Advertisement

ಮಳೆನೀರ ತೋಡಿಗೆ ಮಣ್ಣು ತಂದು ಸುರಿದು ಎಡವಟ್ಟು!

10:10 PM May 28, 2019 | sudhir |

ಕುಂದಾಪುರ: ಇಲ್ಲಿನ ಪುರಸಭಾ ವ್ಯಾಪ್ತಿಯ ಸುಮಾರು ಅರ್ಧದಷ್ಟು ರಸ್ತೆ ಬದಿಯ ನೀರು ಹರಿಯುವುದು ಸಮೀಪದ ತೋಡಿನ ಮೂಲಕ. ಆದರೆ ಇದೀಗ ಮಂಗಳೂರು ಟೈಲ್‌ ಫ್ಯಾಕ್ಟರಿ ಹತ್ತಿರವಿರುವ ಈ ತೋಡಿಗೆ ಹಾಕಿದ ಮಣ್ಣಿನ ತೆರವು ಕಾರ್ಯ ನಡೆಯದೇ ಇದ್ದು, ಈ ಬಾರಿ ದಿಢೀರ್‌ ಮಳೆ ಬಂತೆದರೆ ಈ ಭಾಗ ಮುಳುಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.

Advertisement

ಎಲ್ಲೆಡೆಯ ನೀರು
ವಡೇರ ಹೋಬಳಿಯಿಂದ ಕುಂದಾಪುರ ಪೇಟೆ ಭಾಗಕ್ಕೆ, ಗಾಂಧಿ ಮೈದಾನ ಕಡೆಯಿಂದ, ಪೇಟೆಯ ಭಾಗದಿಂದ ಹರಿದು ಬರುವ ನೀರು ಸೇರುವುದು ಈ ವಾರ್ಡಿನ ಮೂಲಕ ಹರಿಯುವ ತೋಡಿನಲ್ಲಿ. ಇದಕ್ಕೊಂದು ಸಮರ್ಥವಾದ ತಡೆಗೋಡೆ ಕಟ್ಟಿ ವ್ಯವಸ್ಥಿತ ರೀತಿಯಲ್ಲಿ ನಿರ್ವಹಣೆ ಮಾಡಲು ಪುರಸಭೆಗೆ ಅನುದಾನದ ಕೊರತೆ ಉಂಟಾಗಿದೆ.

ಕೇವಲ ಸಣ್ಣ ತಡೆಗೋಡೆಯನ್ನಷ್ಟೇ ಕಟ್ಟಲಾಗಿದ್ದು, ಇದರಿಂದ ರಸ್ತೆ ಕೊರೆತದ ಭೀತಿ ಜನರಲ್ಲಿ ಆವರಿಸಿದೆ. ಈ ಸಮಸ್ಯೆಗೆ ಸರಿಯಾದ ಪರಿಹಾರವನ್ನು ಒದಗಿಸಬೇಕು ಎನ್ನುವುದು ಸ್ಥಳೀಯರ ಬೇಡಿಕೆಯಾಗಿದೆ.

ಇದಕ್ಕೆ ತಾಗಿಕೊಂಡಂತೆ ಕಾಂಕ್ರಿಟ್‌ ರಸ್ತೆಯಿದೆ. ಅದಕ್ಕೆ ಜೋಡಿಕೊಂಡಂತೆ ತಡೆಗೋಡೆ ಕಾಮಗಾರಿಯಾಗಿದೆ. ಈ ಸಂದರ್ಭ ತೋಡಿಗೆ ತಂದು ಹಾಕಿದ ಮಣ್ಣು ಇನ್ನೂ ಹಾಗೆಯೇ ಇದೆ. ಒಮ್ಮೆಲೆ ತೋಡಿನಲ್ಲಿ ನೀರು ಬಂದರೆ ತೊಂದರೆ ಉಂಟಾಗಲಿದೆ. ದೋಣಿಗೆ ತೊಂದರೆ ಕಾರ್ಖಾನೆ ಬಳಿ ಹರಿಯುವ ಹೊಳೆಗೆ ಹಂಚು ಕಾರ್ಖಾನೆಯ ಹೆಂಚಿನ ಚೂರುಗಳ ತ್ಯಾಜ್ಯ ಎಸೆಯುವ ಕಾರಣ ಇಲ್ಲಿ ಮೀನು ಹಿಡಿಯಲು, ದೋಣಿ ಹೋಗಲು ಕಷ್ಟವಾಗುತ್ತದೆ ಎನ್ನುತ್ತಾರೆ ಸ್ಥಳೀಯ ಮೀನುಗಾರರು.

