Advertisement

ಬರಗಾಲದ ಸಂಕಷ್ಟ- ಬತ್ತಿದ ಕೆರೆಗಳು; ಮೀನು ಉತ್ಪಾದನೆಗೆ ಬರ

04:04 PM Mar 20, 2024 | Team Udayavani |

ಉದಯವಾಣಿ ಸಮಾಚಾರ
ಬೆಳಗಾವಿ: ರಾಜ್ಯದಲ್ಲಿ ತಲೆದೋರಿರುವ ಬರಗಾಲದ ಹೊಡೆತ ಮೀನು ಸಾಕಾಣಿಕೆ ಮೇಲೂ ಬಿದ್ದಿದ್ದು, ಬಹುತೇಕ ಕೆರೆಗಳಲ್ಲಿ
ನೀರಿನ ಅಭಾವದಿಂದ ಮೀನು ಉತ್ಪಾದನೆ ಇಳಿಮುಖಗೊಂಡಿದೆ. ಮೀನು ಸಾಕಾಣಿಕೆ ಮಾಡುವ ಕುಟುಂಬಗಳು ಸಂಕಷ್ಟಕ್ಕೀಡಾಗಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಕೇವಲ 127 ಕೆರೆಗಳಲ್ಲಿ ಮೀನಿನ ಮರಿ ಬಿತ್ತನೆ ಮಾಡಲಾಗಿದೆ.

Advertisement

ಕಳೆದ ವರ್ಷ ಮೀನು ಉತ್ಪಾದನೆಯಲ್ಲಿ ಆದ ಲಾಭ ಈ ಬಾರಿ ಸಿಗುವುದು ಅಸಾಧ್ಯವಾಗಿದೆ. ಕೆರೆಗಳಲ್ಲಿ ನೀರಿನ ಕೊರತೆ ಮೀನುಗಳ ಹುಟ್ಟು ಹಾಗೂ ಬೆಳವಣಿಗೆ ಮೇಲೆ ಭಾರೀ ಪರಿಣಾಮ ಬೀರಿದೆ. ಮತ್ಸ್ಯೋದ್ಯೋಗವನ್ನೇ ನಂಬಿಕೊಂಡು ಬದುಕು ಸಾಗಿಸುತ್ತಿರುವ ಕುಟುಂಬಗಳ ಮೇಲೆ ಭಾರೀ ಹೊಡೆತ ಬಿದ್ದಿದೆ. ಮೀನುಗಾರಿಕೆ ಇಲಾಖೆಯ ಬೆಳಗಾವಿ ವಿಭಾಗವು ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳನ್ನು ಒಳಗೊಂಡಿದೆ. 2023-24ರಲ್ಲಿ 785 ಕೆರೆಗಳಲ್ಲಿ ಮೀನು ಸಾಕಾಣಿಕೆ ಮಾಡಲು ಉದ್ದೇಶ ಹೊಂದಲಾಗಿತ್ತು.

ಆದರೆ ನೀರಿನ ಕೊರತೆ, ಬರಗಾಲದ ಸಂಕಷ್ಟದಿಂದ ಕೇವಲ 522 ಕೆರೆಗಳಲ್ಲಿ ಮೀನಿನ ಮರಿಗಳ ಬಿತ್ತನೆ ಮಾಡಲಾಗಿದೆ. ಹಾವೇರಿ ಜಿಲ್ಲೆಯ ಅತಿ ಹೆಚ್ಚು 179 ಕೆರೆಗಳಲ್ಲಿ ಮರಿಗಳನ್ನು ಬಿಡಲಾಗಿದೆ. ಗದಗ ಜಿಲ್ಲೆಯಯಲ್ಲಿ ಅತಿ ಕಡಿಮೆ ಎಂದರೆ 34 ಕೆರೆಗಳಲ್ಲಿ ಮರಿಗಳ ಬಿತ್ತನೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ 127, ಧಾರವಾಡದಲ್ಲಿ 105, ವಿಜಯಪುರ 48, ಬಾಗಲಕೋಟೆ ಜಿಲ್ಲೆಯ 34 ಕೆರೆಗಳಲ್ಲಿ ಮೀನಿನ ಮರಿಗಳನ್ನು ಬಿಡಲಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅತಿ ಕಡಿಮೆ ಕೆರೆಗಳಲ್ಲಿ ಮೀನಿನ ಮರಿಗಳನ್ನು ಬಿಡಲಾಗಿದೆ. ಅಂದುಕೊಂಡಷ್ಟು ಮೀನಿನ ಉತ್ಪಾದನೆ ಆಗುವುದಿಲ್ಲ. 2022-23ರಲ್ಲಿ 618 ಕೆರೆಗಳಲ್ಲಿ 3.33 ಟನ್‌ ಮೀನಿನ ಮರಿಗಳನ್ನು ಬಿಡಲಾಗಿತ್ತು. ಅದರಿಂದ 1,03978 ಟನ್‌ ಮೀನಿನ ಉತ್ಪಾದನೆ ಆಗಿತ್ತು. ಈ ವರ್ಷ 4.47 ಕೋಟಿ ಮೀನಿನ ಮರಿಗಳನ್ನು ಬಿಟ್ಟರೂ 1.26 ಲಕ್ಷ ಟನ್‌ ಮೀನು ಉತ್ಪಾದನೆ ಆಗುವ ಉದ್ದೇಶ ಇದೆ. ಈವರೆಗೆ 3.13 ಕೋಟಿ ಮೀನುಗಳ ಪೈಕಿ 70 ಸಾವಿರ ಟನ್‌ ಉತ್ಪಾದನೆ ಆಗಿದೆ.

