Advertisement

ಚಾಲಕ ರಹಿತ ಮೆಟ್ರೋಗೆ ಬೇಕು ಇನ್ನೊಂದು ವರ್ಷ

02:32 PM Oct 01, 2022 | Team Udayavani |

ಬೆಂಗಳೂರು: ಬಹುನಿರೀಕ್ಷಿತ ಚಾಲಕರಹಿತ ಮೆಟ್ರೋ ರೈಲು ಪರಿಚಯಿಸುವ ವಿಚಾರದಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಈಗ ಕಾದುನೋಡುವ ತಂತ್ರ ಅನುಸರಿಸುತ್ತಿದ್ದು, ಪರಿಣಾಮ ಎಲ್ಲವೂ ಅಂದುಕೊಂಡಂತಾದರೂ ಈ ಸೌಲಭ್ಯಕ್ಕಾಗಿ ಬೆಂಗಳೂರಿಗರು ಕನಿಷ್ಠ ಇನ್ನೂ ಒಂದೂವರೆ ವರ್ಷ ಕಾಯುವುದು ಅನಿವಾರ್ಯವಾಗಿದೆ. 2023ರ ಜುಲೈ ವೇಳೆಗೆ ಚಾಲಕರಹಿತ ಮೆಟ್ರೋ ರೈಲುಗಳು ಇಲ್ಲಿನ ಡಿಪೋಗೆ ಬರಲಿವೆ.

Advertisement

ಅಲ್ಲಿಂದ ವಿವಿಧ ಹಂತಗಳ ಪರೀಕ್ಷೆಗಳು ನಡೆಯಲಿದ್ದು, ಇದಕ್ಕಾಗಿ ಕನಿಷ್ಠ 10 ತಿಂಗಳು ಸಮಯ ಹಿಡಿಯಲಿದೆ. ತದನಂತರ ಅದು ವಾಣಿಜ್ಯ ಸೇವೆಗೆ ಮುಕ್ತಗೊಳ್ಳಲಿದೆ. ಇದೆಲ್ಲದಕ್ಕೂ ಕನಿಷ್ಠ ಒಂದೂವರೆ ವರ್ಷ ಬೇಕಾಗುತ್ತದೆ. ಅಂದರೆ 2024ರ ಫೆಬ್ರವರಿ-ಮಾರ್ಚ್‌ನಲ್ಲಿ ಈ ಸೇವೆ ಲಭ್ಯವಾಗುವ ನಿರೀಕ್ಷೆ ಇದೆ. ಇದರೊಂದಿಗೆ ಚಾಲಕರಹಿತ ಮೆಟ್ರೋದಲ್ಲಿ ಸಂಚರಿಸುವ ಭಾಗ್ಯ ತಾತ್ಕಾಲಿಕವಾಗಿ ಮತ್ತಷ್ಟು ಮುಂದಕ್ಕೆ ಹೋದಂತಾಗಿದೆ. “ದೆಹಲಿಯಲ್ಲಿ ಪ್ರಸ್ತುತ ಚಾಲಕರಹಿತ ಮೆಟ್ರೋ ರೈಲು ಪರಿಚಯಿಸಲಾಗಿದೆ. ಅಲ್ಲಿನ ಫ‌ಲಿತಾಂಶ ಮತ್ತು ತಜ್ಞರ ಅಭಿಪ್ರಾಯಗಳನ್ನು ಸಂಗ್ರಹಿಸಿ ನಂತರ “ನಮ್ಮ ಮೆಟ್ರೋ’ದಲ್ಲಿ ಅದೇ ಮಾದರಿಯ ಚಾಲಕರಹಿತ ರೈಲುಗಳನ್ನು ಹಳಿಗಳ ಮೇಲೆ ಇಳಿಸಲಾಗುವುದು. ಎಲ್ಲವೂ ಯೋಜನೆ ಪ್ರಕಾರ ಅನುಷ್ಠಾನಗೊಂಡರೆ ಐಟಿ ಕಾರಿಡಾರ್‌ ಆರ್‌.ವಿ. ರಸ್ತೆ- ಎಲೆಕ್ಟ್ರಾನಿಕ್‌ ಸಿಟಿ- ಬೊಮ್ಮಸಂದ್ರ ನಡುವೆ ಈ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ’ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌ “ಉದಯವಾಣಿ’ಗೆ ಸ್ಪಷ್ಟಪಡಿಸಿದರು.

