Advertisement

ಜೋಳ ಬೆಲೆ ಕುಸಿತಕ್ಕೆ ರೈತ ಕಂಗಾಲು

06:21 PM Feb 10, 2022 | Team Udayavani |

ಬೈಲಹೊಂಗಲ: ಅತಿವೃಷ್ಟ-ಅನಾವೃಷ್ಟಿ ಎರಡನ್ನೂ ಕಂಡ ರೈತರಿಗೆ ಈ ಬಾರಿ ಅತಿ ಹೆಚ್ಚು ಅತಿವೃಷ್ಟಿಯೇ ಬಾಧಿಸಿದೆ. ಹೌದು, ಪ್ರಕೃತಿ ವಿಕೋಪದ ಮುನಿಸು ರೈತರ ಮೇಲೆ ಪದೇ ಪದೇ ಆಗುತ್ತಿರುವುದರಿಂದ ಅನ್ನದಾತರು ಸಂಕಷ್ಟಕ್ಕೆ ಸುಳಿಯಿಂದ ಹೊರಬರಲು ಹೆಣಗುತ್ತಿದ್ದಾರೆ. ಇದರ ಮಧ್ಯೆ ಜೋಳದ ಧಾರಣೆ ಕೂಡ ಅನ್ನದಾತರಿಗೆ ತಲೆನೋವು ತಂದೊಡ್ಡಿದೆ.

Advertisement

ಕಳೆದ ಹಲವು ತಿಂಗಳಿಂದ ಜೋಳದ ಧಾರಣೆ ಕುಸಿತವಾಗಿದ್ದರಿಂದ ರೈತರು ಸಾಕಷ್ಟು ದಿನ ಜೋಳ ಮಾರಾಟವನ್ನೇ ಮುಂದೂಡಿದ್ದರು. ಆದರೆ ಎಷ್ಟೋ ದಿನ ಮನೆಯಲ್ಲಿಟ್ಟುಕೊಂಡು ದರ ಹೆಚ್ಚಳವಾಗುತ್ತದೆ ಎಂದು ನಿರೀಕ್ಷಿಸಿದರೂ ದರದಲ್ಲಿ ಮಿಸುಕಾಟ ಕಂಡುಬರದ ಕಾರಣ ರೈತರು ಕೈಗೆ ಬಂದ ಬೆಲೆಗೆ ಮಾರುವ ಸ್ಥಿತಿ ಎದುರಾಗಿದೆ.

ಹೆಚ್ಚು ಬಿತ್ತನೆ: ಬೈಲಹೊಂಗಲ ತಾಲೂಕಿನಲ್ಲಿ ಅತಿ ಹೆಚ್ಚು ಪ್ರದೇಶದಲ್ಲಿ ಬಿಳಿಜೋಳ ಬಿತ್ತಲಾಗುತ್ತದೆ. ಇಲ್ಲಿಯ ನೇಸರಗಿ ಸಮೀಪದ “ಮುರಕೀಬಾವಿ ಜೋಳ’ ಎಂದೇ ಪ್ರಸಿದ್ಧಿ ಪಡೆದಿದ್ದು, ಬೈಲಹೊಂಗಲ ಹಾಗೂ ಕಿತ್ತೂರ ತಾಲೂಕು ಸೇರಿ 18253 ಹೆಕ್ಟೇರ್‌ ಪ್ರದೇಶದಲ್ಲಿ ಜೋಳ ಬೆಳೆಯಲಾಗುತ್ತದೆ. ಬೈಲಹೊಂಗಲ ಭಾಗದಲ್ಲಿ 3800 ಹೆಕ್ಟೇರ್‌, ನೇಸರಗಿ ಭಾಗದಲ್ಲಿ 12,968 ಹೆಕ್ಟೇರ್‌ ಪ್ರದೇಶದಲ್ಲಿ ಜೋಳ ಬಿತ್ತಲಾಗುತ್ತದೆ.