ಈ ವರ್ಷದ ಇನ್ನು ಕೇವಲ ಎರಡು ತಿಂಗಳು ಬಾಕಿ ಇರುವಾಗ ಶೇ.55ರಷ್ಟು ಮೀನು ಉತ್ಪಾದನೆ ಮಾತ್ರ ಆಗಿದೆ. ಮೀನು
ಸಾಕಾಣಿಕೆಗಾಗಿ ಜಿಲ್ಲೆಯ ಇನ್ನೂ ಕೆಲ ಕೆರೆಗಳನ್ನು ಬಾಡಿಗೆ ಮೇಲೆ ತೆಗೆದುಕೊಳ್ಳಲಾಗುತ್ತಿದೆ. ಆದರೆ ಬರಗಾಲದಿಂದಾಗಿ ನೀರಿನ ಸಮಸ್ಯೆ ಉದ್ಭವಿಸಿದ್ದರಿಂದ ಮೀನಿನ ಉತ್ಪಾದನೆಯಲ್ಲಿ ಕೊರತೆ ಉಂಟಾಗಿದೆ.

Advertisement

ಬರದ ಹೊಡೆತದ ಜತೆಗೆ ಮಾರುಕಟ್ಟೆಯಲ್ಲಿ ಮೀನಿಗೆ ದರವೂ ಸಿಗುತ್ತಿಲ್ಲ. ನೀರಿನ ಪ್ರಮಾಣ ಕಡಿಮೆ ಇದೆ ಎಂಬ ಕಾರಣಕ್ಕೆ ಮೀನುಗಳನ್ನು ತೂಕಕ್ಕಿಂತ ಮೊದಲೇ ಹೊರಗೆ ತೆಗೆಯಲಾಗುತ್ತಿದೆ. ಹೀಗಾಗಿ ದರ ಅಂದುಕೊಂಡಷ್ಟು ಸಿಗುತ್ತಿಲ್ಲ. ಪ್ರತಿ ಕೆಜಿಗೆ ಏನಿಲ್ಲವೆಂದರೂ 100-120 ರೂ. ಸಿಗುತ್ತಿದ್ದ ದರ 50-70 ರೂ. ಸಿಗುತ್ತಿದೆ. ಒಂದು ಎಕರೆಯಲ್ಲಿ ಸಾಮಾನ್ಯವಾಗಿ 1.25 ಲಕ್ಷ ರೂ. ಆದಾಯ ಬರುತ್ತಿತ್ತು. ಈಗ ಅದರ ಪ್ರಮಾಣ ಕಡಿಮೆ ಆಗಿದೆ ಎನ್ನುತ್ತಿದ್ದಾರೆ ಮೀನು ಸಾಕಾಣಿಕೆದಾರರು.

ಬರಗಾಲದ ಸಂಕಷ್ಟದಿಂದಾಗಿ ಮೀನಿನ ಉತ್ಪಾದನೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಉತ್ಪಾದನೆ ಕಡಿಮೆ ಆಗಲಿದೆ. ಆದರೂ ಉತ್ಪಾದನೆ ಅಪಾಯಕಾರಿ ಸ್ಥಿತಿ ಏನಿಲ್ಲ.
ಪಿ.ಸುಧೀರ, ಜಂಟಿ ನಿರ್ದೇಶಕರು, ಮೀನುಗಾರಿಕೆ ಇಲಾಖೆ, ಬೆಳಗಾವಿ

*ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next