Advertisement

ಸಾಂಸ್ಕೃತಿಕ ಅರಿವು ಕಾರ್ಯಕ್ರಮಕ್ಕೆ ಚಾಲನೆ

12:26 PM Jul 18, 2017 | Team Udayavani |

ಮೈಸೂರು: ಡಾ.ಬಿ.ಆರ್‌.ಅಂಬೇಡ್ಕರ್‌ ಅಂತಾರಾಷ್ಟ್ರೀಯ ಸಮ್ಮೇಳನದ ಪೂರ್ವಭಾವಿಯಾಗಿ ನೆಲೆ-ಹಿನ್ನೆಲೆ ಸಂಸ್ಥೆಯಿಂದ ರೂಪಿಸಿರುವ ಸಾಂಸ್ಕೃತಿಕ ಅರಿವಿನ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ದೊರೆಯಿತು.

Advertisement

ನಗರದ ಮಾನಸಗಂಗೋತ್ರಿಯ ರೌಂಡ್‌ ಕ್ಯಾಂಟಿನ್‌ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಮ್ಮೇಳನದ ಸಾಂಸ್ಕೃತಿಕ ರಾಜ್ಯ ಸಮಿತಿ ಸದಸ್ಯ ಎಚ್‌.ಜನಾರ್ಧನ್‌(ಜನ್ನಿ) ಚಾಲನೆ ನೀಡಿ ಮಾತನಾಡಿ, ಅಂಬೇಡ್ಕರ್‌ ಬಹುಜನರ ದಿವ್ಯದೀಪವಾಗಿದ್ದು, ಅಂಬೇಡ್ಕರ್‌ ಅವರ ನೆಪದಲ್ಲಿ ರಾಜ್ಯ ಸರ್ಕಾರ ಋಣಾತ್ಮಕವಾದ ಚಳವಳಿ ಸಂಘಟಿಸಿದೆ ಎಂದರು.

ಬೆಂಗಳೂರಿನಲ್ಲಿ ನಡೆಯಲಿರುವ ಸಮಾವೇಶದ ಬಗ್ಗೆ ಸಾಂಸ್ಕೃತಿಕ ಅರಿವಿನ ಕಾರ್ಯಕ್ರಮ ರೂಪಿಸಿದ್ದು, ಮೈಸೂರು, ಚಾಮರಾಜನಗರ, ಹಾಸನ ಜಿಲ್ಲೆಗಳ ಕಲಾವಿದರು ಪಾಲ್ಗೊಂಡು ಸಾರ್ವಜನಿಕ ಸ್ಥಳಗಳಲ್ಲಿ ಅಂಬೇಡ್ಕರ್‌ ತತ್ವಾದರ್ಶ, ಜನಪರ ಹಾಗೂ ದಲಿತಪರ ಹೋರಾಟದ ಹಾಡುಗಳನ್ನು ಪ್ರಸ್ತುತ ಪಡಿಸಲಿದ್ದಾರೆ ಎಂದು ತಿಳಿಸಿದರು.

ನೆಲೆ ಹಿನ್ನೆಲೆ ತಂಡದ ಕಲಾವಿದರು, ಶಿಕ್ಷಣದ ಮಹತ್ವ, ಮೂಢನಂಬಿಕೆಯಿಂದ ಜನರಿಗೆ ಆಗುತ್ತಿರುವ ಮೋಸ, ವಂಚನೆಯ ಕುರಿತು ಅರಿವು ಮೂಡಿಸುವ ಬೀದಿ ನಾಟಕದ ಮೂಲಕ ಪ್ರಸ್ತುತಪಡಿಸಿದರು. ಇದಕ್ಕೂ ಮುನ್ನ ಎಚ್‌.ಜನಾರ್ಧನ್‌ ಸಿದ್ದಲಿಂಗಯ್ಯರ ನಾಡ ನಡುವಿನಿಂದ ನೋವಿನಿಂದ ಕೂಗೆ ಗೀತೆಯನ್ನು ಹಾಡಿದರು. ಅಲ್ಲದೆ ನೆಲೆ ಹಿನ್ನೆಲೆ ಕಲಾವಿದರು ಯಾವ ಕುಲವಯ್ಯ ನಿಮ್ಮದು ಯಾವ ಮತವಯ್ಯ ಗೀತೆಗೆ ನೃತ್ಯ ರೂಪಕ ಪ್ರದರ್ಶಿಸಿದರು.

ಪಾಲಿಕೆ ಸದಸ್ಯ ಪುರುಷೋತ್ತಮಮ್‌, ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಡಾ.ಮಹೇಶ ಚಂದ್ರಗುರು, ಮೈಸೂರು ವಿವಿ ಡಾ.ಬಿ.ಆರ್‌. ಅಂಬೇಡ್ಕರ್‌ ಸಂಶೋಧನ ಮತ್ತು ಅಧ್ಯಯನ ಸಂಸ್ಥೆ ಸಂಯೋಜಕ ಡಾ.ಎಸ್‌.ನರೇಂದ್ರಕುಮಾರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಕೆ ಸಹಾಯಕ ನಿರ್ದೇಶಕ ಎಚ್‌.ಚನ್ನಪ್ಪ, ನೆಲೆ ಹಿನ್ನೆಲೆ ಕೆ.ಆರ್‌.ಗೋಪಾಲಕೃಷ್ಣ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next