ಚಾಮರಾಜನಗರ: ನಗರದ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಸಿಮ್ಸ್)ಯಲ್ಲಿ 1.79 ಕೋಟಿ ರೂ. ವೆಚ್ಚದಲ್ಲಿ ಕೋವಿಡ್ ಪರೀಕ್ಷಿಸುವ ಪಿಸಿಆರ್ ಪ್ರಯೋಗಾಲಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ಕುಮಾರ್ ಉದ್ಘಾಟಿಸಿದರು.
ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮೈಕ್ರೋ ಬಯೋಲಾಜಿ ವಿಭಾಗದಲ್ಲಿರುವ ಲ್ಯಾಬ್ ಅನ್ನು ಸಚಿವರು ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್-19 ವೈರಾಣು ಪರೀಕ್ಷೆ ನಡೆಸಲು ಮತ್ತು ಇತರೆ ಪರೀಕ್ಷೆ ಹಾಗೂ ಸಂಶೋಧನೆಗಳಿಗಾಗಿ ಪಿಸಿಆರ್ ಪ್ರಯೋಗಾಲಯವನ್ನು ಉದ್ಘಾಟಿಸಲಾಗಿದೆ ಎಂದರು. ಪ್ರಯೋಗಾಲಯವನ್ನು ಐಸಿಎಂಆರ್ ಮಾರ್ಗಸೂಚಿಯಂತೆ ಕಟ್ಟಡ ಮಾರ್ಪಾಡು ಮಾಡಿ ನವೀಕರಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಪ್ರಯೋಗಾಲಯದಲ್ಲಿ ಗಂಟಲಿನ ದ್ರವದಲ್ಲಿರುವ ಕೊರೊನಾ ವೈರಾಣು ಪತ್ತೆ ಹಚ್ಚಲು 6 ರಿಂದ 8 ಗಂಟೆಗಳ ಸಮಯ ಅವಶ್ಯವಿದೆ. ಸಂಸ್ಥೆಯಲ್ಲಿ ಅಳವಡಿಸಿರುವ ಆರ್ -ಪಿಸಿಆರ್ ಉಪಕರಣಗಳು ಸ್ವಯಂಚಾಲಿತವಾಗಿದ್ದು, ಪ್ರತಿ ಬಾರಿ 96 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಬಹುದು. ಅಂದರೆ ದಿನಕ್ಕೆ ಸುಮಾರು 300 ಪರೀಕ್ಷೆ ಮಾಡುವ ಸಾಮರ್ಥ್ಯವುಳ್ಳ ಪ್ರಯೋಗಾಲಯಕ್ಕೆ ಅನುಮೋದನೆ ದೊರೆತ ನಂತರ ಪ್ರಯೋಗಾಲಯ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದರು.
ಗುಂಡ್ಲುಪೇಟೆ ತಾಲೂಕಿನ ಹೊಂಗಳ್ಳಿ ಗ್ರಾಮದ ನಿಖರ ಆಗ್ಯಾನಿಕ್ ಫಾರ್ಮ್ಸ್ ಲಿಮಿಟೆಡ್ ನೀಡಿರುವ ಪಿಪಿಇ ಕಿಟ್‌ಗಳನ್ನು ವೈದ್ಯರಿಗೆ ಸಚಿವರು ವಿತರಿಸಿದರು. ಶಾಸಕರಾದ ಮಹೇಶ್, ನಿರಂಜನ್ ಕುಮಾರ್, ಜಿಪಂ ಅಧ್ಯಕ್ಷ ಮಹೇಶ್, ಡೀಸಿ ಡಾ. ರವಿ, ಜಿಪಂ ಸಿಇಒ ನಾರಾಯಣ್‌ರಾವ್, ಎಸ್ಪಿ ಆನಂದ್ ಕುಮಾರ್, ಡಿಎಚ್‌ಒ ಡಾ.ರವಿ, ಸಿಮ್ಸ್ ಡೀನ್ ಡಾ.ಸಂಜೀವ್,
ಮೈಕ್ರೋ ಬಯೋಲಾಜಿ ವಿಭಾಗದ ಮುಖ್ಯಸ್ಥ ಡಾ.ಸತೀಶ್ ಜಾವಗಲ್ ಇದ್ದರು.