ಮಾಸ್ಕೊ: ರಷ್ಯಾ ಸಂಸತ್, ಕ್ರೆಮ್ಲಿನ್ ಮೇಲೆ ಎರಡು ಡ್ರೋನ್‌ಗಳ ಮೂಲಕ ದಾಳಿ ನಡೆಸಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹತ್ಯೆ ಪ್ರಯತ್ನ ಆ ದೇಶದರಿಂದಲೇ ನಡೆದಿರುವ ಸಾಧ್ಯತೆ ಇದೆ. ಇಂಥ ಒಂದು ಹೊಸ ವಾದವನ್ನು ಅಮೆರಿಕದ ದ ರೆಸಿಲಿಯಂಟ್ ನ್ಯಾವಿಗೇಶನ್ ಆ್ಯಂಡ್ ಟೈಮಿಂಗ್ ಫೌಂಡೇಶನ್ ಮುಖ್ಯಸ್ಥ ಡಾನಾ ಗೊವಾರ್ಡ್ ಮಂಡಿಸಿದ್ದಾರೆ. ಅವರ ಪ್ರಕಾರ ರಷ್ಯಾ ಸರ್ಕಾರ 2015ರ ನಂತರ ಕ್ರೆಮ್ಲಿನ್ ಅನ್ನು ಕಾಪಾಡಿಕೊಳ್ಳಲು ಬಲವಾದ ತಾಂತ್ರಿಕ ವ್ಯವಸ್ಥೆ ಮಾಡಿಕೊಂಡಿದೆ.
ಜಿಪಿಎಸ್‌ನಿಂದ ನಿರ್ದೇಶಿತಗೊಂಡು ಕ್ರೆಮ್ಲಿನ್ ಬಳಿ ಬರುವ ಯಾವುದೇ ವಿದ್ಯುನ್ಮಾನ ಸಾಧನಗಳು ತನ್ನಿಂತಾನೇ ಅಲ್ಲಿಂದ ದೂರ ಹೋಗುವಂತಹ ವ್ಯವಸ್ಥೆ ಮಾಡಲಾಗಿದೆ. ಅರ್ಥಾತ್ ನಿಜವಾದ ಸಿಗ್ನಲ್ ಬದಲು, ಬೇರೆ ಕಡೆ ಹೋಗುವಂತಹ ತಪ್ಪು ಸಿಗ್ನಲ್‌ಗಳು ಆ ಸಾಧನಕ್ಕೆ ಸಿಗುತ್ತವೆ. ಹೀಗಿದ್ದರೂ ಎರಡು ಡ್ರೋನ್‌ಗಳು ಕ್ರೆಮ್ಲಿನ್ ಮೇಲೆ ಸ್ಫೋಟಗೊಂಡಿವೆ ಅಂದರೆ ಅವು ಜಿಪಿಎಸ್ ಸಾಧನ ಬಳಸಿರಲಿಕ್ಕಿಲ್ಲ ಎನ್ನುವುದು ಗೊವಾರ್ಡ್ ವಾದ. ಅಂದರೆ ಯಾರೋ ಕ್ರೆಮ್ಲಿನ್ ಸನಿಹದಿಂದ ಮಾನವಶಕ್ತಿಯನ್ನು ಬಳಸಿಯೇ ಕಳಿಸಿದ್ದಾರೆನ್ನುವುದು ಅವರ ಊಹೆ. ಇದುವರೆಗೆ ರಷ್ಯಾ ಭದ್ರತಾ ತಜ್ಞರಿಗೆ ಆ ಎರಡು ಡ್ರೋನ್‌ಗಳು ಎಲ್ಲಿಂದ ಬಂದವು ಎಂದು ಗೊತ್ತಾಗಿಲ್ಲ.