ವರ್ಷಾಂತ್ಯಕ್ಕೆ ಹಳಿಗಿಳಿಯಲಿವೆ ಮೆಟ್ರೋ: ಈ ಮಧ್ಯೆ ಡಿಸೆಂಬರ್‌ ವೇಳೆಗೆ ಐಟಿ ಕಾರಿಡಾರ್‌ನಲ್ಲಿ ಮೆಟ್ರೋ ರೈಲುಗಳನ್ನು ಹಳಿಗೆ ಇಳಿಸಲು ಬಿಎಂಆರ್‌ಸಿಎಲ್‌ ಉದ್ದೇಶಿಸಿದ್ದು, ಇದರೊಂದಿಗೆ ಮುಂದುವರಿದ ಸಿಬಿಟಿಸಿ ಮೆಟ್ರೋ ಮಾರ್ಗಗಳ ಮೇಲೆ ಈಗಿರುವ ಡಿಟಿಜಿ (ಡಿಸ್ಟೆನ್ಸ್‌ ಟು ಗೋ) ವ್ಯವಸ್ಥೆಯಲ್ಲಿ ಕಾರ್ಯಾಚರಣೆ ಮಾಡುತ್ತಿರುವ ರೈಲುಗಳ ಪರೀಕ್ಷಾರ್ಥ ಸಂಚಾರ ಆರಂಭಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್‌ ಮೂಲಗಳು ತಿಳಿಸಿವೆ. ಈಗಿರುವ ಸಿಗ್ನಲಿಂಗ್‌ ವ್ಯವಸ್ಥೆಗೂ ಹಾಗೂ ಸಿಬಿಟಿಸಿ ಆಧಾರಿತ ಸಿಗ್ನಲಿಂಗ್‌ ವ್ಯವಸ್ಥೆಗೂ ವ್ಯತ್ಯಾಸ ಇದೆ. ಆದಾಗ್ಯೂ ಕೆಲವು ಮೂಲ ತಂತ್ರಜ್ಞಾನಗಳಿಗೆ ಹೋಲಿಕೆ ಇರುತ್ತದೆ. ಅವುಗಳನ್ನು ಪಟ್ಟಿಮಾಡಿ, ಆ ಅಂಶಗಳನ್ನು ಮಾತ್ರ ಪರೀಕ್ಷೆ ನಡೆಸಲಾಗುತ್ತದೆ. ನಂತರ ಜುಲೈನಿಂದ ಸಿಬಿಟಿಸಿ ಮೆಟ್ರೋ ರೈಲುಗಳ ಪರೀಕ್ಷಾರ್ಥ ಸಂಚಾರ ನಡೆಸಲಾಗುತ್ತದೆ. ಈ ಪ್ರಯೋಗದಿಂದ ಕನಿಷ್ಠ ಶೇ. 30ರಷ್ಟು ಸಮಯ ಉಳಿತಾಯ ಆಗಲಿದೆ ಎನ್ನುವುದು ನಿಗಮದ ಎಂಜಿನಿಯರ್‌ಗಳ ಲೆಕ್ಕಾಚಾರ.

