ಗಜೇಂದ್ರಗಡ: ಕ್ರಿಕೆಟ್ ಇಡೀ ವಿಶ್ವವನ್ನು ಆಕರ್ಷಿಸುವ ಕ್ರೀಡೆಯಾಗಿದೆ. ಯುವಕರು ಕ್ರೀಡೆಯಲ್ಲಿ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕೆ ವಿನಃ, ನೆಮ್ಮದಿ ಕದಡುವಂತೆ ಮಾಡಿಕೊಳ್ಳಬಾರದು. ಈ ನಿಟ್ಟಿನಲ್ಲಿ ಯುವ ಪೀಳಿಗೆ ದೇಶದ ಕ್ರೀಡಾ ಶಕ್ತಿ ಎತ್ತಿ ಹಿಡಿಯುವ ಮೂಲಕ ಜಗತ್ತಿನೆಲ್ಲೆಡೆ ಭಾರತದ ಕೀರ್ತಿ ಪತಾಕೆ ಹಾರಿಸುವಂತಾಗಲಿ ಎಂದು ಬಾಗಮಾರ ಸೇವಾ ಸಮಿತಿ ಅಧ್ಯಕ್ಷ ಅಶೋಕ ಬಾಗಮಾರ ಹೇಳಿದರು.
ಪಟ್ಟಣದ ಭಗವಾನ ಮಹಾವೀರ ಜೈನ್ ಆರ್ಯುವೇದಿಕ ಮೆಡಿಕಲ್ ಕಾಲೇಜು ಮೈದಾನದಲ್ಲಿ ಗಜೇಂದ್ರಗಡ ನ್ಪೋರ್ಟ್ಸ್ ಅಕಾಡೆಮಿ ವತಿಯಿಂದ ನಡೆದ ಅಂಡರ್ 16-ಮಹಾವೀರ ಜೈನ್ ಇಂಟರ್ ಕ್ಯಾಂಪ್ ಪಂದ್ಯಾವಳಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು.
ಭಾರತ ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆಗೈದು ಎಲ್ಲ ರಾಷ್ಟ್ರಗಳನ್ನು ಮೀರಿ ವಿಶ್ವ ಮಟ್ಟದಲ್ಲಿ ಅಗ್ರ ಸ್ಥಾನಕ್ಕೆರಲು ಪ್ರತಿಯೊಬ್ಬ ಭಾರತೀಯನ ಪ್ರೋತ್ಸಾಹ ಅಗತ್ಯವಾಗಿದೆ. ಈ ದಿಸೆಯಲ್ಲಿ ಕ್ರೀಡಾಕೂಟಗಳು ಎಲ್ಲೆಡೆ ಹೆಚ್ಚೆಚ್ಚು ನಡೆಯುತ್ತಿವೆ. ಪ್ರಸಕ್ತ ಭಾರತದ ಕ್ರೀಡಾ ರಂಗ ಉನ್ನತ ಮಟ್ಟಕ್ಕೇರುವ ನಿಟ್ಟಿನಲ್ಲಿ ಎಲ್ಲ ಹಂತದಲ್ಲೂ ಉತ್ತಮ ಸಾಧನೆ ಮಾಡುತ್ತಿದೆ. ವಿಶ್ವದ ಹಲವಾರು ರಾಷ್ಟ್ರಗಳು ಕ್ರೀಡಾ ಕ್ಷೇತ್ರದಲ್ಲಿ ಬಲಿಷ್ಠವಾಗಿವೆ. ಅಂಥ ರಾಷ್ಟ್ರಗಳನ್ನು ಹಿಮ್ಮೆಟಿಸಿ ಭಾರತ ಮುನ್ನಗ್ಗುತ್ತಿದೆ ಎಂದರು.
ಭಗವಾನ್ ಮಹಾವೀರ ಜೈನ್ ಆಯುರ್ವೆàದಿಕ್ ಮೆಡಿಕಲ್ ಕಾಲೇಜು ಕಾರ್ಯದರ್ಶಿ ಅಜೀತ ಬಾಗಮಾರ ಮಾತನಾಡಿ, ಮುಂದಿನ ದಿನಗಳಲ್ಲಿ ವಿಶ್ವ ಮಟ್ಟದ ಯುವ ರಾಷ್ಟ್ರವೆಂದು ಪರಿಗಣಿಸಲಾಗುತ್ತಿರುವ ಭಾರತದ ಯುವ ಜನರ ದೈಹಿಕ ಬೆಳವಣಿಗೆಯನ್ನು ವೃದ್ಧಿಗೊಳಿಸಿ, ಅವರಲ್ಲಿ ಚೈತನ್ಯ ಮನೋಭಾವ ಮೂಡಿಸುವ ನಿಟ್ಟಿನಲ್ಲಿ ಹೆಚ್ಚೆಚ್ಚು ಕ್ರೀಡೆಗಳನ್ನು ಏರ್ಪಡಿಸುವ ಅಗತ್ಯತೆಯಿದೆ. ಯುವ ಜನತೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದು ಅಗತ್ಯವೂ ಇದೆ. ಅವರಿಗೆ ಸೂಕ್ತ ಪ್ರೋತ್ಸಾಹ, ಮಾರ್ಗದರ್ಶನ ಮತ್ತು ಸೌಲಭ್ಯಗಳನ್ನು ಒದಗಿಸಿದಲ್ಲಿ ಮಾತ್ರ ಭವಿಷ್ಯದ ಭಾರತವನ್ನು ಶಕ್ತಿಶಾಲಿಯಾಗಿ ನಿರ್ಮಿಸಬಹುದು. ಪ್ರಸ್ತುತ ದಿನಮಾನಗಳಲ್ಲಿ ಬೌದ್ಧಿಕ ಬೆಳವಣಿಗೆಯಲ್ಲಿ ಅಪಾರ ಸಾಧನೆ ಮಾಡಿರುವುದನ್ನು ಕಾಣುತ್ತಿರುವ ಬೆನ್ನಲ್ಲೇ ಅದಕ್ಕೆ ಹೆಚ್ಚಿನ ಜನ ಮಾನಸಿಕ ಒತ್ತಡ ಹಾಗೂ ದೈಹಿಕ ತೊಂದರೆಗಳಿಂದ ಬಳಲುತ್ತಿರುವುದು ಕಳವಳಕಾರಿ ಎಂದರು.
ಯುವಕರು ಕ್ರೀಡೆಯನ್ನು ಟೈಂಪಾಸ್ ಚಟುವಟಿಕೆಯನ್ನಾಗಿ ಸ್ವೀಕರಿಸದೇ, ಬದುಕಿನ ಅವಿಭಾಜ್ಯ ಅಂಗವೆಂದು ತಿಳಿಯಬೇಕು. ಅಂದಾಗ ಮಾತ್ರ ಏನನ್ನಾದರೂ ಸಾಧನೆಗೈಯಲು ಸಾಧ್ಯವಾಗುತ್ತದೆ. ಇದೇ ಮೊದಲ ಬಾರಿಗೆ ಅಂಡರ್ 16 ಕ್ರಿಕೆಟ್ ಪಂದ್ಯಾವಳಿ ನಡೆಸುವ ಮೂಲಕ ಪ್ರತಿಭಾವಂತ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದರು. ಈ ವೇಳೆ ಅಭಿನಂದನ ಪಾಟೀಲ, ಎ.ಡಿ.ಕೋಲಕಾರ, ರವಿ ಗಡೇದವರ, ಕೆ.ಕೆ. ಸರಕಾವಸ ಇತರರಿದ್ದರು.