ಲೆಕ್ಕಾಚಾರ ಬುಡಮೇಲು: ಕಳೆದ ಬಾರಿ ಈ ಭಾಗದಲ್ಲಿ ಮುಂಗಾರಿಯಲ್ಲಿ ಉತ್ತಮ ಜೋಳದ ಬೆಳೆ ಬಂದಿತ್ತು. ಹೀಗಾಗಿ ರೈತರು ಬಂದ ಫಸಲನ್ನು ಕಂಡು ಉತ್ತಮ ಆದಾಯ ಪಡೆಯಬಹುದೆನ್ನುವ ನಿರೀಕ್ಷೆಯಲ್ಲಿದ್ದರು. ಹೀಗಾಗಿ ಬಹುತೇಕ ರೈತರು ಜೋಳವನ್ನೇ ಮೂಲ ಬೆಳೆಯನ್ನಾಗಿ ಬೆಳೆದಿದ್ದು, ರೈತರ ನಿರೀಕ್ಷೆಯಲ್ಲ ಬುಡಮೇಲಾಗಿದೆ. ಇದೀಗ ಸೂಕ್ತ ಬೆಲೆ ಇಲ್ಲದೇ ರೈತರು ಕಡಿಮೆ ದರಕ್ಕೆ ಜೋಳ ಮಾರಾಟ ಮಾರಿ ಕೈ ತೊಳೆದುಕೊಳ್ಳುತ್ತಿದ್ದಾರೆ.

ಸದ್ಯ ಜೋಳದ ಮಾರಾಟ ದರ ಪ್ರತಿ ಕ್ವಿಂಟಲ್‌ಗೆ 2000-2400 ರೂ. ವರೆಗಿದೆ. ಕಳೆದ ವರ್ಷ ಕ್ವಿಂಟಲ್‌ಗೆ 2800-4000 ರೂ. ವರೆಗೆ ಜೋಳ ಮಾರಾಟವಾಗಿತ್ತು. ಜೋಳದ ಬೀಜದಲ್ಲೂ ಕೆಲವೆಡೆ ಗುಣಮಟ್ಟ ಇಲ್ಲದಿದ್ದರೆ ಬೆಲೆ ಕಡಿಮೆಯಾಗುತ್ತದೆ. ಆದರೆ ವಿಪರ್ಯಾಸವೆಂದರೆ ಈ ಬಾರಿ ಉತ್ತಮ ಗುಣಮಟ್ಟದ ಜೋಳಕ್ಕೂ ಬೆಲೆ ಇಲ್ಲದಂತಾಗಿದೆ. ನೇಸರಗಿಯಲ್ಲಿ ಪ್ರತಿ ಸೋಮವಾರ ನಡೆಯುವ ಸಂತೆಗೆ ಹಲವಾರು ಹಳ್ಳಿಗಳಿಂದ ಟ್ರಾಕ್ಟರ್‌, ಟಂಟಂ ಮೂಲಕ ಎಪಿಎಂಸಿಗೆ ಜೋಳ ಸೇರಿ ಮೊದಲಾದ ಉತ್ಪನ್ನ ತರಲಾಗುತ್ತಿದೆ. ಆದರೆ, ಬೆಲೆ ಕುಸಿತದಿಂದಾಗಿ ರೈತರು ಸಿಕ್ಕ ಬೆಲೆಗೆ ಮಾರಾಟ ಮಾಡುವ ಪರಿಸ್ಥಿತಿ ಇದೆ.