ಏನಿದು ಸಿಬಿಟಿಸಿ ವ್ಯವಸ್ಥೆ? : ಚಾಲಕರಹಿತ ತಂತ್ರಜ್ಞಾನ ಎಂದು ಕರೆಯಲ್ಪಡುವ ಸಿಬಿಟಿಸಿ ವ್ಯವಸ್ಥೆಯು ಸಂವಹನ ಆಧಾರಿತ ರೈಲು ನಿಯಂತ್ರಣ ವ್ಯವಸ್ಥೆ (ಸಿಬಿಟಿಸಿ- ಕಮ್ಯುನಿಕೇಷನ್‌ ಬೇÓx… ಟ್ರೈನ್‌ ಕಂಟ್ರೋಲ್‌) ಯಿಂದ ಕೂಡಿದೆ. ಈ ವ್ಯವಸ್ಥೆಯನ್ನು ನಮ್ಮ ಮೆಟ್ರೋದಲ್ಲಿ ಮೊದಲ ಬಾರಿಗೆ ಹಳದಿ ಮಾರ್ಗ (ಎಲೆಕ್ಟ್ರಾನಿಕ್‌ ಸಿಟಿ ಮಾರ್ಗ) ಅಳವಡಿಸಲಾಗುತ್ತಿದೆ. ನಿಯಂತ್ರಣ ಕೇಂದ್ರಗಳ ಮೂಲಕ ಸ್ವಯಂಚಾಲಿತ ವ್ಯವಸ್ಥೆಯಡಿ ಈ ರೈಲುಗಳು ಕಾರ್ಯಾಚರಣೆ ಮಾಡಲಿವೆ. ಪ್ರಸ್ತುತ ನಮ್ಮ ಮೆಟ್ರೋ ಡಿಟಿಜಿ (ಡಿಸ್ಟೆನ್ಸ್ ಟು ಗೋ) ಸಿಗ್ನಲಿಂಗ್‌ ವ್ಯವಸ್ಥೆಯಲ್ಲಿ ರೈಲುಗಳು ಕಾರ್ಯಾಚರಣೆ ಮಾಡುತ್ತಿವೆ. ಅದರನ್ವಯ 2 ರೈಲುಗಳ ನಡುವಿನ ಅಂತರ ಎರಡೂವರೆ ನಿಮಿಷಗಳಷ್ಟಿರುತ್ತವೆ. ಸಿಬಿಟಿಸಿ ಚಾಲ್ತಿಗೆ ಬಂದ ಬಳಿಕ 2 ರೈಲುಗಳ ಅಂತರವನ್ನು 90 ಸೆಕೆಂಡ್‌ ಗಳಿಗೆ ತಗ್ಗಿಸಬಹುದು. ಪ್ರಸ್ತುತ ಜಿಓಎ2 ಅಡಿಯಲ್ಲಿ ಬಿಎಂಆರ್‌ ಸಿಎಲ್‌ ಕಾರ್ಯನಿರ್ವಹಿಸುತ್ತಿದೆ. ಅದರನ್ವಯ ರೈಲುಗಳು ಒಂದು ನಿಲ್ದಾಣದಿಂದ ಇನ್ನೊಂದು ನಿಲ್ದಾಣಕ್ಕೆ ಸ್ವಯಂಚಾಲಿತವಾಗಿಯೇ ಚಲಿಸುತ್ತವೆ. ಆದರೆ, ಬಾಗಿಲುಗಳನ್ನು ತೆರೆಯುವುದು ಮತ್ತು ಮುಚ್ಚುವ ಕಾರ್ಯವನ್ನು ಚಾಲಕರು ಮಾಡುತ್ತಾರೆ. ಜತೆಗೆ ಹಳಿಗಳಲ್ಲಿ ಏನಾದರೂ ತಡೆಯುಂಟಾಗಿದೆಯೇ ಎಂಬುದನ್ನು ಗಮನಿಸುತ್ತಿರುತ್ತಾರೆ. ಸಿಬಿಟಿಸಿ ವ್ಯವಸ್ಥೆ ವಿಭಿನ್ನ ಸ್ವಯಂಚಾಲಿತ ಶ್ರೇಣಿ (ಗ್ರೇಡ್‌)ಗಳ ಮೂಲಕ ಅಂತಾರಾಷ್ಟ್ರೀಯ ಎಲೆಕ್ಟ್ರೋಟೆಕ್ನಿಕಲ್‌ ಕಮಿಷನ್‌ ಮಾನದಂಡಗಳ ಅನುಸಾರ ಕಾರ್ಯನಿರ್ವ ಹಿಸುತ್ತದೆ. ಹಳದಿ ಮಾರ್ಗದಲ್ಲಿ ಜಿಓಎ4 ಮಾನದಂಡಗಳ ಅನುಸಾರ ಸಿಬಿಟಿಸಿ ಉಪಕರಣಗಳನ್ನು ಅಳವಡಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.‌

 

Advertisement

ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next