ಚಿಕ್ಕಬಳ್ಳಾಪುರ: ದಶಕಗಳ ಬಳಿಕ ಕಬ್ಬು ಬೆಳೆಯಲು ವಿಶೇಷ ಆಸಕ್ತಿ ತೋರಿ ಭರದಿಂದ ತಯಾರಿ ನಡೆಸುತ್ತಿದ್ದ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಬರ ತಣ್ಣೀರು ಎರಚಿದ್ದು, ಕಬ್ಬು ನಾಟಿಗೆ ರೈತರು ಹಿಂದೆ ಮುಂದೆ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು… ಕಾಲಕ್ಕೆ ಇಡೀ ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ವಾಣಿಜ್ಯ ಬೆಳೆಯಾಗಿ ಕಬ್ಬು ಬೆಳೆಯುವುದರಲ್ಲಿ ಮುಂಚೂಣಿಯಲ್ಲಿದ್ದ ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿ ಸತತ ಎರಡು, ಮೂರು ವರ್ಷ ಬಿದ್ದ ಉತ್ತಮ ಮಳೆಯಿಂದ ಉತ್ತೇಜನಗೊಂಡು ಕಬ್ಬು ಬೆಳೆಯಲು ಮುಂದಾಗಿದ್ದ ರೈತರ ಆಸೆಗೆ ಬರ ತಣ್ಣೀರು ಎರಚಿದೆ.
ಬರದ ಆತಂಕ: ಕಬ್ಬು ಹೆಚ್ಚು ನೀರು ಬೇಡುವ ಬೆಳೆ ಹೀಗಾಗಿ ಹಲವು ವರ್ಷಗಳ ಬಳಿಕ ಮತ್ತೆ ಕಬ್ಬು ಬೆಳೆಯುವ ಆಸೆಯೊಂದಿಗೆ ಸಾಲ ಸೂಲ ಮಾಡಿ ಕಬ್ಬು ನಾಟಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಗೌರಿಬಿದನೂರು ರೈತರಿಗೆ ಮಳೆಯ ಆಟೋಟ ಆತಂಕ ತಂದಿದೆ. ಇಡೀ ಜಿಲ್ಲೆಯಲ್ಲಿ ಗೌರಿಬಿದನೂರು ತಾಲೂಕಿನಲ್ಲಿ ಮಾತ್ರ ಕಬ್ಬು ಬೆಳೆಯಲಾಗುತ್ತಿತ್ತು. ಇಲ್ಲಿನ ಸಿರಗುಪ್ಪ ಸಕ್ಕರೆ ಕಾರ್ಖಾನೆ ರಾಜ್ಯದಲ್ಲಿ ಹೆಚ್ಚು ಹೆಸರುವಾಸಿ ಆಗಿತ್ತು. 1988 ರಲ್ಲಿ ಸಕ್ಕರೆ ಕಾರ್ಖಾನೆ ಆರಂಭಗೊಂಡು ಈ ಭಾಗದ ಸಾವಿರಾರು ಕಬ್ಬು ಬೆಳೆಗಾರರಿಗೆ ಜೀವನದ ಆಸರೆಯಾಗಿ ಪರಿಣಮಿಸಿತ್ತು. ಆದರೆ, ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ದಶಕಗಳ ಕಾಲ ತೀವ್ರ ಬರಗಾಲಕ್ಕೆ ಜಿಲ್ಲೆ ತುತ್ತಾಗಿದ್ದರ ಪರಿಣಾಮ ಈ ಭಾಗದಲ್ಲಿ ಕಬ್ಬು ಬೆಳೆ ಉತ್ಪಾದನೆ ಕುಸಿತ ಕಂಡಿತು. ಅಲ್ಲದೇ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಆರ್ಥಿಕ ದುಸ್ಥಿತಿಗೆ ಇಳಿದ ಕಾರಣ 2001 ರಲ್ಲಿ ಕಾರ್ಖಾನೆ ಬಾಗಿಲು ಮುಚ್ಚಿತು. ಬಳಿಕ ಮೂರು ವರ್ಷದಿಂದ ಜಿಲ್ಲೆಯಲ್ಲಿ ವರ್ಷಾಧಾರೆ ಅನ್ನದಾತರದಲ್ಲಿ ಹೊಸ ಭರವಸೆ ಮೂಡಿಸಿದ್ದರಿಂದ ಮತ್ತೆ ಗೌರಿಬಿದನೂರಲ್ಲಿ ಕಬ್ಬು ಬೆಳೆಯಲು ರೈತರು ಆಸಕ್ತಿ ವಹಿಸಿದ್ದರು. ವಿಶೇಷವಾಗಿ ಕ್ಷೇತ್ರದ ಶಾಸಕರಾಗಿದ್ದ ಎನ್.ಎಚ್.ಶಿವಶಂಕರರೆಡ್ಡಿ ಕೂಡ ಕಬ್ಬು ಬೆಳೆಯುವ ರೈತರಿಗೆ ಪ್ರೋತ್ಸಾಹ ನೀಡಿ ಡಿಸಿಸಿ ಬ್ಯಾಂಕ್‌ನಿಂದ ಸಾಲ ಕೊಡಿಸಿದ್ದರು.
