ಕಾಸರಗೋಡು: ಮುಳಿಯಾರಿನಲ್ಲಿ ನಿರ್ಮಿಸಲಾಗುವ ಎಂಡೋಸಲ್ಫಾನ್ ಪುನರ್ವಸತಿ ಗ್ರಾಮದ ಪ್ರಥಮ ಹಂತದ ಕಾಮಗಾರಿಯನ್ನು 10 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಟೀಚರ್ ತಿಳಿಸಿದರು.
ಅವರು ರವಿವಾರ ವೀಡಿಯೋ ಕಾನ್ಫರೆನ್ಸ್ ಮೂಲಕ ಎಂಡೋಸಲ್ಫಾನ್ ಪುನರ್ವಸತಿ ಗ್ರಾಮದ ಶಿಲಾನ್ಯಾಸ ನಡೆಸಿ ಅವರು ಮಾತನಾಡಿದರು.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಲ್ಲಿ ಪುನರ್ವಸತಿ ಗ್ರಾಮದ ಪ್ರಾಥಮಿಕ ಹಂತದ ಕಾಮಗಾರಿ ಪೂರ್ಣಗೊಳಿಸಲಾಗುವುದು. ಇದಕ್ಕೆ 5 ಕೋಟಿ ರೂ. ಮೀಸಲಿಡಲಾಗಿದೆ.
ಜಗತ್ತಿನ ಸುಮಾರು 24 ಪುನರ್ವಸತಿ ಮಾದರಿಗಳನ್ನು ಅಭ್ಯಸಿಸಿ, ಪರಿಣತರು ಮತ್ತು ಸ್ಥಳೀಯರ ಅಭಿಮತ ಸಂಗ್ರಹಿಸಿ ಪುನರ್ವಸತಿ ಗ್ರಾಮದ ಮಾಸ್ಟರ್ ಪ್ಲಾನ್ ಸಿದ್ಧಗೊಳಿಸಲಾಗಿದೆ. ಜಗತ್ತಿಗೇ ಮಾದರಿಯಾಗಬಲ್ಲ ಪುನರ್ವಸತಿ ಗ್ರಾಮ ಅಭಿವೃದ್ಧಿ ಪಡಿಸುವುದು ಯೋಜನೆಯ ಉದ್ದೇಶ. ಇದಕ್ಕಾಗಿ ಮುಳಿಯಾರು ಗ್ರಾ.ಪಂ.ನ 25 ಎಕ್ರೆ ಜಾಗವನ್ನು ತೆಗೆದುಕೊಳ್ಳಲಾಗಿದೆ ಎಂದರು.
ಶಾಸಕ ಕೆ. ಕುಂಞಿರಾಮನ್ ಪ್ರಧಾನ ಭಾಷಣ ಮಾಡಿದರು. ಕಾರಡ್ಕ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಓಮನಾ ರಾಮಚಂದ್ರನ್, ಮುಳಿಯಾರು ಗ್ರಾ. ಪಂ. ಅಧ್ಯಕ್ಷ ಖಾಲಿದ್ ಬೆಳ್ಳಿಪ್ಪಾಡಿ, ಜಿ.ಪಂ. ಕಲ್ಯಾಣ ಸ್ಥಾಯೀ ಸಮಿತಿ ಅಧ್ಯಕ್ಷೆ ಎ.ಪಿ. ಉಷಾ ಉಪಸ್ಥಿತರಿದ್ದರು.
5 ಅಂಶಗಳಿಗೆ ಆದ್ಯತೆ
ಸಂತ್ರಸ್ತರ ಆರೋಗ್ಯ ಸಮಸ್ಯೆಗಳನ್ನು ಮೊದಲ ಹಂತದಲ್ಲೇ ಪತ್ತೆ ಮಾಡುವ, ಅವರಿಗೆ ಸಂರಕ್ಷಣೆ ಒದಗಿಸುವ, ವೈಜ್ಞಾನಿಕ ಪರಿಕರ ಒದಗಿಸುವ, 18 ವರ್ಷಕ್ಕಿಂತ ಮೇಲಿನ ವಯೋಮಾನದವರಿಗೆ ಪುನರ್ವಸತಿ ಖಚಿತ ಪಡಿಸುವ, ಸ್ವಂತ ಮನೆಯ ವಾತಾವರಣ ಕಲ್ಪಿಸುವ 5 ಅಂಶಗಳಿಗೆ ಯೋಜನೆಯಲ್ಲಿ ಆದ್ಯತೆ ನೀಡಲಾಗುವುದು. ಇದಕ್ಕಾಗಿ 72 ಕೋಟಿ ರೂ. ವೆಚ್ಚ ಮಾಡಲಾಗುವುದು. ರಾಜ್ಯ ಸರಕಾರದ ದೊಡ್ಡ ಕನಸಿನ ಯೋಜನೆಯಾಗಿರುವ ಇದರ ಅನುಷ್ಠಾನಕ್ಕೆ ಎಲ್ಲರ ಬೆಂಬಲ ಅಗತ್ಯ.
- ಕೆ.ಕೆ. ಶೈಲಜಾ ಟೀಚರ್ ,ಆರೋಗ್ಯ ಸಚಿವೆ, ಕೇರಳ