Advertisement

ನಿರ್ವಾಹಕ-ಪ್ರಯಾಣಿಕನ “ಕೋಳಿ’ಜಗಳ!

10:44 PM Apr 28, 2019 | Lakshmi GovindaRaju |

ಉಪ್ಪಿನಂಗಡಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಎರಡು ಕೋಳಿಗಳೊಂದಿಗೆ ಪ್ರಯಾಣಿಸಿದ ವ್ಯಕ್ತಿಯೊಬ್ಬರಿಗೆ ಕೋಳಿಗೂ ಅರ್ಧ ಟಿಕೆಟ್‌ ನೀಡಬೇಕೆಂದು ನಿರ್ವಾಹಕ ಸೂಚಿಸಿದ ಹಿನ್ನೆಲೆಯಲ್ಲಿ ಪ್ರಯಾಣಿಕ ಹಾಗೂ ನಿರ್ವಾಹಕರ ಮಧ್ಯೆ ಮಾತಿನ ಚಕಮಕಿ ನಡೆದು, ಕುಪಿತನಾದ ಪ್ರಯಾಣಿಕ ಬಸ್ಸಿನಿಂದ ಇಳಿದ ಪ್ರಕರಣ ಭಾನುವಾರ ನಡೆದಿದೆ.

Advertisement

ಕುಪ್ಪೆಟ್ಟಿ ಪರಿಸರದ ನಿವಾಸಿಯೊಬ್ಬರು ಶಿರಾಡಿ ಗಡಿಯ ದೈವಸ್ಥಾನದಲ್ಲಿ ಹರಕೆ ಸಲ್ಲಿಸಲೆಂದು ಎರಡು ಕೋಳಿಗಳೊಂದಿಗೆ ಉಪ್ಪಿನಂಗಡಿ ಬಸ್‌ ನಿಲ್ದಾಣದಲ್ಲಿ ಸಕಲೇಶಪುರದ ಕಡೆಗೆ ಹೋಗುವ ಬಸ್ಸನ್ನೇರಿದ್ದರು. ಸೀಮಿತ ನಿಲುಗಡೆಯನ್ನು ಹೊಂದಿದ್ದ ಈ ಬಸ್ಸಿನಲ್ಲಿ ಸಕಲೇಶಪುರದ ಟಿಕೆಟ್‌ ದರ 77 ರೂ.ಗಳನ್ನು ಪಾವತಿಸಬೇಕಾಗಿತ್ತು. ಆದರೆ, ಬಸ್‌ ನಿರ್ವಾಹಕ ಎರಡು ಕೋಳಿಗಳಿಗೂ ಸೇರಿಸಿ 154 ರೂ.ಟಿಕೆಟ್‌ ನೀಡಲು ಮುಂದಾದ.

ಈ ಕುರಿತು ಪ್ರಯಾಣಿಕ ಪ್ರಶ್ನಿಸಿದಾಗ, ಜೀವಂತ ಕೋಳಿಗಳ ಪ್ರಯಾಣಕ್ಕೂ ಬಸ್ಸಿನಲ್ಲಿ ಅರ್ಧ ಟಿಕೆಟ್‌ ನಿಯಮ ಅನ್ವಯವಾಗುತ್ತದೆ ಎಂದು ನಿರ್ವಾಹಕರು ತಿಳಿಸಿದರು. ಇದನ್ನು ಪ್ರಯಾಣಿಕ ಬಲವಾಗಿ ಆಕ್ಷೇಪಿಸಿದಾಗ, ಇಬ್ಬರ ನಡುವೆ ವಾಗ್ವಾದ ನಡೆಯಿತು.

ಉಳಿದ ಬಸ್‌ಗಳ ನಿರ್ವಾಹಕರೂ ನಿಯಮದ ಕುರಿತು ಪ್ರಯಾಣಿಕನಿಗೆ ಮನವರಿಕೆ ಮಾಡಿಕೊಟ್ಟರು. ಕೊನೆಗೆ, ಇನ್ನೆಂದೂ ಕೋಳಿಗಳೊಂದಿಗೆ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುವುದಿಲ್ಲವೆಂದು ಶಪಥ ಮಾಡಿ, ಪ್ರಯಾಣಿಕ ಬಸ್ಸಿನಿಂದ ಇಳಿದು ಹೋದ. ಆದರೆ, ಇದಾವುದನ್ನೂ ಅರಿಯದ ಕೋಳಿಗಳು ಚೀಲದಲ್ಲಿ ಕೊಕ್ಕೊಕ್ಕೋ ಎನ್ನುತ್ತಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next