ನವದೆಹಲಿ: ಪಾಕಿಸ್ತಾನದ ಕಡೆಯಿಂದ ಗಡಿ ದಾಟಿ ಬರುವ ಡ್ರೋನ್‌ಗಳ ಸಂಖ್ಯೆ 2022ರಲ್ಲಿ ದುಪ್ಪಟ್ಟಾಗಿದೆ. ಅಲ್ಲದೇ ವಾಯುಮಾರ್ಗದ ಮೂಲಕ ಮಾದಕವಸ್ತು, ಶಸ್ತ್ರಾಸ್ತ್ರಗಳನ್ನು ಸಾಗಿಸುವ ಪ್ರಕರಣಗಳು ಹೆಚ್ಚಿವೆ ಎಂದು ಗಡಿ ಭದ್ರತಾ ಪಡೆಯ(ಬಿಎಸ್‌ಎಫ್) ಪ್ರಧಾನ ಮಹಾನಿರ್ದೇಶಕ(ಡಿಜಿ) ಪಂಕಜ್ ಕುಮಾರ್ ಸಿಂಗ್ ಆತಂಕ ವ್ಯಕ್ತಪಡಿಸಿದರು.
“ಡ್ರೋನ್ ಚಲನವಲನಗಳನ್ನು ಪತ್ತೆಹಚ್ಚಲು ಇತ್ತೀಚೆಗೆ ದೆಹಲಿಯ ಬಿಎಸ್‌ಎಫ್ ಶಿಬಿರದಲ್ಲಿ ಅತ್ಯಾಧುನಿಕ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ. ಇದರ ಫಲಿತಾಂಶ ಧನಾತ್ಮಕವಾಗಿವೆ. ಇದರಿಂದ ಭದ್ರತಾ ಪಡೆಗಳು ಡ್ರೋನ್‌ಗಳ ಚಲನವಲನ ಹಾಗೂ ಅದರಲ್ಲಿ ಭಾಗಿಯಾಗಿರುವ ಅಪಾರಾಧಿಗಳ ಗುರುತು ಪತ್ತೆಹಚ್ಚುವುದು ಸಾಧ್ಯವಾಗಲಿದೆ,’ ಎಂದರು.