Advertisement

Treasury: ಖಜಾನೆಗೂ ಬರ- ಹಣಕಾಸು ಪರಿಸ್ಥಿತಿ ಶ್ವೇತಪತ್ರಕ್ಕೆ ಆಗ್ರಹ

11:27 PM Dec 07, 2023 | Team Udayavani |

ಬೆಳಗಾವಿ: ಬರ ಪರಿಹಾರ ವಿಚಾರದಲ್ಲಿ ಸತತ ಎರಡನೇ ದಿನವೂ ಸರಕಾರದ ಮೇಲೆ ಮುಗಿಬಿದ್ದ ವಿಪಕ್ಷಗಳು, ರಾಜ್ಯಕ್ಕೆ ಮಾತ್ರವಲ್ಲ; ಸರಕಾರ ಮತ್ತು ಅದರ ಖಜಾನೆಗೂ ಬರ ಬಂದಂತಿದೆ. ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಪರಿಹಾರ ನೀಡಲಿಕ್ಕೂ ಹಿಂದೇಟು ಹಾಕುತ್ತಿರುವ ಸರಕಾರದಲ್ಲಿ ದುಡ್ಡು ಇದೆಯೋ ಇಲ್ಲವೋ ಎಂಬುದನ್ನು ತಿಳಿಯಲು ಶ್ವೇತಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿವೆ.

Advertisement

ರಾಜ್ಯದಲ್ಲಿ ಬರದ ಛಾಯೆ ಮುನ್ಸೂಚನೆ ಇತ್ತು. ಆದರೆ ಸರಕಾರ ಗ್ಯಾರಂಟಿಗಳ ಅನುಷ್ಠಾನದಲ್ಲಿ ಕೇಂದ್ರೀಕೃತಗೊಂಡಿತು. ಈಗ ಬರದಿಂದ ರೈತರು ತತ್ತರಿಸಿದ್ದಾರೆ. ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ ಪರಿಹಾರ ಘೋಷಣೆ ಮಾಡುತ್ತಿಲ್ಲ. ಸರಕಾರದಲ್ಲಿ ದುಡ್ಡು ಇದೆಯೇ ಇಲ್ಲವೋ ಎಂಬುದು ಜನರಿಗೆ ಗೊತ್ತಾಗಬೇಕಿದೆ. ಈ ಹಿನ್ನೆಲೆಯಲ್ಲಿ ಶ್ವೇತಪತ್ರ ಹೊರಡಿಸಬೇಕೆಂದು ವಿಪಕ್ಷ ನಾಯಕ ಆರ್‌. ಅಶೋಕ್‌ ಆಗ್ರಹಿಸಿದರು.

ವಿಧಾನಸಭೆಯಲ್ಲಿ ಗುರುವಾರ ನಿಯಮ 69ರಡಿ ಬರಗಾಲದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಎಲ್ಲದಕ್ಕೂ ಕೇಂದ್ರದ ಕಡೆಗೆ ಬೊಟ್ಟು ತೋರಿಸುತ್ತೀರಿ. ಆದರೆ ನಮ್ಮ ಅವಧಿಯಲ್ಲಿ ಕೇಂದ್ರದ ಪರಿಹಾರಕ್ಕೆ ಕಾಯಲೇ ಇಲ್ಲ. ಮುಂಚಿತವಾಗಿಯೇ ಪರಿಹಾರ ಘೋಷಣೆ ಮಾಡಿದ್ದೆವು. ನಾವು ಪರಿಹಾರ ನೀಡಿದ ನಾಲ್ಕು ತಿಂಗಳ ಬಳಿಕ ಕೇಂದ್ರದಿಂದ ಪರಿಹಾರ ಬಂದಿತು. ಹೀಗೆ ಮಾಡಲು ನಿಮಗೇನು ಧಾಡಿ ಎಂದು ತರಾಟೆಗೆ ತೆಗೆದುಕೊಂಡರು.