ಮಂಡ್ಯ, ಬೆಳಗಾವಿಯಲ್ಲಿ ಕಬ್ಬು ಬೆಳೆ ಅಧ್ಯಯನ:
ಕಳೆದ ಸಾಲಿನಲ್ಲಿ ಗೌರಿಬಿದನೂರು ಶಾಸಕರಾಗಿದ್ದ ಎನ್.ಎಚ್.ಶಿವಶಂಕರರೆಡ್ಡಿ ಗೌರಿಬಿದನೂರು ತಾಲೂಕಿನಲ್ಲಿ ಮತ್ತೆ ರೈತರನ್ನು ಕಬ್ಬು ಬೆಳೆಯಲು ಪ್ರೇರೇಪಿಸಿ ಬೆಳಗಾವಿ, ಮಂಡ್ಯ ಜಿಲ್ಲೆಗಳಲ್ಲಿ ಕಬ್ಬು ಬೆಳೆ ಅಧ್ಯಯನಕ್ಕೆ ನೂರಾರು ರೈತರನ್ನು ತಮ್ಮ ನೇತೃತ್ವದಲ್ಲಿ ವಾರಗಟ್ಟಲೇ ಕರೆದುಕೊಂಡು ಹೋಗಿ ಕಬ್ಬು ಬೆಳೆಯುವ ವಿಧಾನ, ಕೊಯ್ಲು, ಮಾರಾಟದ ಬಗ್ಗೆ ಕಬ್ಬು ಬೆಳೆಗಾರರಿಂದ ಪ್ರಾತ್ಯಕ್ಷಿಕೆ ಕೊಡಿಸಿದ್ದರು. ವಿಜ್ಞಾನಿಗಳಿಂದಲೂ ಅರಿವು ಮೂಡಿಸಿದ್ದರು. ಆದರೆ ಈಗ ಜಿಲ್ಲೆಗೆ ಅನಿರೀಕ್ಷಿತವಾಗಿ ಕಾಡುತ್ತಿರುವ ಬರದಿಂದ ಕಬ್ಬು ಬೆಳೆಯುವ ರೈತರು ಹಿಂದೆ ಮುಂದೆ ನೋಡುವಂತಾಗಿದೆ.
ಮಾಜಿ ಕೃಷಿ ಸಚಿವ ಶಿವಶಂಕರರೆಡ್ಡಿ ಹೇಳಿದ್ದೇನು?:
ಗೌರಿಬಿದನೂರಲ್ಲಿ ಕಬ್ಬು ವಾಣಿಜ್ಯ ಬೆಳೆಯಾಗಿತ್ತು. ಮತ್ತೆ ತಾಲೂಕಿನಲ್ಲಿ ಕಬ್ಬು ಬೆಳೆದು ತಾಲೂಕಿನಲ್ಲಿ ಸಕ್ಕರೆ ಕಾರ್ಖಾನೆ ಪುನಾರಂಭಿಸಬೇಕೆಂಬ ಒತ್ತಾಸೆಯೊಂದಿಗೆ ರೈತರ ಮನವೊಲಿಸಿ ಕಬ್ಬು ಬೆಳೆಯಲು ಅರಿವು ಮೂಡಿಸಲಾಗಿತ್ತು. ಸದ್ಯ 500 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಇದೆ. ಆದರೆ ಆರೇಳು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆದರೆ ಇಲ್ಲಿಯೆ ಕಾರ್ಖಾನೆ ತೆರೆಯಬಹುದು. ಸದ್ಯ ಮಳೆ ಮತ್ತೆ ಕ್ಷೀಣಿಸಿದೆ. ಗೌರಿಬಿದನೂರಿಗೆ ವರ್ಷಾಂತ್ಯಕ್ಕೆ ಎತ್ತಿನಹೊಳೆ ನೀರು ಹರಿಯುವ ವಿಶ್ವಾಸವಿದೆ ಎನ್ನುತ್ತಾರೆ ಮಾಜಿ ಕೃಷಿ ಸಚಿವರಾದ ಗೌರಿಬಿದನೂರಿನ ಎನ್.ಎಚ್.ಶಿವಶಂಕರರೆಡ್ಡಿ.
-ಕಾಗತಿ ನಾಗರಾಜಪ್ಪ