ರಾಮನಗರ: ಜಿಲ್ಲೆಯ ರೈತರ ಪ್ರಮುಖ ಕಸುಬಾಗಿರುವ ಹೈನೋದ್ಯಮದ ಮೇಲೆ ಬರ ಗಂಭೀರ ಪರಿಣಾಮ ಬೀರಲಿದೆಯಾ? ಹಿಂಗಾರು ಮತ್ತು ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ರೈತರಲ್ಲಿ ಇಂಥದ್ದೊಂದು ಆತಂಕ ಎದುರಾಗಿದೆ.
ರಾಮನಗರ ಜಿಲ್ಲೆಯ ರೈತರ ಪ್ರಮುಖ ಕಸುಬಿನಲ್ಲಿ ಹೈನೋದ್ಯಮವೂ ಒಂದಾಗಿದ್ದು, ಜಿಲ್ಲೆಯ 5 ತಾಲೂಕುಗಳ ವ್ಯಾಪ್ತಿಯಲ್ಲಿ ಪ್ರತಿದಿನ 8.20 ಲಕ್ಷ ಲೀ. ಹಾಲು ಉತ್ಪಾದನೆ ಮಾಡುತ್ತಿದ್ದು, ಬೆಂಗಳೂರು ಹಾಲು ಒಕ್ಕೂಟಕ್ಕೆ ಅತಿಹೆಚ್ಚು ಹಾಲು ಪೂರೈಕೆ ರಾಮನಗರ ಜಿಲ್ಲೆಯಿಂದಲೇ ಆಗುತ್ತಿದೆ. ಬರ ಹೈನೋದ್ಯಮದ ಮೇಲೆ ನೇರ ಪರಿಣಾಮ ಬೀರಲಿದೆ.
21 ವಾರವಷ್ಟೇ ಮೇವು: ಜಿಲ್ಲೆಯಲ್ಲಿ 3.84 ಲಕ್ಷ ಹಸು ಮತ್ತು ಎಮ್ಮೆಗಳಿದ್ದು, ಇವುಗಳ ಪೈಕಿ 2 ಲಕ್ಷ ಕ್ಕೂ ಹೆಚ್ಚು ಹಸು ಮತ್ತು ಎಮ್ಮೆಗಳು ಹಾಲುಕರೆಯುತ್ತಿವೆ. ಹಾಲು ಕರೆಯುವ ಹಸುವಿಗೆ ವೈದ್ಯರ ಲೆಕ್ಕಾಚಾರದ ಪ್ರಕಾರ ಪ್ರತಿದಿನ 25 ಕೇಜಿ ಹಸಿರು ಮೇವು, 6 ಕೇಜಿಯಷ್ಟು ಒಣಮೇವಿನ ಅವಶ್ಯಕತೆಯಿದೆ. ಪ್ರಸ್ತುತ ಜಿಲ್ಲೆಯಲ್ಲಿ 2.92 ಲಕ್ಷ ಮೆಟ್ರಿಕ್ ಟನ್ ಮೇವಿದ್ದು, ಈ ಮೇವು ಮುಂದಿನ 21ವಾರಗಳಿಗೆ ಸಾಕಾಗಲಿದೆ ಎಂದು ಪಶುಪಾಲನಾ ಇಲಾಖೆ ಅಧಿಕಾರಿಗಳು ಅಂದಾಜು ಮಾಡಿದ್ದಾರೆ. ಜನವರಿ ಅಂತ್ಯದ ವರೆಗೆ ಈ ಮೇವು ಸಾಕಾಗಲಿದ್ದು ಮುಂದೇನು ಎಂಬ ಚಿಂತೆ ಎದುರಾಗಿದೆ.