ಮೀನುಗಳು ವಾಸ ಮಾಡುವ ಗುಂಡಿಯಲ್ಲಿ ಹೆಂಚಿನ ತ್ಯಾಜ್ಯ ಇರುವ ಕಾರಣ ಮೀನುಗಳೇ ಇರುವುದಿಲ್ಲ. ಮೊದಲೇ ಈ ಬಾರಿ ಮೀನುಗಾರಿಕೆ ಇಲ್ಲ. ದೊಡ್ಡ ದೋಣಿಗೂ ಮೀನಿಲ್ಲ, ನಮಗೂ ಇಲ್ಲ ಎಂದಾದರೆ ಕಷ್ಟ ಎನ್ನುತ್ತಾರೆ ಮೀನುಗಾರರು. ಅದನ್ನು ತೆರವು ಮಾಡಬೇಕೆಂಬ ಒತ್ತಾಯ ಹಾಗೆಯೇ ಇದೆ. ಇದಕ್ಕಿನ್ನೂ ಸ್ಪಂದನೆ ದೊರೆತಿಲ್ಲ.

Advertisement

ಮಣ್ಣು ಹಾಕಲಿ
ಇಲ್ಲೇ ಪಕ್ಕದಲ್ಲಿ ಗದ್ದೆ ಇದ್ದು, ಮಳೆಗಾಲದಲ್ಲಿ ಅದರಲ್ಲಿ ತುಂಬಿದ ನೀರು ತೋಡಿಗೆ ಹರಿಯಲು ಅವಕಾಶವಿಲ್ಲ. ಇದರಿಂದ ಇಲ್ಲಿ ಸೊಳ್ಳೆ ಕಾಟ ವಿಪರೀತವಾಗಿರುತ್ತದೆ.

ಆದ್ದರಿಂದ ಇಲ್ಲಾದರೂ ಮಣ್ಣು ಹಾಕಬೇಕು ಮತ್ತು ಗದ್ದೆ ಎತ್ತರಿಸುವ ಕಾರ್ಯ ನಡೆಯಬೇಕು. ಇದರಿಂದ ಪ್ರಯೋಜನವಿದೆ. ತೋಡಿಗೆ ಹಾಕಿದ ಮಣ್ಣಿನ ತೆರವೂ ನಡೆಯಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

ಕಳಪೆ ಕಾಮಗಾರಿ
ಕಾಂಕ್ರೀಟ್‌ ತಡೆಗೋಡೆ ಪಕ್ಕದಲ್ಲಿ ಕಲ್ಲಿನ ತಡೆಗೋಡೆಯೊಂದರ ರಚನೆ ಮಾಡಲಾಗಿದ್ದು ಅದು ಕಳಪೆಯಾಗಿದೆ ಎಂಬ ಆರೋಪವಿದೆ. ಅದರ ಕಲ್ಲುಗಳು ಈಗಲೇ ಕಿತ್ತು ಹೋಗುತ್ತಿವೆ. ಗೋಡೆಗೆ ಅಂಟಿಕೊಂಡಿರಬೇಕಿದ್ದ ಕಲ್ಲುಗಳು ಈಗಾಗಲೇ ಬಿದ್ದು ತೋಡಿನಲ್ಲಿವೆ. ಅದರ ಮೇಲೆ ಮಣ್ಣು ಕೂಡಾ ಬಿದ್ದಿದ್ದು ಒಟ್ಟಿನಲ್ಲಿ ಅವ್ಯವಸ್ಥೆಯ ಆಗರವಾಗಿದೆ.

ಮನವಿ ಮಾಡಲಾಗಿದೆ
ಮಳೆಗಾಲದಲ್ಲಿ ತುಂಬಿ ಹರಿಯುವ ಈ ತೋಡಿಗೆ ಹಾಕಿದ ಮಣ್ಣನ್ನು ತೆರವು ಮಾಡಲು ಇಲಾಖೆಗೆ ಅನೇಕ ಬಾರಿ ಮನವಿ ಮಾಡಲಾಗಿದೆ. ತೆರವು ಮಾಡಲಾಗುವುದು ಎಂಬ ಭರವಸೆ ದೊರೆತಿದೆ.
-ವಿಜಯ್‌ ಎಸ್‌. ಪೂಜಾರಿ, ಪುರಸಭೆ ಮಾಜಿ ಸದಸ್ಯರು

ತತ್‌ಕ್ಷಣ ತೆರವು
ಈ ಸಮಸ್ಯೆ ಗಮನಕ್ಕೆ ಬಂದಿದೆ. ಶಾಸಕರು ಕೂಡಾ ಸೂಚನೆ ನೀಡಿದ್ದಾರೆ. ತತ್‌ಕ್ಷಣ ತೆರವು ಮಾಡಲಾಗುವುದು. ಮಳೆಗೆ ಸಮಸ್ಯೆಯಾಗದಂತೆ ನೋಡಲಾಗುವುದು.
-ಹರ್ಷವರ್ಧನ, ಸಹಾಯಕ ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next