ಎಚ್.ಡಿ.ಕೋಟೆ: ಮೈಸೂರು ನಗರದಿಂದ ಜನರನ್ನು ತುಂಬಿಕೊಂಡು ಸರಗೂರು ಪಟ್ಟಣದ ಕಡೆಗೆ ಮೈಸೂರು-ಮಾನಂದವಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಮಾರ್ಗ ಮಧ್ಯೆ ಬರೇಡಿಹಳ್ಳಿ ಮರದ ಕೆರೆಯ ಸಮೀಪ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗದ್ದೆಗೆಪಲ್ಟಿ ಹೊಡೆದಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಂಗಳವಾರ ಬೆಳಗ್ಗೆ 6 ಗಂಟೆಯಲ್ಲಿ ಈ ಅಪಘಾತ ಸಂಭವಿಸಿದ್ದು. ಬಸ್‌ನಲ್ಲಿದ್ದ ಯಾವ ಪ್ರಯಾಣಿಕರಿಗೂ ತೊಂದರೆ ಆಗಿಲ್ಲ, ಕೆಲ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳು ಆಗಿವೆ. ಒಂದು ವೇಳೆ ಬಸ್ ಬಲಭಾಗದ ಕೆರೆಗೆ ಉರುಳಿದ್ದರೆ ಭಾರಿ ಅನಾಹುತವೇ ಸಂಭವಿಸುವ ಸಾಧ್ಯತೆ ಇತ್ತು.
ಅಪಘಾತಕ್ಕೆ ಚಾಲಕನ ನಿರ್ಲಕ್ಷ್ಯ ಹಾಗೂ ವೇಗ ಕಾರಣ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿ ಚಾಲಕನ ಮೇಲೆ ಹಲ್ಲೆಗೆ ಮುಂದಾಗಿ ಜಟಾಪಟಿ ನಡೆಯಿತು ಎಂದು ತಿಳಿದು ಬಂದಿದೆ. ಇನ್ನೂ ಕೆಲ ಪ್ರಯಾಣಿಕರು ಬಸ್‌ನಿಂದ ಹೊರ ಬಂದ ಕೂಡಲೇ ಬದುಕಿದೆಯಾ ಬಡ ಜೀವವೇ ಎಂದು ಏದುಸಿರು ಬಿಡುತ್ತಾ, ತಮ್ಮ ಊರುಗಳಿಗೆ ಸಿಕ್ಕ ಸಿಕ್ಕ ವಾಹನಗಳಲ್ಲಿ ತೆರಳಿದರು.
ಈ ಭಾಗದಲ್ಲಿ ಪದೇ ಪದೆ ಕೆಎಸ್‌ಆರ್‌ಟಿಸಿ ಬಸ್‌ಗಳು ಪಲ್ಟಿಯಾದ ಘಟನೆಗಳು ಜರುಗುತಿದ್ದರೂ ಇಲ್ಲಿನ ಕೆರೆಯ ಏರಿಯ ರಸ್ತೆಗೆ ತಡೆಗೊಡೆ ನಿರ್ಮಿಸಲು ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನೂ ದಿನಲೂ ಈ ಭಾಗದಲ್ಲೇ ಜನಪ್ರತಿನಿಧಗಳು ಸಂಚರಿಸಿದರೂ ಕಾಳಜಿ ತೋರುತ್ತಿಲ್ಲ ಸ್ಥಳೀಯ ಮುಖಂಡ ಯದುನಂದನ್ ಆಕ್ರೋಶ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಾದರೂ ಈ ಭಾಗದಲ್ಲಿ ರಸ್ತೆ ಬದಿಗೆ ತಡೆಗೊಡೆ ನಿರ್ಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.