ಸಂಕಷ್ಟಕ್ಕೆ ಸಿಲುಕಿರುವ ಹೈನೋದ್ಯಮ: ಈಗಾಗಲೇ ಹೈನೋದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಪಶುಆಹಾರದ ಬೆಲೆ ಹೆಚ್ಚಳ, ಪಶುವೈದ್ಯಕೀಯ ಸೇವೆಗಳು ದುಬಾರಿಯಾಗಿರುವುದು, ಪದೇ ಪದೆ ಹಾಲು ಒಕ್ಕೂಟ ಹಾಲಿನ ಬೆಲೆ ಕಡಿತ ಮಾಡುತ್ತಿರುವುದು ಹೀಗೆ ಸಾಲು ಸಾಲು ಸವಾಲುಗಳ ನಡುವೆ ಹೈನುಗಾರಿಕೆ ಸಂಕಷ್ಟಕ್ಕೆ ಸಿಲುಕಿದ್ದು, ಬರದಿಂದಾಗಿ ಸಮರ್ಪಕ ಮೇವು ಉತ್ಪಾದನೆಯಾಗದೆ ರೈತರು ದುಬಾರಿ ಬೆಲೆಕೊಟ್ಟು ಮೇವನ್ನು ಖರೀದಿಮಾಡುವ ಪರಿಸ್ಥಿತಿ ನಿರ್ಮಾಣವಾಗಿ ರುವುದು ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ಹಾಲು ಉತ್ಪಾದನೆಯೂ ಕಡಿಮೆ: 2022ರಲ್ಲಿ ರಾಮನಗರ ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಪ್ರಮಾಣ 10 ಲಕ್ಷ ಲೀ. ದಾಟಿತ್ತು. ಆದರೆ, ಇದೀಗ 8.20 ಲಕ್ಷ ಲೀ.ಗೆ ಕುಸಿದಿದೆ. ಇನ್ನು ಬೆಂಗಳೂರು ಹಾಲು ಒಕ್ಕೂಟ ಪ್ರತಿದಿನ 19 ಲಕ್ಷ ಲೀ. ಹಾಲು ಉತ್ಪಾದನೆ ಮಾಡುತ್ತಿದ್ದು, ಇದೀಗ 14.50 ಲಕ್ಷ ಲೀ.ಗೆ ಕುಸಿದಿದೆ. ಕಳೆದ ಒಂದು ತಿಂಗಳಿಂದ 50 ಸಾವಿರ ಲೀ.ನಷ್ಟು ಹಾಲು ಕಡಿಮೆಯಾಗಿದ್ದು, ಬೇಸಿಗೆ ವೇಳೆಗೆ ಈ ಪ್ರಮಾಣ ಇನ್ನಷ್ಟು ಕಡಿಮೆಯಾಗಲಿದೆ ಎಂದು ಬಮೂಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೇವು ತರುವುದೇ ಸವಾಲು: ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ರೈತರಿಗೂ ತಾವು ಸಾಕುವ ರಾಸುಗಳ ನಡುವೆ ಒಂದು ರೀತಿ ಬಾಂಧವ್ಯ ಬೆಳೆದಿರುತ್ತದೆ. ರಾಸುಗಳು ಮೇವು ಇಲ್ಲದೆ ಕೊಟ್ಟಿಗೆಯಲ್ಲಿ ಇರುವುದನ್ನು ನೋಡಲಾಗದ ರೈತ ವಿಷಾದದಿಂದ ಹಸುಗಳನ್ನು ಮಾರಾಟ ಮಾಡುತ್ತಿದ್ದಾನೆ. ಹಸುಗಳಿಗೆ ಮೇವು ಹೊಂದಿಸುವುದು ರೈತನಿಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಹತ್ತಾರು ಕಿಮೀ ದೂರದಿಂದ ಪ್ರತಿನಿತ್ಯ ಹಸುಗಳಿಗೆ ಮೇವು ತರುವ ಪರಿಸ್ಥಿತಿ ನಿರ್ಮಾಣವಾಗಿದೆ.
– ಸು.ನಾ.ನಂದಕುಮಾರ್