ಬೆಂಗಳೂರು: ಬಿಬಿಎಂಪಿ ವತಿಯಿಂದ ನಗರದ ವಿವಿಧೆಡೆ ನಡೆಸುತ್ತಿರುವ ಬೃಹತ್ ಮಳೆನೀರು ಕಾಲುವೆ ಅಭಿವೃದ್ಧಿ ಕಾಮಗಾರಿಗಳನ್ನು ದ್ರೋಣ್ ಕ್ಯಾಮೆರಾ ಮೂಲಕ ಚಿತ್ರೀಕರಿಸುವಂತೆ ಮೇಯರ್ ಆರ್.ಸಂಪತ್‌ರಾಜ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬುಧವಾರ ಮಹದೇವಪುರ ವಲಯದಲ್ಲಿನ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿನ ಬೃಹತ್ ಮಳೆನೀರು ಕಾಲುವೆ ಕಾಮಗಾರಿಗಳನ್ನು ವಾರ್ಡ್‌ವಾರು ವಿಂಗಡಿಸಿ ದ್ರೋಣ್ ಕ್ಯಾಮೆರಾ ಮೂಲಕ ಚಿತ್ರೀಕರಿಸಿ ಕಾಮಗಾರಿಯ ಮಾಹಿತಿಯನ್ನು ಪಾಲಿಕೆಯ ವೆಬ್‌ಸೈಟ್‌ಗೆ ಅಪ್ ಲೋಡ್ ಮಾಡುವಂತೆ ಮಳೆನೀರು ಕಾಲುವೆ ಮುಖ್ಯ ಎಂಜಿನಿಯರ್‌ಗೆ ಆದೇಶಿಸಿದರು.
ದ್ರೋಣ್ ಮೂಲಕ ನಗರದ ವಿವಿಧ ಸ್ಥಳಗಳಲ್ಲಿನ ಅಭಿವೃದ್ಧಿ ಕಾಮಗಾರಿಗಳನ್ನು ಸ್ಥಳೀಯ ಸದಸ್ಯರು ಹಾಗೂ ಅಧಿಕಾರಿಗಳು ಪರಿಶೀಲಿಸಬಹುದಾಗಿದೆ. ಹೀಗಾಗಿ ಶೀಘ್ರ ಈ ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ತಿಳಿಸಿದ ಅವರು, ಇದರೊಂದಿಗೆ ಕಾಲುವೆಗಳಲ್ಲಿ ಹೂಳು ತೆಗೆದಿರುವ ಪ್ರಮಾಣ ಮತ್ತು ಇತರೆ ಅಭಿವೃದ್ಧಿ ಕಾಮಗಾರಿಗಳ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ತಿಳಿಸಿದರು.
ಮಹದೇವಪುರ ವಲಯದ ಕಾಲುವೆಗಳ ಅಭಿವೃದ್ಧಿಗೆ ಸಿಎಂ, 30 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಕಾಮಗಾರಿಗಳ ಪ್ರಗತಿ ಕುರಿತು ಅಧಿಕಾರಿ ಗಳಿಂದ ಮಾಹಿತಿ ಪಡೆದರು. ವಲಯದಲ್ಲಿ ಒಟ್ಟು 178 ಕಿ.ಮೀ. ಉದ್ದದ ಬೃಹತ್ ನೀರುಗಾಲುವೆ ಯಿದ್ದು, 9 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಸರ್ವೆಯರ್‌ಗಳನ್ನು ಕಾಯಂ ಆಗಿ ನೇಮಿಸಿ ಕೊಳ್ಳಿ: ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ಸರ್ವೆಯರ್‌ಗಳ ಕೊರತೆ ಎದುರಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಮೇಯರ್ ಸಂಪತ್‌ರಾಜ್, ಕಾರ್ಯಾಚರಣೆಗಾಗಿಯೇ ಹತ್ತು ಜನ ಸರ್ವೆಯರ್‌ಗಳನ್ನು ಪಾಲಿಕೆಗೆ ನಿಯೋಜನೆ ಮಾಡಿಕೊಳ್ಳುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಹಿರಿಯ ಅಧಿಕಾರಿಗಳಿಗೆ ಆದೇಶಿಸಿದರು. ನಗರೋತ್ಥಾನ, ರಾಜ್ಯ ಸರ್ಕಾರದ ವಿಶೇಷ ಅನುದಾನದಡಿ ವಿವಿಧ ಕಾಮಗಾರಿ ನಡೆಯುತ್ತಿದ್ದು, ಡಿ.15ರೊಳಗೆ ಎಲ್ಲ ರಸ್ತೆಗಳಿಗೆ ಡಾಂಬರೀಕರಣ ಕಾಮಗಾರಿ ಮುಗಿಸುವಂತೆ ತಿಳಿಸಿದ ಅವರು, ಟಿಡಿಆರ್ ನೀಡಿ ಕೆಲವೊಂದು ಆಸ್ತಿಗಳನ್ನು ಪಾಲಿಕೆ ಪಡೆಯಲಾಗಿದೆ. ಇಂತಹ ಆಸ್ತಿಗಳು ಪಾಲಿಕೆಯ ಸುಪರ್ದಿಗೆ ಬಂದಿವೆಯೇ ಎಂಬ ದಾಖಲೆಗಳನ್ನು ಒದಗಿಸುವಂತೆ ಅವರು ಅಧಿಕಾರಿಗಳಿಗೆ ಹೇಳಿದರು.
ತೆರಿಗೆ ಸಂಗ್ರಹ ಅಭಿಯಾನ ಆರಂಭಿಸಿ ಮಹದೇವಪುರ ವಲಯದಲ್ಲಿ ತೆರಿಗೆ ಸಂಗ್ರಹ ಸಮರ್ಪಕವಾಗಿ ಆಗುತ್ತಿಲ್ಲ. ತೆರಿಗೆ ಸಂಗ್ರಹ ಅಭಿಯಾನ ಆರಂಭಿಸುವಂತೆ ಸಂಪತ್‌ರಾಜ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರಸಕ್ತ ಸಾಲಿನಲ್ಲಿ ಬಹುಮಹಡಿ ಕಟ್ಟಡಗಳು, ಮಾಲ್‌ಗಳು, ಟೆಕ್‌ಪಾರ್ಕ್‌ಗಳಿಂದ ಸಮರ್ಪಕವಾಗಿ ತೆರಿಗೆ ಸಂಗ್ರಹವಾಗಿಲ್ಲ. ಹೀಗಾಗಿ ಪ್ರತಿಯೊಂದು ಆಸ್ತಿಗೂ ಪಿಐಡಿ ಸಂಖ್ಯೆ ನೀಡುವ ಕೆಲಸವನ್ನು ಆರಂಭಿಸುವಂತೆ ಸೂಚಿಸಿದರು. ಜತೆಗೆ ಟೋಟಲ್ ಸ್ಟೇಷನ್ ಸರ್ವೆಯಿಂದ ಪಾಲಿಕೆಗೆ ತಪ್ಪು ಮಾಹಿತಿ ನೀಡಿರುವ ಅಂಶ ಬಯಲಾಗಿದ್ದು, ಅಂತಹ ಕಟ್ಟಡಗಳಿಂದ ಬಾಕಿ, ದಂಡ ಹಾಗೂ ಬಡ್ಡಿಯೊಂದಿಗೆ ತೆರಿಗೆ ವಸೂಲಿ ಮಾಡಿ ಎಂದು ಆದೇಶಿಸಿದರು.