ಮಡಿಕೇರಿ : ಐತಿಹಾಸಿಕ ಮಡಿಕೇರಿ ದಸರಾ ಮಹೋತ್ಸವದಲ್ಲಿ ಮಹತ್ವ ಪಡೆದುಕೊಂಡಿರುವ ನಾಲ್ಕು ಶಕ್ತಿ ದೇವತೆಗಳ ಕರಗೋತ್ಸವ ಆರಂಭಗೊಂಡಿದೆ.àಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, àಕಂಚಿಕಾಮಾಕ್ಷಿ ಯಮ್ಮ, ದಂಡಿನ ಮಾರಿಯಮ್ಮ ಹಾಗೂ ಕೋಟೆ ಮಾರಿಯಮ್ಮ ಕರಗಗಳ ನಗರ ಸಂಚಾರದ ಮೂಲಕ ದಸರಾ ಜನೋತ್ಸವಕ್ಕೆ ಚಾಲನೆ ದೊರೆತಿದೆ.
ಅಲಂಕಾರ ಪೂಜೆ ಮತ್ತು ವಿವಿಧ ಧಾರ್ಮಿಕ ವಿಧಿ ವಿಧಾನಗಳ ನಂತರ ಪಂಪಿನ ಕೆರೆಯಿಂದ ಹೊರಟ ಕರಗಗಳು ಭಕ್ತರಿಂದ ಪೂಜೆ ಸ್ವೀಕರಿಸಿದವು. àಬಸವೇಶ್ವರ, ಚೌಡೇಶ್ವರಿ, ಕೋದಂಡರಾಮ ಹಾಗೂ ಕನ್ನಿಕಾ ಪರಮೇಶ್ವರಿ ದೇವಾಲಯಗಳು ಮತ್ತು ಪೇಟೆ ರಾಮ ಮಂದಿರಕ್ಕೆ ತೆರಳಿದ ಕರಗಗಳು ವಿಶೇಷ ಪೂಜೆಯನ್ನು ಸ್ವೀಕರಿಸಿ ಭಕ್ತಿಯ ಮೆರಗನ್ನು ಮೂಡಿಸಿದವು.
ಕುಂದುರುಮೊಟ್ಟೆ ದೇವಾಲಯದ ಕರಗವನ್ನು ಅರ್ಚಕ ಎಂ.ಹರೀಶ್,àಕೋಟೆ ಮಾರಿಯಮ್ಮ ದೇವಾಲಯದ ಕರಗವನ್ನು ಅರ್ಚಕ ಅನೀಸ್ ಕುಮಾರ್, ಕಂಚಿಕಾಮಾಕ್ಷಿ ದೇವಾಲಯದ ಕರಗವನ್ನು ಅರ್ಚಕ ನವೀನ್ ಕುಮಾರ್ ಹಾಗೂ ದಂಡಿನ ಮಾರಿಯಮ್ಮ ದೇವಾಯಲದ ಕರಗವನ್ನು ಜಿ.ಎಂ.ಉಮೇಶ್ ಹೊತ್ತು ನಗರ ಸಂಚಾರ ಆರಂಭಿಸಿದ್ದಾರೆ.
ಕರಗೋತ್ಸವ ಆರಂಭದ ಸಂದರ್ಭ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯರುಗಳಾದ ಎಂ.ಪಿ.ಸುನಿಲ್ ಸುಬ್ರಮಣಿ, ಶಾಂತೆಯಂಡ ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ. ಪನ್ನೇಕರ್, ದಸರಾ ಸಮಿತಿ ಕಾರ್ಯಾಧ್ಯಕ್ಷ ರಾಬಿನ್ ದೇವಯ್ಯ, ದಶಮಂಟಪತಿ ಸಮಿತಿ ಅಧ್ಯಕ್ಷ ರಂಜಿತ್ ಕುಮಾರ್ ಸೇರಿದಂತೆ ವಿವಿಧ ಉಪ ಸಮಿತಿಗಳ ಅಧ್ಯಕ್ಷರು ಪದಾಧಿಕಾರಿಗಳು ಹಾಜರಿದ್ದರು.
ಇತಿಹಾಸ
ಮಡಿಕೇರಿ ದಸರಾ ಕರಗ ಉತ್ಸವಕ್ಕೆ ಸುಮಾರು 225 ವರ್ಷಗಳ ಇತಿಹಾಸವಿದೆ ರಾಜರ ಆಳ್ವಿಕೆ ಕಾಲದಿಂದಲೇ ಈ ಆಚರಣೆ ನಡೆಯುತ್ತಾ ಬರುತ್ತಿದೆ. ಆಗಿನ ಕಾಲದಿಂದಲೂ ಮಡಿಕೇರಿಯಲ್ಲಿ ನೆಲೆಸಿರುವ ಗೌಳಿ ಸಮುದಾಯದ ಪೂಜಾರಿ ಮನೆತನ ದವರು ಈ ಕರಗೋತ್ಸವನ್ನು ನಡೆಸಿಕೊಂಡು ಬರುತ್ತಿರುವುದು ವಿಶೇಷ.