ಬೆಂಗಳೂರು: ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಅಗತ್ಯ ಪ್ರಮಾಣದಲ್ಲಿ ಮೇವು ಪೂರೈಸಲು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ರಾಜ್ಯದಲ್ಲಿ ಒಟ್ಟು 21 ತಾತ್ಕಾಲಿಕ ಗೋಶಾಲೆಗಳನ್ನು ತೆರೆಯಲಾಗಿದೆ. ಅಲ್ಲಿ 897.34 ಟನ್ ಮೇವು ದಾಸ್ತಾನು ಮಾಡಲಾಗಿದ್ದು, 14,816 ಜಾನುವಾರುಗಳಿಗೆ ಅಶ್ರಯ ನೀಡಲಾಗಿದೆ ಎಂದು ರಾಜ್ಯ ಸರ್ಕಾರ ಮಂಗಳವಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಈ ಕುರಿತಂತೆ ರಾಜ್ಯ ಕಾನೂನು ಸೇವಾ ಸಮಿತಿ ಹಾಗೂ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚೇಳೂರು ಗ್ರಾಮದ ಎ. ಮಲ್ಲಿಕಾರ್ಜುನ ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ.ಎಸ್. ಸುಜಾತ ಹಾಗೂ ನ್ಯಾ. ಎಸ್.ಜಿ. ಪಂಡಿತ್ ಅವರಿದ್ದ ರಜಾ ಕಾಲದ ವಿಭಾಗೀಯ ನ್ಯಾಯಪೀಠಕ್ಕೆ ಸರ್ಕಾರ ವರದಿ ಸಲ್ಲಿಸಿತು.
ಬರದ ಪರಿಣಾಮ ಮೇವು ಕೊರತೆ ಹೆಚ್ಚಾಗಿರುವ ಪ್ರದೇಶದಲ್ಲಿ ತಾತ್ಕಾಲಿಕ ಗೋಶಾಲೆ ಆರಂಭಿಸಲಾಗಿದ್ದು, ಈ ಕುರಿತು ಸ್ಥಳೀಯ ಮಟ್ಟದಲ್ಲಿ ಜಿಲ್ಲಾಡಳಿತ ವ್ಯಾಪಕ ಪ್ರಚಾರ ನೀಡಿದೆ. ಗೋಶಾಲೆಯಲ್ಲಿರುವ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಉಚಿತವಾಗಿ ಕುಡಿಯುವ ನೀರು ಮತ್ತು ಮೇವು ಒದಗಿಸಲಾಗುತ್ತದೆ. 2019ರ ಮೇ 17ರವರೆಗೆ ಒಟ್ಟು 21 ತಾತ್ಕಾಲಿಕ ಗೋಶಾಲೆ ಆರಂಭಿಸಿದ್ದು, ಈ ಗೋಶಾಲೆಗಳಲ್ಲಿ 897.34 ಟನ್ ಮೇವು ದಾಸ್ತಾನು ಮಾಡಲಾಗಿದೆ. ಈಗಾಗಲೇ 306.03 ಟನ್ ಮೇವು ಜಾನುವಾರುಗಳಿಗೆ ಪೂರೈಸಲಾಗಿದೆ. ಇಲ್ಲಿ 14,816 ಜಾನುವಾರುಗಳಿಗೆ ಆಶ್ರಯ ನೀಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಮೇವಿನ ಪರಿಸ್ಥಿತಿ ಬಗ್ಗೆ ಜಿಲ್ಲಾಡಳಿತ ನಿತ್ಯ ಮೇಲ್ವಿಚಾರಣೆ ನಡೆಸುತ್ತಿದೆ. ಗೋಶಾಲೆಗಳಿರುವ ಜಾನುವಾರುಗಳಿಗೆ ಅಗತ್ಯ ವೈದ್ಯಕೀಯ ಸೌಲಭ್ಯ ಕಲ್ಪಿಸಲಾಗುತ್ತಿದೆ. 2019ರ ಮಾರ್ಚ್ 1 ರವರೆಗೆ ರಾಜ್ಯದಲ್ಲಿ 20 ಮೇವು ಬ್ಯಾಂಕ್‌ಗಳಿದ್ದವು. ಬರದ ಹಿನ್ನೆಲೆಯಲ್ಲಿ ಅದನ್ನು 183ಕ್ಕೆ ಹೆಚ್ಚಿಸಲಾಗಿದೆ. ಅದರಲ್ಲಿ 9,270.02 ಟನ್ ಮೇವು ದಾಸ್ತಾನು ಮಾಡಲಾಗಿದ್ದು, 6,879.92 ಟನ್ ಮೇವನ್ನು ಈಗಾಗಲೇ ಅಗತ್ಯವಿರುವ ರೈತರಿಗೆ ಸಬ್ಸಿಡಿ ದರದಲ್ಲಿ ಪ್ರತಿ ಕೆ.ಜಿ. ಗೆ 2 ರೂ. ನಂತೆ ವಿತರಿಸಲಾಗಿದೆ. ಅಗತ್ಯವಿದ್ದರೆ ಮತ್ತಷ್ಟು ಮೇವು ಬ್ಯಾಂಕ್ ಆರಂಭಿಸಲಾಗುವುದು ಎಂದು ವರದಿಯಲ್ಲಿ ವಿವರಿಸಲಾಗಿದೆ.
ವರದಿ ದಾಖಲಿಸಿಕೊಂಡ ನ್ಯಾಯಪೀಠ, ಅದನ್ನು ಪರಿಶೀಲಿಸಿ ಉತ್ತರಿಸುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಮೇ 29ಕ್ಕೆ ಮುಂದೂಡಿತು.