Advertisement

ಕಲಿತ ಶಾಲೆ ಋಣ ತೀರಿಸುವ ಕಾರ್ಯ ಮಾಡಿ: ಹೊರಟ್ಟಿ 

04:31 PM Jul 29, 2018 | |

ಹುಬ್ಬಳ್ಳಿ: ಕಲಿತ ಶಾಲೆ ಅಭಿವೃದ್ಧಿಗೊಳಿಸುವುದಕ್ಕಿಂತ ದೊಡ್ಡ ಕಾರ್ಯ ಮತ್ತೂಂದಿಲ್ಲ. ಉನ್ನತ ಸ್ಥಾನಕ್ಕೇರಿದ ಪ್ರತಿಯೊಬ್ಬರೂ ತಾವು ಕಲಿತ ಶಾಲೆಗೆ ಅಗತ್ಯ ನೆರವು ನೀಡಬೇಕು ಎಂದು ವಿಧಾನ ಪರಿಷತ್‌ ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಇಲ್ಲಿನ ಹೊಸೂರಿನ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆ-16ರಲ್ಲಿ ಎಕಸ್‌ ಫೌಂಡೇಶನ್‌ ವತಿಯಿಂದ ನಿರ್ಮಿಸಿದ ಅನುಸೂಯಾ ಮೆಳ್ಳಿಗೇರಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

Advertisement

ಇಂದು ಉನ್ನತ ಮಟ್ಟದಲ್ಲಿರುವ ಬಹುತೇಕರು ಸರಕಾರಿ ಶಾಲೆಯಲ್ಲೇ ಶಿಕ್ಷಣ ಪಡೆದವರು. ಹೀಗಾಗಿ ಆ ಶಾಲೆಯ ಋಣ ತೀರಿಸುವ ನಿಟ್ಟಿನಲ್ಲಿ ಅಭಿವೃದ್ಧಿಗೆ ಅಗತ್ಯ ನೆರವು ನೀಡಬೇಕು. ಮೆಳ್ಳಿಗೇರಿ ಕುಟುಂಬದ ಸದಸ್ಯರು ತಾವು ಕಲಿತ ಸರಕಾರಿ ಶಾಲೆಯಲ್ಲಿ ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರ ನಿರ್ಮಿಸಿರುವುದು ಶ್ಲಾಘನೀಯ ಎಂದರು.

ಸುಮಾರು 2800 ಸರಕಾರಿ ಶಾಲೆಗಳು ಕೇವಲ 10ಕ್ಕಿಂತ ಕಡಿಮೆ ವಿದ್ಯಾರ್ಥಿಗಳನ್ನು ಹೊಂದಿವೆ. ಹೀಗಾಗಿ ಶಿಕ್ಷಕರು ಪ್ರಾಮಾಣಿಕವಾಗಿ ಕೆಲಸ ಮಾಡುವುದರೊಂದಿಗೆ ಸರಕಾರಿ ಶಾಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ದಾಖಲಾಗುವಂತೆ ನೋಡಿಕೊಳ್ಳಬೇಕು. ನಿರ್ಲಕ್ಷ್ಯ ಮುಂದುವರಿಸಿದರೆ ಮುಂದೊಂದು ದಿನ ಸರಕಾರಿ ಶಾಲೆಗಳು ಉಳಿಯುವುದು ಕಷ್ಟ ಎಂದು ಆತಂಕ ವ್ಯಕ್ತಪಡಿಸಿದರು.

