Advertisement

ಸತ್ಯಸಾಯಿ ಸಂಜೀವನಿ ಹೃದ್ರೋಗ ಸರಣಿ ಆಸ್ಪತ್ರೆಗೆ ಚಾಲನೆ

05:48 PM Nov 25, 2022 | Team Udayavani |

ಚಿಕ್ಕಬಳ್ಳಾಪುರ: ತಾಲೂಕಿನ ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ ಭಗವಾನ್‌ ಶ್ರೀಸತ್ಯಸಾಯಿ ಬಾಬಾ ಅವರ 97ನೇ ಜನ್ಮ ದಿನದ ಪ್ರಯುಕ್ತ ಸತ್ಯಸಾಯಿ ಸಂಜೀವನಿ ಹೃದ್ರೋಗ ಚಿಕಿತ್ಸಾ ಸರಣಿ ಆಸ್ಪತ್ರೆಯನ್ನು ಜಯದೇವ ಆಸ್ಪತ್ರೆ ಮುಖ್ಯಸ್ಥ ಡಾ.ಸಿ.ಎನ್‌.ಮಂಜುನಾಥ್‌ ಲೋಕಾರ್ಪಣೆ ಮಾಡಿದರು.

Advertisement

ಈ ವೇಳೆ ಮಾತನಾಡಿದ ಡಾ.ಸಿ.ಎನ್‌.ಮಂಜುನಾಥ್‌, ಬದಲಾದ ಜೀವನ ಶೈಲಿಯಿಂದಾಗಿ ಅಮೂಲ್ಯ ಜೀವಗಳು ಜೀವನದ ಅರ್ಧ ದಾರಿಯಲ್ಲಿ ಕಮರಿ ಹೋಗುತ್ತಿವೆ. ಅವರ ಆರೋಗ್ಯ ರಕ್ಷಣೆಯ ಖರ್ಚು ಕೂಡ ದುಬಾರಿ, ಜನಸಾಮಾನ್ಯರು ಅದನ್ನು ಊಹಿಸಲೂ ಸಾಧ್ಯವಿಲ್ಲ. ಅಂತಹದರಲ್ಲಿ ಯಾವುದೇ ಬಿಲ್ಲಿಂಗ್‌ ಕೌಂಟರ್‌ನ ವ್ಯವಸ್ಥೆ ಇಲ್ಲದೆ ಉಚಿತ ಜೀವದಾನ ಮಾಡುವ ಸತ್ಯಸಾಯಿ ಆರೋಗ್ಯ ಆಂದೋಲನ ಪ್ರಪಂಚಕ್ಕೆ ಮಾದರಿ ಎಂದು ಹೇಳಿದರು.

ಪ್ರೇಮದ ಸಾಕಾರ ಮೂರ್ತಿ: ಭಗವಾನ್‌ ಸತ್ಯಸಾಯಿ ಬಾಬಾ ಅವರು ಪ್ರೇಮದ ಸಾಕಾರ ಮೂರ್ತಿಯಾಗಿ ಮನುಕುಲದ ನಡುವೆ ಅವತರಿಸಿ, ಉದ್ದರಿಸುವ ಕಾರ್ಯವನ್ನು ಮಾಡಿದರು. ಅವರು ಮರು ಅವತಾರ ಪಡೆದಿದ್ದಾರೆ ಎಂದರೆ ಅದು ಸದ್ಗುರು ಮಧುಸೂದನ ಸಾಯಿ ಅಲ್ಲದೆ, ಬೇರೆ ಯಾರೂ ಆಗಿರಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಉಚಿತ ಆರೋಗ್ಯ ಸೇವೆ: ಶ್ರೀಸತ್ಯಸಾಯಿ ಸಂಜೀವನಿ ಹೃದ್ರೋಗ ಸರಣಿ ಆಸ್ಪತ್ರೆಗಳಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿ ಸತ್ಯ ಸಾಯಿ ಗ್ರಾಮದಲ್ಲಿ ಸ್ಥಾಪನೆಗೊಂಡ ಆಸ್ಪತ್ರೆಯು ಐದನೇಯದ್ದಾಗಿದೆ. ಚಿಕ್ಕಬಳ್ಳಾಪುರ, ಸುತ್ತಮುತ್ತಲಿನ ಜಿಲ್ಲೆಗಳ ಜನರ ಪಾಲಿಗೆ ಸದ್ಗುರು ಮಧುಸೂದನ ಸಾಯಿ ಅವರಿಂದ ವರರೂಪದಲ್ಲಿ ಲಭಿಸಿದಂತಾಗಿದೆ. ಗ್ರಾಮೀಣ ಜನರ ಆರೋಗ್ಯ ದೃಷ್ಟಿಯಲ್ಲಿಟ್ಟುಕೊಂಡು ಸಂಪೂರ್ಣ ಉಚಿತ ಆರೋಗ್ಯ ಸೇವೆ ಸಲ್ಲಿಸುವುದಕ್ಕೆ ಈ ವೈದ್ಯಾಲಯವು ಸರ್ವಸನ್ನದ್ಧವಾಗಿದೆ ಎಂದರು.

ಸತ್ಯಸಾಯಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಸಿ.ಶ್ರೀನಿವಾಸ್‌ ಸಂಜೀವನಿ ಸರಣಿ ಆಸ್ಪತ್ರೆಗಳ ಕಾರ್ಯವೈಖರಿ, ಮುಂದಿನ ಯೋಜನೆಗಳು, ಹಿಂದಿನ ಅನುಭವಗಳ ಕುರಿತು ಮಾತನಾಡಿದರು. ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಸದ್ಗುರು ಮಧುಸೂದನ ಸಾಯಿ ಮಾತನಾಡಿ, ಆಸ್ಪತ್ರೆಗಳು ಹೆಚ್ಚಾಗಿ ಏಕೆ ಸ್ಥಾಪನೆಗೊಳ್ಳಬೇಕು ಎಂಬ ವಿಚಾರವನ್ನು ದೃಷ್ಟಾಂತ ಸಮೇತ ವಿವರಿಸಿದರು.

Advertisement

ಈ ವೇಳೆ ಸತ್ಯಸಾಯಿ ಮಾನವ ಅಭ್ಯುದಯ ವಿವಿ ಕುಲಾ ಪತಿ ಬಿ.ಎನ್‌.ನರಸಿಂಹಮೂರ್ತಿ, ಉಪಕುಲಪತಿ ಡಾ.ಶ್ರೀಕಂಠ ಮೂರ್ತಿ, ಶ್ರೀಸತ್ಯಸಾಯಿ ವೈದ್ಯಕೀಯ ಕೇಂದ್ರ ಮುದ್ದೇನಹಳ್ಳಿ ಇದರ ನಿರ್ದೇಶಕರಾದ ಡಾ.ಎ.ಆರ್‌.ರಘುಪತಿ, ಸತ್ಯಸಾಯಿ ಸರಳಾ ಸ್ಮಾರಕ ಆಸ್ಪತ್ರೆಯ ಮುಖ್ಯಸ್ಥ ಡಾ.ವಾಸುದೇವ ಮೂರ್ತಿ, ಜಯದೇವ ವೈದ್ಯಕೀಯ ಸಂಸ್ಥೆಯ ಡಾ.ಶ್ರೀನಿವಾಸ್‌, ಡಾ.ಬಿ.ಸಿ.ನಾಗೇಶ್‌ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next