ಪ್ರತಿ ಹಂತದಲ್ಲೂ ಕೇಂದ್ರದ ಮೇಲೆ ಗೂಬೆ ಕೂರಿಸಲಾಗುತ್ತದೆ. ಆದರೆ 2006ರಿಂದ 2014ರ ವರೆಗೆ ರಾಷ್ಟ್ರೀಯ ವಿಪತ್ತು ಸ್ಪಂದನಾ ನಿಧಿ ಅಡಿ ಬಂದ ಅನುದಾನ 3,233 ಕೋಟಿ ರೂ. ಅನಂತರದ ಅವಧಿಯಲ್ಲಿ 16,603 ಕೋಟಿ ರೂ. ಅಂದರೆ ಹೆಚ್ಚು-ಕಡಿಮೆ ನಾಲ್ಕುಪಟ್ಟು ಬಂದಿದೆ ಎಂದು ಅಂಕಿಅಂಶಗಳನ್ನು ನೀಡಿದರು.

ಗ್ಯಾರಂಟಿ ಉತ್ಸಾಹ ಬರ ಪರಿಹಾರದಲ್ಲಿಲ್ಲ; ಎಚ್ಡಿಕೆ
ಖಜಾನೆ ತುಂಬಿಸುವ ಅನುಭವ ಉಳ್ಳವರು ಈ ಸರಕಾರದಲ್ಲಿದ್ದಾರೆ. ಹೀಗಿರುವಾಗ ಪರಿಹಾರ ನೀಡಲು ಯಾಕೆ ಹಿಂದೇಟು? ಗ್ಯಾರಂಟಿ ಅನುಷ್ಠಾನದ ಮೂಲಕ ನುಡಿದಂತೆ ನಡೆದಿದ್ದೇವೆ ಎಂದು ಸಂದೇಶ ನೀಡುವ ಉತ್ಸಾಹ ರೈತರ ವಿಚಾರದಲ್ಲಿ ಕಾಣುತ್ತಿಲ್ಲ ಎಂದು ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು. ರೈತರಿಗೆ ನೀಡಲಾಗುತ್ತಿರುವ 2 ಸಾವಿರ ರೂ. ಪರಿಹಾರಕ್ಕೆ ರೈತರ ನೋಂದಣಿ ಮತ್ತು ಏಕೀಕೃತ ಫ‌ಲಾನುಭವಿ ಮಾಹಿತಿ ವ್ಯವಸ್ಥೆ (ಫ‌ೂ›ಟ್‌ ಐಡಿ) ಅಡಿ ಕಡ್ಡಾಯಗೊಳಿಸಲಾಗಿದೆ. ಈ ಕ್ರಮದಿಂದ ಅರ್ಧಕ್ಕರ್ಧ ರೈತರು ವಂಚಿತರಾಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

31 ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಸುಮಾರು 800 ಕೋಟಿ ರೂ. ಇದೆ. ಆದರೆ ಎನ್‌ಡಿಆರ್‌ಎಫ್ ನಿಯಮದ ಪ್ರಕಾರ ಆ ಹಣವನ್ನು ಬಳಸಿಕೊಳ್ಳಲು ಬರುವುದಿಲ್ಲವಂತೆ. ಇದನ್ನು ಸ್ವತಃ ಜಿಲ್ಲಾಧಿಕಾರಿಗಳು, ತಹಶೀಲ್ದಾರ್‌ಗಳು ಸಭೆ ವೇಳೆ ನನಗೆ ಹೇಳಿದರು. ಆ ಹಣ ಯಾವುದಕ್ಕೂ ಬರುವುದಿಲ್ಲ. ಗಂಧದಕಡ್ಡಿ ಹಚ್ಚಿ ಪೂಜೆ ಮಾಡಬೇಕಷ್ಟೇ. –ಎಚ್‌.ಡಿ.ರೇವಣ್ಣ,
ಜೆಡಿಎಸ್‌ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next