Advertisement

ಅಡಿಕೆಗೆ ಡ್ರೋನ್‌ ಸಿಂಪಡಣೆ ಸಲ್ಲ: ಅಧ್ಯಯನ ನಡೆಸದೆ ಈ ಮಾದರಿ ಅನುಸರಣೆ ಅಪಾಯ

12:42 AM Feb 25, 2023 | Team Udayavani |

ಮಂಗಳೂರು: ಅಡಿಕೆಗೆ ಕಾಡುತ್ತಿರುವ ಎಲೆಚುಕ್ಕಿ ರೋಗಕ್ಕೆ ಡ್ರೋನ್‌ ಮೂಲಕ ಔಷಧ ಸಿಂಪಡಿಸುತ್ತಿರುವುದು ಎಂಡೋಸಲ್ಫಾನ್‌ನಂಥ ಮತ್ತೊಂದು ದುರಂತಕ್ಕೆ ಕಾರಣ ವಾಗಬಹುದು ಎಂಬ ಭೀತಿ ಎದುರಾಗಿದೆ.

Advertisement

ಇದುವರೆಗೆ ಡ್ರೋನ್‌ ಬಳಸಿ ಔಷಧ ಸಿಂಪಡಿಸುವ ಸಂಬಂಧ ಅಧಿಕೃತವಾಗಿ ಸರಕಾರ ಅಥವಾ ವಿಜ್ಞಾನಿಗಳಿಂದ ಯಾವುದೇ ಮಾರ್ಗಸೂಚಿ ಬಂದಿಲ್ಲ. ಸಿಪಿಸಿಆರ್‌ಐ ತಜ್ಞರು ಕೇವಲ ದೋಟಿ ಬಳಸಿ ಸಿಂಪಡಿಸುವಂತೆ ತೋಟಗಾರಿಕೆ ಇಲಾಖೆಗೆ ಸೂಚಿಸಿ ದ್ದಾರೆ. ಆದರೂ ಕರಾವಳಿ, ಮಲೆನಾಡಿನ ಕೆಲವೆಡೆ ವಿವಿಧ ಕಾರಣಗಳಿಂದಾಗಿ ಡ್ರೋನ್‌ ವಿಧಾನ ಅನುಸರಿಸಲಾಗುತ್ತಿದೆ.

ಎಲೆಚುಕ್ಕಿ ರೋಗವು ಶಿಲೀಂದ್ರದಿಂದ ಬರುತ್ತಿದ್ದು, ಇದಕ್ಕೆ ಶಿಲೀಂದ್ರ ನಾಶಕ ಬಳಸಬೇಕು. ಆದರೆ ಡ್ರೋನ್‌ ಮೂಲಕ ಸಿಂಪಡಿಸುವ ಏಜೆನ್ಸಿಯವರು ಅವರದ್ದೇ ಆದ ಕೀಟನಾಶಕಗಳನ್ನು ಬಳಸುತ್ತಿದ್ದಾರೆನ್ನಲಾಗಿದ್ದು, ಇದು ಆತಂಕ ವನ್ನು ಹೆಚ್ಚಿಸಿದೆ. ಶಿಲೀಂದ್ರ ನಾಶಕ ಹೊರತುಪಡಿಸಿ ಬೇರೆಯದನ್ನು ಬಳಸುವುದಕ್ಕೆ ವಿಜ್ಞಾನಿಗಳ ವಿರೋಧವೂ ಇದೆ. ಅಡಕೆ ಬೆಳೆಗಾರರ ಸಹಕಾರ ಸಂಸ್ಥೆ ಕ್ಯಾಂಪ್ಕೊ ಸಹ ಇದಕ್ಕೆ ಅಸಮ್ಮತಿ ವ್ಯಕ್ತಪಡಿಸಿದೆ.

ನಿರ್ದಿಷ್ಟ ಮಾರ್ಗಸೂಚಿ ಇಲ್ಲ
ಡ್ರೋನ್‌ ಮೂಲಕ ರಾಸಾಯನಿಕ ಸಿಂಪಡಿಸುವ ಸಂದರ್ಭದಲ್ಲಿ ಪಾಲಿ ಸಲೇಬೇಕಾದ ನಿರ್ದಿಷ್ಟ ಮಾರ್ಗಸೂಚಿ (ಎಸ್‌ಒಪಿ) ಕುರಿತು ತೋಟಗಾರಿಕೆ ಇಲಾಖೆ ಅಥವಾ ಸರಕಾರ ಇನ್ನಷ್ಟೇ ಪ್ರಕಟಿಸಬೇಕಿದೆ. ಆ ಮೂಲಕ ಡ್ರೋನ್‌ ಬಳಕೆಗೆ ಒಪ್ಪಿಗೆ ನೀಡಬೇಕಿದೆ.

ಭತ್ತ ಮುಂತಾದ ನೆಲಮಟ್ಟದಲ್ಲಿ ರುವ ಬೆಳೆಗಳಿಗೆ ಡ್ರೋನ್‌ ಮೂಲಕ ಸಿಂಪಡಿಸಲು ಈಗಾಗಲೇ ಮಾರ್ಗಸೂಚಿಗಳನ್ನು ನೀಡಲಾಗಿದೆ. ಅಡಿಕೆಗೂ ಮಾರ್ಗಸೂಚಿ ರೂಪಿಸುವ ಕುರಿತು ಸಿಪಿಸಿಆರ್‌ಐನವರೂ ಸಮಾ ಲೋಚನೆ ನಡೆಸಿದ್ದಾರೆಯೇ ಹೊರತು ಅಧ್ಯಯನ ನಡೆಸಿಲ್ಲ. ಹಾಗಾಗಿ ಸದ್ಯಕ್ಕೆ ಫೈಬರ್‌ ದೋಟಿಗಳನ್ನೇ ಬಳಸಿ ಸಿಂಪಡಿಸಲು ಶಿಫಾರಸು ಮಾಡಿದ್ದಾರೆ.