ಎಕಸ್‌ ಫೌಂಡೇಶನ್‌ ಸಿಇಒ ಹಾಗೂ ಶಾಲೆಯ ಹಳೆ ವಿದ್ಯಾರ್ಥಿ ಅರವಿಂದ ಮೆಳ್ಳಿಗೇರಿ ಮಾತನಾಡಿ, ನನಗೆ ಈ ಸ್ಥಾನ ತಂದು ಕೊಡುವಲ್ಲಿ ಈ ಶಾಲೆಯ ಕೊಡುಗೆ ಅಪಾರವಾಗಿದೆ. ಅಂದು ನಾವು ಕಲಿತ ಶಿಕ್ಷಣ ಕ್ರಮವೇ ಇಂದಿಗೂ ಮುಂದುವರಿದುಕೊಂಡು ಬಂದಿದೆ. ನಮ್ಮ ಶಾಲೆಯ ಹಾಗೂ ಈ ಭಾಗದ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಶಿಕ್ಷಣ ಪಡೆಯಬೇಕು ಎನ್ನುವುದು ಈ ಕೇಂದ್ರ ನಿರ್ಮಾಣಕ್ಕೆ ಕಾರಣವಾಗಿದೆ. ಇದು ಮೊದಲ ಪ್ರಯತ್ನವಾಗಿದ್ದು, ನಂತರ ಇತರೆಡೆ ಆರಂಭಿಸುವ ಯೋಜನೆಯಿದೆ. ಅಗಸ್ತ್ಯ ಫೌಂಡೇಶನ್‌ ಇದರ ನಿರ್ವಹಣೆ ಭಾರ ಹೊತ್ತಿದೆ. ಇದರ ಪ್ರತಿಯೊಂದು ನಿರ್ವಹಣೆಗೆ ಆರ್ಥಿಕ ನೆರವನ್ನು ಎಕಸ್‌ ಫೌಂಡೇಶನ್‌ ಭರಿಸುತ್ತದೆ. ಈ ಭಾಗದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಅನುಸೂಯಾ ಮೆಳ್ಳಿಗೇರಿ, ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ, ಉಪಮಹಾಪೌರ ಮೇನಕಾ ಹುರಳಿ, ಪಾಲಿಕೆ ಸದಸ್ಯರಾದ ಶಿವು ಹಿರೇಮಠ, ಲೀನಾ ಮಿಸ್ಕಿನ್‌, ಶಿಕ್ಷಣ ಇಲಾಖೆ ಅಪರ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ, ಪಾಲಿಕೆ ಹೆಚ್ಚುವರಿ ಆಯುಕ್ತ ಎ.ಆರ್‌.ದೇಸಾಯಿ, ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಕುಂಬಾರ, ಅಗಸ್ತ್ಯ ಫೌಂಡೇಶನ್‌ ವ್ಯವಸ್ಥಾಪಕ ಟ್ರಸ್ಟಿ ಮಹಾವೀರ ಕುಮಾರ ಇದ್ದರು.

Advertisement

20 ಕಿಮೀ ವ್ಯಾಪ್ತಿಯ ಸರಕಾರಿ ಶಾಲೆ ವಿದ್ಯಾರ್ಥಿಗಳಿಗೆ ಪ್ರಯೋಜನ
ಅನುಸೂಯಾ ಮೆಳ್ಳಿಗೇರಿ ವಿಜ್ಞಾನ-ತಂತ್ರಜ್ಞಾನ ಕೇಂದ್ರವನ್ನು ಸರ್ವ ಶಿಕ್ಷಣ ಅಭಿಯಾನ ಮತ್ತು ಅಗಸ್ತ್ಯ ಫೌಂಡೇಶನ್‌ ಸಹಯೋಗದಲ್ಲಿ ಎಕಸ್‌ ಫೌಂಡೇಶನ್‌ ನಿರ್ಮಿಸಿದೆ. ಸರಕಾರಿ ಶಾಲೆ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ, ಜೀವಶಾಸ್ತ್ರ , ರೊಬೊಟಿಕ್ಸ್‌, ಐಟಿ, ಮಾಧ್ಯಮ ಕಲೆ, ಸೃಜನಶೀಲ ಬರಹ ಸೇರಿದಂತೆ ವಿವಿಧ ವಿಷಯಗಳನ್ನು ಪ್ರಾಯೋಗಿಕವಾಗಿ ಕಲಿಸಲು ಈ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ. ಶಿಕ್ಷಕರು ಕೂಡ ಇದರಿಂದ ಪ್ರಯೋಜನ ಪಡೆಯಬಹುದಾಗಿದೆ. ಅಗಸ್ತ್ಯ ಫೌಂಡೇಶನ್‌ ಶಿಕ್ಷಣ ನೀಡುವ ಕಾರ್ಯವನ್ನು ನಿರ್ವಹಿಸಲಿದೆ. ಸುಮಾರು 20 ಕಿಮೀ ವ್ಯಾಪ್ತಿಯ ಎಲ್ಲಾ ಸರಕಾರಿ ಶಾಲೆ ವಿದ್ಯಾರ್ಥಿಗಳು ಇಲ್ಲಿಗೆ ಬಂದು ವಿಜ್ಞಾನ ವಿಷಯವನ್ನು ಪ್ರಾಯೋಗಿಕವಾಗಿ ಕಲಿಯಲಿದ್ದಾರೆ. ಇದಕ್ಕಾಗಿ ಫೌಂಡೇಶನ್‌ ವತಿಯಿಂದ ವಾಹನ ಸೌಲಭ್ಯವೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next