Advertisement

ಬಿತ್ತನೆಗೆ ಖರ್ಚೇ ಹೆಚ್ಚು: ಜೋಳದ ಬಿತ್ತನೆ ಬೀಜ, ಕೂಲಿಯಾಳು ಖರ್ಚು, ರಾಸಾಯನಿಕ ಗೊಬ್ಬರ, ಹುಳುಬಾಧೆ ನಿಯಂತ್ರಣಕ್ಕಾಗಿ ರೈತರು ಸಾವಿರಾರು ರೂ. ಖರ್ಚು ಮಾಡಿದ್ದಾರೆ. ಬೆಳೆ ಬೆಳೆದ ನಂತರ ಮಾರುಕಟ್ಟೆಯಲ್ಲಿ ಉತ್ತಮ ದರವಿಲ್ಲದೇ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಮುರಕೀಬಾವಿ ಜೋಳಕ್ಕೆ ಬೇಡಿಕೆ ಇದೆ.

ಬೆಳಗಾವಿ, ಸಾಂಬ್ರಾ, ಬೈಲಹೊಂಗಲ, ಯರಗಟ್ಟಿ, , ವಿಜಯಪುರ, ಬಾಗಲಕೋಟೆಗಳಿಂದ ಬಂದ ಜನ ಜೋಳ ಖರೀದಿಸುತ್ತಿದ್ದರು. ಆದರೀಗ ಸೂಕ್ತ ದರವಿಲ್ಲದೇ ಮಾರಾಟ ದರ ಕುಸಿತಕ್ಕೊಳಗಾಗಿದೆ. ಮುಂಗಾರಿ ಜೋಳ ಇದೀಗ ಕೊಯ್ಲಿಗೆ ಬಂದಿರುವುದರಿಂದ ಮನಸ್ಸಿಲ್ಲದ ಮನಸ್ಸಿನಿಂದ ರೈತರು ಸಿಕ್ಕ ದರಕ್ಕೆ ಮಾರಾಟ ಮಾಡುತ್ತಿದ್ದಾರೆಂದು ವರ್ತಕ ಪಾರೂಕ ನದಾಫ್‌ ತಿಳಿಸಿದ್ದಾರೆ.

ಪ್ರತಿ ವರ್ಷ ಬಾಗಲಕೋಟೆ, ಬೆಳಗಾವಿ ಕಡೆಯಿಂದ ವ್ಯಾಪಾರಿಗಳು ಬಂದು ಹೆಚ್ಚಿನ ಬೆಲೆಗೆ ಜೋಳ ಖರೀದಿಸುದ್ದರು. ಆದರೆ ಈ ಬಾರಿ ಬಾಗಲಕೋಟೆ, ವಿಜಯಪುರದ ಕಡೆ ಉತ್ತಮವಾಗಿ ಜೋಳ ಬಂದಿರುವುದೇ ಜೋಳದ ದರ ಕುಸಿತಕ್ಕೆ ಕಾರಣವಾಗಿದೆ.
∙ಎಸ್‌.ಎಸ್‌. ಅರಳಿಕಟ್ಟಿ,
ಎಪಿಎಂಸಿ ಕಾರ್ಯದರ್ಶಿ, ಬೈಲಹೊಂಗಲ

ಕೊರೊನಾಗಿಂತ ಮೊದಲು ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ ಜೋಳಕ್ಕೆ 4000 ರೂ. ವರೆಗೆ ಬೆಲೆ ಇತ್ತು. ಆದರೆ ನಂತರ ದರ ಕುಸಿತವಾಗಿದ್ದರಿಂದ ನಾವು ಮಾಡಿದ ಖರ್ಚು ಕೂಡ ತೆಗೆಯುವುದು ಕಷ್ಟವಾಗಿದೆ. ಸರ್ಕಾರ ನಮ್ಮ ನೆರವಿಗೆ ಬರಬೇಕು.
∙ಮಹಾಂತೇಶ ಹಿರೇಮಠ,
ರೈತ ಮುಖಂಡ, ಮೇಕಲಮರಡಿ ಗ್ರಾಮ

ಸಿ.ವೈ. ಮೆಣಶಿನಕಾಯಿ

Advertisement

Udayavani is now on Telegram. Click here to join our channel and stay updated with the latest news.

Next