ಬೆಂಗಳೂರು: ಆರ್ಯ ವೈಶ್ಯ ಅಭಿವೃದ್ಧಿ ನಿಗಮಕ್ಕೆ ಮುಂದಿನ ಬಜೆಟ್‌ನಲ್ಲಿ 100 ಕೋಟಿ ರೂ. ಮೀಸಲಿಡಬೇಕೆಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಪುಟ್ಟರಂಗ ಶೆಟ್ಟಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಆರ್ಯವೈಶ್ಯ ಅಭಿವೃದ್ಧಿ ನಿಗಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆರ್ಯ ವೈಶ್ಯ ಸಮುದಾಯದ ಬಹು ದಿನಗಳ ಬೇಡಿಕೆಗೆ ಸಿಎಂ ಕುಮಾರಸ್ವಾಮಿ ಸ್ಪಂದಿಸಿರು ವುದರಿಂದ ಆರ್ಯವೈಶ್ಯ ಸಮುದಾಯ ಖುಷಿಯಾಗಿದೆ. ಈ ನಿಗಮ ಸ್ಥಾಪನೆಯಾಗಲು ನೂತನ ಅಧ್ಯಕ್ಷ ಟಿ.ಎ. ಶರವಣ ಅವರ ಶ್ರಮ ಬಹಳಷ್ಟಿದೆ. ಈ ನಿಗಮದಿಂದ ಆರ್ಯ ವೈಶ್ಯ ಸಮುದಾಯದ ವಿದ್ಯಾರ್ಥಿಗಳಿಗೆ ಜಾತಿ ಪ್ರಮಾಣ ಪತ್ರ ಸಿಗುವಂತಾಗಬೇಕು ಎಂದರು.
ಆರ್ಯವೈಶ್ಯ ನಿಗಮದ ನೂತನ ಅಧ್ಯಕ್ಷ ಟಿ.ಎ. ಶರವಣ ಮಾತನಾಡಿ, ಈ ಸಮುದಾಯದಲ್ಲಿ ಎಲ್ಲರೂ ಶ್ರೀಮಂತರಿಲ್ಲ. ಬಡವರೂ ಇದ್ದಾರೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾಗಿದ್ದರೂ, ಈ ಸಮುದಾಯವನ್ನು ಯಾವ ಸರ್ಕಾರಗಳೂ ಗುರುತಿಸಿರಲಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಗುರುತಿಸಿದ್ದಾರೆ. ಅವರು ನುಡಿದಂತೆ ನಡೆದಿದ್ದಾರೆ ಎಂದು ಹೇಳಿದರು.
ಆರ್ಯ ವೈಶ್ಯ ಸಮುದಾಯದವರು ಸ್ವಂತ ಉದ್ಯೋಗ ಕೈಗೊಳ್ಳಲು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು ನಿಗಮಕ್ಕೆ 10 ಕೋಟಿ ರೂ. ನೀಡಲಾಗಿದೆ. ಮುಂದಿನ ಬಜೆಟ್‌ನಲ್ಲಿ 100 ಕೋಟಿ ಮೀಸಲಿಡಬೇಕು. ವಿದ್ಯಾರ್ಥಿಗಳಿಗೆ ಬೆಂಗಳೂರು ಹೊರ ವಲಯದಲ್ಲಿ ಹಾಸ್ಟೆಲ್ ತೆರೆಯಲು ಕನಿಷ್ಠ 10 ಎಕರೆ ಜಮೀನು ನೀಡಬೇಕು. ಹಾಗೂ ರಾಜ್ಯ ಸರ್ಕಾರದ ವತಿಯಿಂದ ವಾಸವಿ ಜಯಂತಿಯನ್ನು ಆಚರಿಸಬೇಕು ಎಂದು ಇದೇ ಸಂದರ್ಭದಲ್ಲಿ ಶರವಣ ಮನವಿ ಮಾಡಿದರು.
Advertisement