ಹೊಸನಗರ: ಅರಣ್ಯ ಇಲಾಖೆಗೆ ತಮ್ಮ ಪ್ರದೇಶವನ್ನು ನಿಖರವಾಗಿ ಗುರುತಿಸಿಕೊಳ್ಳುವುದೇ ದೊಡ್ಡ ಸಮಸ್ಯೆ. ಗಡಿ ಗುರುತಿಸುವಿಕೆಯಲ್ಲಿ ಲೋಪ.. ಸಾರ್ವಜನಿಕರ ತಕರಾರು.. ಇದಕ್ಕೆಲ್ಲ ಮುಕ್ತಿ ನೀಡಲು ಡ್ರೋಣ್ ಮೂಲಕ ಏರಿಯಲ್ ಸರ್ವೇ ಮಾಡಿದರೆ ಹೇಗೆ ಎಂಬ ಚಿಂತನೆ ಅರಣ್ಯ ಇಲಾಖೆಗೆ ಬಂದಿದೆ.
ಹಾಗಾಗಿ ಶಿವಮೊಗ್ಗ ವೃತ್ತ ಅರಣ್ಯ ಇಲಾಖೆಯ ಸಿಸಿಎಫ್ ಶ್ರೀನಿವಾಸಲು ವಿಶೇಷ ಆಸಕ್ತಿಯಿಂದಾಗಿ ಪ್ರಾಯೋಗಿಕವಾಗಿ ಡ್ರೋಣ್ ಬಳಸಿ ಸರ್ವೇ ನಡೆಸಿದೆ. ತಾಲೂಕಿನ ನಿಟ್ಟೂರು ಗ್ರಾಪಂ ವ್ಯಾಪ್ತಿಯ ಮಂಜಗಳಲೆ ಗ್ರಾಮದಲ್ಲಿ ಮೂರು ಬ್ಲಾಕ್‌ಗಳಲ್ಲಿ ಹಂತಹಂತವಾಗಿ ಡ್ರೋಣ್ ಕ್ಯಾಮೆರಾ ಬಳಸಿ ಏರಿಯಲ್ ಸರ್ವೇಯನ್ನು ಪ್ರಾಯೋಗಿಕವಾಗಿ ನಡೆಸಿ ಸಿಸಿಎಫ್ ಶ್ರೀನಿವಾಸಲು ಗಮನ ಸೆಳೆದಿದ್ದಾರೆ.
ಡ್ರೋಣ್ ಬಳಕೆ ಏಕೆ?: ಮಲೆನಾಡು ಎಂದರೆ ಗಿರಿಕಂದರದ ಬೀಡು.. ಕಿಕ್ಕಿರಿದ ಅರಣ್ಯ.. ಈ ನಡುವೆ ಸರ್ವೇ ಮಾಡಿ ಗಡಿ ಗುರುತಿಸುವುದೇ ಅರಣ್ಯ ಇಲಾಖೆಗೆ ದೊಡ್ಡ ಸವಾಲು. ಅಲ್ಲದೆ ಸರ್ವೇ ವಿಚಾರದಲ್ಲಿ ವಿವಾದಗಳು ಹೊಸತಲ್ಲ.. ಜೊತೆಗೆ ಸರ್ವೇ ಸರಿಯಾಗಿಲ್ಲ ಎಂಬ ಸಾರ್ವಜನಿಕರ ನಿರಂತರ ಅಸಮಾಧಾನ. ಆಧುನಿಕ ತಂತ್ರಜ್ಞಾನ ಬಳಸಿ ಸರ್ವೇ ಮಾಡಿ ನಿಖರ ಮಾಹಿತಿ ಪಡೆದುಕೊಂಡಲ್ಲಿ ಅರಣ್ಯ ಇಲಾಖೆ ಕೆಲಸ ಸುಲಭವಾಗಬಹುದು ಎಂಬ ನಿರೀಕ್ಷೆಯಲ್ಲಿ ಪ್ರಾಯೋಗಿಕವಾಗಿ ಡ್ರೋಣ್ ಬಳಕೆ ಮಾಡಿ ಸರ್ವೇ ಮಾಡಲಾಗಿದೆ.
ಏರಿಯಲ್ ಸರ್ವೇಯಿಂದ ಲಾಭವೇನು?: ಕಡಿದಾದ ಪ್ರದೇಶವಿರಲಿ.. ಒಳಗೆ ಪ್ರವೇಶಿಸಲಾಗದಂತ ದಟ್ಟ ಅರಣ್ಯವಿರಲಿ ಸುಲಭವಾಗಿ ಸರ್ವೇ ಕಾರ್ಯ ನಡೆಸಬಹುದು. ಅಲ್ಲದೆ ಸರ್ವೇ ಬಗ್ಗೆ ನಿಖರ ಮತ್ತು ಸಮಗ್ರ ಮಾಹಿತಿ ಪಡೆಯಬಹುದು. ಮ್ಯಾನ್ ಪವರ್ ಕಡಿಮೆ ಮತ್ತು ಕಾಲಮಿತಿಯೊಳಗೆ ಸರ್ವೇ ನಡೆಸಬಹುದು. ಒಮ್ಮೆ ಸರ್ವೇ ಕಾರ್ಯ ಯಶಸ್ವಿಯಾದಲ್ಲಿ ಕಚೇರಿಯಲ್ಲೇ ಕುಳಿತು ಕಾರ್ಯ ನಿರ್ವಹಿಸಲು ಅನುಕೂಲ. ಸರ್ವೇ ಬಗ್ಗೆ ಸಾರ್ವಜನಿಕರ ಅಸಮಾಧಾನ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಶಾಶ್ವತ ಪರಿಹಾರ ನೀಡಬಹುದು ಎಂಬ ಲೆಕ್ಕಾಚಾರವನ್ನು ಅರಣ್ಯ ಇಲಾಖೆ ಹೊಂದಿದೆ.
15ದಿನದಲ್ಲಿ ವರದಿ: ಈಗಾಗಲೇ ಶಿವಮೊಗ್ಗ ವೃತ್ತ ಅರಣ್ಯ ಇಲಾಖೆಯ ಸಿಸಿಎಫ್ ಶ್ರೀನಿವಾಸಲು ವಿಶೇಷ ಆಸಕ್ತಿಯಿಂದಾಗಿ ನಿಟ್ಟೂರಿನ ಮಂಜಗಳಲೆ ಗ್ರಾಮದಲ್ಲಿ ಪ್ರಾಯೋಗಿಕವಾಗಿ ನಡೆಸಲಾದ ಏರಿಯಲ್ ಸರ್ವೇ ಕಾರ್ಯ ಯಶಸ್ವಿಯಾಗಿ ಸಮಾಪ್ತಿಗೊಂಡಿದೆ. ಸಮಗ್ರ ವರದಿಗಾಗಿ ಇಲಾಖೆಯ ತಂತ್ರಜ್ಞಾನ ವಿಭಾಗಕ್ಕೆ ಕಳುಹಿಸಲಾಗಿದೆ. ಸರ್ವೇ ವೇಳೆ ಸಾಗರ ವಲಯ ಡಿಸಿಎಫ್ ಮೋಹನಕುಮಾರ್, ಆರ್‌ಎಫ್‌ಒ ಆದರ್ಶ ಎಂ.ಪಿ, ಎಆರ್‌ಎಫ್‌ಒ ಸತೀಶ ನಾಯ್ಕ ಇದ್ದರು.