಾಣ ಪತ್ರ ಒದಗಿಸಿದರೆ ಉಳಿದ ಅನುದಾನ ನೀಡುವುದಾಗಿ ತಿಳಿಸಿದೆ.

ರಾಜ್ಯ ಸರಕಾರ ಈಗಾಗಲೇ 671 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಜಿಲ್ಲೆಯಲ್ಲಿ 1ಲಕ್ಷ 20 ಸಾವಿರ ರೈತರಿಗೆ 130 ಕೋಟಿ ರೂ.ಗಳ ಇನ್‌ಪುಟ್‌ ಸಬ್ಸಿಡಿ ಅಗತ್ಯವಿದೆ. ಈಗ 56,470 ರೈತರಿಗೆ 36 ಕೋಟಿ 91 ಲಕ್ಷ ರೂ. ಸಬ್ಸಿಡಿ ಬಿಡುಗಡೆಯಾಗಿದ್ದು, ಬಾಕಿ ಹಣಶೀಘ್ರವೇ ದೊರೆಯಲಿದೆ ಎಂದರು. 

Advertisement

118ಕೆರೆ ಹೂಳೆತ್ತಿ: ಸಂಪುಟ ಉಪ ಸಮಿತಿ ಸದಸ್ಯರಾದ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಮಾತನಾಡಿ, ಹುಬ್ಬಳ್ಳಿ-ಧಾರವಾಡ ಮಹಾನಗರಕ್ಕೆ ಕುಡಿಯುವ ನೀರಿಗಾಗಿ ಲಭ್ಯ ಇರುವ 2.3 ಟಿಎಂಸಿ ನೀರು ಕಡ್ಡಾಯವಾಗಿ ಕುಡಿಯಲು ಮಾತ್ರ ಬಳಕೆಯಾಗುವಂತೆ ನೋಡಿಕೊಳ್ಳಬೇಕು. 

ಜಿಲ್ಲೆಯಲ್ಲಿರುವ ಸಣ್ಣ ನೀರಾವರಿ ಇಲಾಖೆಯ 118 ಕೆರೆಗಳ ಹೂಳೆತ್ತಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಮಾತನಾಡಿ, ಅರಣ್ಯ ಪ್ರದೇಶಗಳಲ್ಲಿರುವ ಕಾಡು ಪ್ರಾಣಿಗಳು ಸಹ ಕುಡಿಯುವ ನೀರು ಹುಡುಕಿಕೊಂಡು ನಗರ ಪ್ರದೇಶದ ಚರಂಡಿಗಳಿಗೆ ಬರುತ್ತಿವೆ.

ಅರಣ್ಯ ಪ್ರದೇಶದಲ್ಲಿರುವ ಕೆರೆಗಳಲ್ಲಿನ ಹೂಳೆತ್ತಲು ಅರಣ್ಯ ಕಾಯ್ದೆಯಡಿ ಕಾಮಗಾರಿ ಕೈಗೊಳ್ಳಬೇಕು ಎಂದರು. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಸಿ.ಎಸ್‌.ಶಿವಳ್ಳಿ, ಶಾಸಕರಾದ ಎನ್‌.ಎಚ್‌.ಕೋನರಡ್ಡಿ, ಶ್ರೀನಿವಾಸ ಮಾನೆ, ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ, ಜಿಲ್ಲಾಧಿಕಾರಿ ಡಾ|ಎಸ್‌.ಬಿ.ಬೊಮ್ಮನಹಳ್ಳಿ, ಜಿಪಂ ಸಿಇಒ ಆರ್‌.ಸ್ನೇಹಲ್‌ ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next