ಆಲಮೇಲ: ಅಪಾರ ಪ್ರಮಾಣದ ಮಳೆಯಿಂದ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದ ರೈತನ ಹುಡಕಾಟ ಮುಂದುವರಿದಿದ್ದು ಯಾವುದೆ ಸುಳಿವು ಲಭ್ಯವಾಗಿಲ್ಲ. ಶನಿವಾರ ಡ್ರೋನ್ ಕ್ಯಾಮರಾ ಮೂಲಕ ಹುಡಕಾಟ ನಡೆಸಿ ಕಾರ್ಯಚರಣೆಯನ್ನು ಸ್ಥಗಿತಗೊಳಿಸಿ ಕುಟುಂಬಸ್ಥರಿಂದ ಕಾಣೆಯಾಗಿರುವ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ತಾಲೂಕಾಡಳಿತ ತಿಳಿಸಿತು.
ಮಂಗಳವಾರ ಮತ್ತು ಬುಧವಾರ ಅಪಾರ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದವು. ಈ ಸಂದರ್ಭದಲ್ಲಿ ಹೊಲಕ್ಕೆ ತೆರಳಿದ ಕುರುಬತ್ತಹಳ್ಳಿ ಗ್ರಾಮದ ರೈತ ಬಸಣ್ಣ ಅಂಬಾಗೋಳ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದು ಮೂರು ದಿನಗಳಿಂದ ತಾಲೂಕಾಡಳಿತ ಎಲ್ಲ ರೀತಿಯ ಹುಡಕಾಟ ನಡೆಸುತ್ತಿದ್ದು ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಹೀಗಾಗಿ ಕಾರ್ಯಚರಣೆ ಸ್ಥಗಿತಗೊಳಿಸಿ ಹಳ್ಳದಲ್ಲಿ ಕೊಚ್ಚಿ ಹೋಗಿರುವ ಬಸಣ್ಣ ಅಂಬಾಗೋಳ ಕುಟುಂಬದ ಒಪ್ಪಿಗೆ ಮೇರೆಗೆ ಆಲಮೇಲ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಪ್ರಕರಣ ದಾಖಲಿಸಿಕೊಂಡು ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ. ಒಂದು ವೇಳೆ ರೈತ ಹಳ್ಳದಲ್ಲಿ ಕೊಚ್ಚಿ ಹೋಗಿರುವುದು ದೃಢಪಟ್ಟರೆ ಸರ್ಕಾರ ದಿಂದ ಬರುವ ಎಲ್ಲ ಪರಿಹಾರ ಒದಗಿಸಲಾಗುವುದು ಎಂದು ಉಪ ವಿಭಾಗಾಧಿಕಾರಿ ರಾಹುಲ್ ಶಿಂಧೆ ತಿಳಿಸಿದ್ದಾರೆ. ಗುರುವಾರ ಅಗ್ನಿಶಾಮಕ ಸಿಬ್ಬಂದಿ ಹಳ್ಳದಲ್ಲಿ ಮತ್ತು ಭೀಮಾ ನದಿಯಲ್ಲಿ ನಾವಿ ಮೂಲಕ ಹುಡಕಾಟ ಮಾಡಿದ್ದು ಯಾವುದೇ ಸುಳಿವು ಸಿಗಲಿಲ್ಲ.
ಎರಡನೇ ದಿನ ಶುಕ್ರವಾರ ಇಂಡಿ ತಾಲೂಕಿನ ಖೇಡಗಿ ಗ್ರಾಮದ ನುರಿತ ಮೀನುಗಾರರನ್ನು ಕರೆಯಿಸಿ ಭೀಮಾ ನದಿಯಲ್ಲಿ ಕಾರ್ಯಚರಣೆ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ. ಅಗ್ನಿಶಾಮಕ ಸಿಬ್ಬಂದಿ ಮತ್ತು ನುರಿತ ಮೀನುಗಾರರಿಂದ ಕಾರ್ಯಾಚರಣೆ ನಿರಂತವಾಗಿ ನಡೆಯುತ್ತಿದ್ದು ಇನ್ನಷ್ಟು ಮಾಹಿತಿಗಾಗಿ ಶನಿವಾರ ಡ್ರೋಣ್ ಕ್ಯಾಮರಾ ಮೂಲಕ ಹಳ್ಳದುದ್ದಕ್ಕೂ ಮತ್ತು ಭೀಮಾ ನದಿಯಲ್ಲಿ ಹುಡಕಾಟ ನಡೆಸಿದರೂ ಮಾಹಿತಿ ಲಭ್ಯವಾಗಿಲ್ಲ.
ಘಟನಾ ಸ್ಥಳಕ್ಕೆ ಮಾಜಿ ಶಾಸಕ ರಮೇಶ ಭೂಸನೂರ ಭೇಟಿ ನೀಡಿ ಅ ಧಿಕಾರಿಗಳ ಜತೆ ಚರ್ಚೆ ಮಾಡಿ ರೈತನ ಮಗನಿಗೆ ಧೈರ್ಯ ತುಂಬಿದರು. ಸಿಂದಗಿ ತಹಶೀಲ್ದಾರ್ ಸಂಜೀವಕುಮಾರ ದಾಸರ, ಕಂದಾಯ ನಿರೀಕ್ಷಕ ಎ.ಎಂ. ಅತ್ತಾರ, ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ, ಮೀನುಗಾರರು ಕಳೆದ ಮೂರು ದಿನಗಳಿಂದ ಸ್ಥಳದಲ್ಲಿ ಬೀಡು ಬಿಟ್ಟು ಕಾರ್ಯಚರಣೆ ನಡೆಸಿದ್ದಾರೆ.