ಹೂವಿನಹಿಪ್ಪರಗಿ: ಗ್ರಾಮೀಣ ಜನರ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಜಲಜೀವನ ಮಿಷನ್ ಯೋಜನೆಯಲ್ಲಿ ಪ್ರತಿ ಮನೆ ಮನೆಗಳಿಗೂ ನಳಗಳನ್ನು ಜೋಡಿಸುವ ಮೂಲಕ ಕುಡಿಯುವ ನೀರು ಒದಗಿಸುವ ಕಾಮಗಾರಿ ಕೈಗೊಂಡಿದ್ದು ಪ್ರತಿಯೊಬ್ಬರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಹೇಳಿದರು.
ಬಸವನಬಾಗೇವಾಡಿ ತಾಲೂಕಿನ ಬ್ಯಾಕೋಡ ಗ್ರಾಮದ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಹಯೋಗದ ಕಾಮಗಾರಿಯಾದ ಇದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಇಲಾಖೆಯಿಂದ 2021-22ನೇ ಸಾಲಿನ ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ ಅಂದಾಜು 80.74 ಲಕ್ಷ ರೂ. ವೆಚ್ಚದಲ್ಲಿ ಮನೆ ಮನೆಗೆ ನಳ ಸಂಪರ್ಕ ಯೋಜನೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಗ್ರಾಮಗಳ ಅಭಿವೃದ್ಧಿಗಾಗಿ ನಡೆಯುವ ಕಾಮಗಾರಿಗಳು ಗುಣಮಟ್ಟದ್ದಾಗಿರಬೇಕಲ್ಲದೆ ಕನಿಷ್ಟ 30 ವರ್ಷಗಳವರೆಗೆ ಬಾಳಿಕೆ ಬರುವಂತಾಗಬೇಕು. ಸರ್ಕಾರ ಗ್ರಾಮೀಣ ಭಾಗದ ಜನರಿಗಾಗಿ ಸಾಕಷ್ಟು ಯೋಜನೆ ಜಾರಿಗೊಳಿಸುತ್ತಿದೆ. ಈ ಎಲ್ಲ ಯೋಜನೆಗಳು ಕ್ಷೇತ್ರದ ಜನರ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದು ಹೇಳಿದರು.
ಗ್ರಾಪಂ ಉಪಾಧ್ಯಕ್ಷ ರಾಮನಗೌಡ ಬಿರಾದಾರ, ಮುಖಂಡ ಅವ್ವಣ್ಣ ಗ್ವಾತಗಿ, ಮಲ್ಲನಗೌಡ ಬಿರಾದಾರ, ಹನುಮಂತರಾಯಗೌಡ ಪಾಟೀಲ, ಸಿ.ಎನ್. ಹಿರೇಮಠ, ವಿನೋದ, ಎಇಇ ಸತೀಶ ಪಾಟೀಲ, ಎಇ ಎಸ್.ಎ.ಮುದ್ದೇಬಿಹಾಳ ಸೇರಿದಂತೆ ಇತರರು ಇದ್ದರು.