Advertisement

ಏಜೆನ್ಸಿಯವರು ಎರಡಕ್ಕಿಂತ ಹೆಚ್ಚು ಕೀಟನಾಶಕಗಳ ಮಿಶ್ರಣವನ್ನು ತಾವೇ ಸಿದ್ಧಪಡಿಸಿಕೊಂಡು ಸಿಂಪಡಿಸುತ್ತಿದ್ದಾರೆ. ಇದು ತಜ್ಞರು ಸೂಚಿಸಿದ ರಾಸಾಯ ನಿಕ ನೀರಿನ ಅನುಪಾತಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ಗಂಭೀರ ಸಮಸ್ಯೆ ತಂದೊಡ್ಡಬಹುದು ಎನ್ನುತ್ತಾರೆ ಅಖೀಲ ಭಾರತ ಅಡಿಕೆ ಬೆಳೆಗಾರರ ಒಕ್ಕೂಟದ ಕಾರ್ಯದರ್ಶಿ ಮಹೇಶ್‌ ಪುಚ್ಚಪ್ಪಾಡಿ.

ಈ ಹಿಂದೆ ಹೆಲಿಕಾಪ್ಟರ್‌ಗಳ ಮೂಲಕ ಗೇರುಬೀಜದ ತೋಪು ಗಳಿಗೆ ಎಂಡೋಸಲ್ಫಾನ್‌ ಅನ್ನು ಸಿಂಪ ಡಿಸಲಾಗಿತ್ತು. ಅದರಿಂದಾದ ಅಪಾಯ ಕಣ್ಣು ಮುಂದಿದೆ. ಹೀಗಿರುವಾಗ ಅಧ್ಯ ಯನ ಆಗುವ ಮೊದಲೇ ಡ್ರೋನ್‌ ಮೂಲಕ ಬೆಳೆಗಾರರು ಸಿಂಪಡಿಸಬಾರದು. ಅದಕ್ಕಾಗಿ ನಾವು ಶಿಫಾರಸು ಮಾಡುತ್ತಿಲ್ಲ ಎಂಬುದು ತೋಟಗಾರಿಕೆ ಅಧಿಕಾರಿಗಳ ಅಭಿಪ್ರಾಯ.

ಕೆಲವರು ಅಡಿಕೆಗೆ ಬೇಕಾಬಿಟ್ಟಿಯಾಗಿ ಡ್ರೋನ್‌ ಬಳಸಿ ರಾಸಾಯನಿಕ ಸಿಂಪಡಿಸುತ್ತಿದ್ದಾರೆ.ಅಡಿಕೆ ಮರಗಳ ನಡುವಣ ಅಂತರದಲ್ಲಿ ರಾಸಾಯನಿಕ ನೆಲ, ಜಲ ಸೇರುತ್ತದೆ. ಇದು ಇನ್ನೊಂದು ದುರಂತಕ್ಕೆ ಕಾರಣವಾಗದಿರಲಿ ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ ಹೇಳುತ್ತಿದ್ದಾರೆ.

ಅಡಿಕೆಗೆ ಡ್ರೋನ್‌ ಮೂಲಕ ಸಿಂಪಡಣೆ ಇನ್ನೂ ಅಧಿಕೃತಗೊಳಿಸಿಲ್ಲ. ಅದರ ಪರಿಣಾಮದ ಅಧ್ಯಯನ ನಡೆಸದೆ ಯಾವುದೇ ಕಾರಣಕ್ಕೂ ಶಿಫಾರಸು ಮಾಡುವಂತಿಲ್ಲ..
 -ವಿನಾಯಕ್‌ ಹೆಗ್ಡೆ, ವಿಜ್ಞಾನಿ, ಸಿಪಿಸಿಆರ್‌ಐ, ಕಾಸರಗೋಡು

ಎಲೆಚುಕ್ಕಿ ರೋಗಕ್ಕೆ ಸಂಬಂಧಿಸಿ ಸರಕಾರ ಈಗಾಗಲೇ ಅಧಿಸೂಚನೆ ಹೊರಡಿಸಿ ಕ್ರಮಗಳನ್ನು ಸೂಚಿಸಿದೆ. ಆದರೆ ಡ್ರೋನ್‌ ಮೂಲಕ ಕೀಟನಾಶಕ ಸಿಂಪಡಿಸುತ್ತಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ತೋಟಗಾರಿಕಾ ಇಲಾಖೆಯವ ರೊಂದಿಗೆ ಮಾತುಕತೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವೆ.
-ರವಿಕುಮಾರ್‌ ಎಂ.ಆರ್‌., ಜಿಲ್ಲಾಧಿಕಾರಿ, ದ.ಕ.

ಡ್ರೋನ್‌ ಬಳಕೆ ಬಗ್ಗೆ ಮಾಹಿತಿ ಪಡೆದು ಕೊಳ್ಳುವುದಕ್ಕೆ ನಮ್ಮ ಎಲ್ಲ ಕ್ಷೇತ್ರೀಯ ಅಧಿಕಾರಿ, ಸಿಬಂದಿಯಿಂದ ತತ್‌ಕ್ಷಣ ಅಧ್ಯಯನ ನಡೆಸಲು ಸೂಚಿಸುತ್ತೇನೆ.
-ಯೋಗೇಶ್‌ ಎಚ್‌.ಆರ್‌., ತೋಟಗಾರಿಕಾ ಇಲಾಖೆ ಉಪ ನಿರ್ದೇಶಕರು, ಮಂಗಳೂರು

- ವೇಣುವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next