ಸಾಗರ: ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತೆಗೆದಿರುವ ಕುಡಿಯುವ ನೀರಿನ ಬಾವಿಯು ಕಾಮಗಾರಿಯನ್ನು ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ಈ ವರ್ಷದ ಮಳೆಗೆ ಮಣ್ಣು ಕುಸಿದು ಬಾವಿಯೇ ಮಾಯವಾಗುವ ಅಪಾಯ ತಾಲೂಕಿನ ಕುದರೂರು ಗ್ರಾಮ ಪಂಚಾಯ್ತಿಯಲ್ಲಿ ಎದುರಾಗಿದೆ.
ಇಲ್ಲಿನ ಹೊನಗೋಡು ಎಂಬಲ್ಲಿ ನಿರ್ಮಾಣ ಹಂತದಲ್ಲಿದ್ದ ಸಾರ್ವಜನಿಕ ಕುಡಿಯುವ ನೀರಿನ ಬಾವಿ ಅರ್ಧಂಬರ್ಧ ಕಾಮಗಾರಿ ಮಾಡಿ ಹಾಗೆಯೇ ಬಿಟ್ಟಿರುವ ಕುದರೂರು ಗ್ರಾಮ ಪಂಚಾಯ್ತಿಯ ನಿರ್ಲಕ್ಷ್ಯದಿಂದ ಪೂರ್ಣ ಅನುದಾನ ವ್ಯರ್ಥವಾಗುತ್ತದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಪಂಚಾಯತ್ ವ್ಯಾಪ್ತಿಯ ಹೊನಗೋಡು ಗ್ರಾಮದಲ್ಲಿ 10 ತಿಂಗಳ ಹಿಂದೆ ಸಾರ್ವಜನಿಕ ಕುಡಿಯುವ ನೀರಿನ ಬಾವಿ ಕಾಮಗಾರಿಯೊಂದು ಪ್ರಾರಂಭವಾಗಿತ್ತು. ಸುಮಾರು 30 ಅಡಿ ಆಳ ತೋಡಿರುವ ಬಾವಿಯಲ್ಲಿ ಈಗ ನೀರು ತುಂಬಿದೆ. ಬಾವಿ ತೋಡುತ್ತಿದ್ದಂತೆಯೇ ರಿಂಗ್ ಅಳವಡಿಸಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಪಂಚಾಯ್ತಿ ಇದ್ದಕ್ಕಿದ್ದಂತೆ ಬಾವಿ ಕಾಮಗಾರಿಯನ್ನು ನಿಲ್ಲಿಸಿದೆ.
ಜಿಲ್ಲಾ ಪಂಚಾಯ್ತಿ ಅನುದಾನದಲ್ಲಿ ಒಂದೂವರೆ ಲಕ್ಷ ರೂ. ಈ ಕಾಮಗಾರಿಗೆ ಬಿಡುಗಡೆಯಾಗಿದೆ. ತೆರೆದ ಬಾವಿಯಾಗಿರುವ ಕಾರಣ ಜನ ಜಾನುವಾರುಗಳು ಬಾವಿಗೆ ಬೀಳುವ ಸಾಧ್ಯತೆಯೂ ಇದೆ. ಕುಡಿಯುವ ನೀರು ಒದಗಿಸಬೇಕಾದ ಬಾವಿಗೆ ಲಕ್ಷಾಂತರ ರೂ. ಖರ್ಚು ಮಾಡಿಯೂ ಜನಕ್ಕೆ ಉಪಯೋಗವಾಗುತ್ತಿಲ್ಲ. ಈ ನಡುವೆ ಬಾವಿಯ ಸುತ್ತಮುತ್ತಲ ಜಾಗದಲ್ಲಿ ಭೂ ಕುಸಿತದ ಕಾರಣ ಬಾವಿಯೇ ಕಣ್ಮರೆಯಾಗುವ ಸಾಧ್ಯತೆ ಹೆಚ್ಚಿದೆ.
ಬಾವಿಯ ಸುತ್ತ ಯಾವುದೇ ಸುರಕ್ಷತಾ ಕ್ರಮ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಜಾನುವಾರುಗಳು ಬಾವಿಗೆ ಬಿದ್ದ ಕೆಲ ಪ್ರಕರಣಗಳು ನಡೆದಿದ್ದವು. ಇನ್ನಷ್ಟು ಅಪಾಯ ಆಗದಿರಲೆಂದು ಪಂಚಾಯ್ತಿ ಬಾವಿಯ ಸುತ್ತ ಶೇಡ್ ನೆಟ್ ಹಾಕಿ ತಾತ್ಕಾಲಿಕ ತಡೆ ನಿರ್ಮಿಸಿದೆ. ಪಂಚಾಯ್ತಿಯ ಅಭಿವೃದ್ಧಿ ಅಧಿಕಾರಿಗಳು ಸರ್ಕಾರದ ಹಣ ಪೋಲಾಗುವಂತೆ ಮಾಡುತ್ತಿದ್ದಾರೆ. ಸಾರ್ವಜನಿಕರ ದೂರನ್ನು ಆಲಿಸುತ್ತಿಲ್ಲ. ಜನರ ಕುಡಿಯುವ ನೀರಿನ ಅಗತ್ಯವೂ ಪೂರೈಸುತ್ತಿಲ್ಲ. ತಾಲೂಕು ಪಂಚಾಯ್ತಿ ಆಡಳಿತ ತಕ್ಷಣ ಗಮನಹರಿಸಬೇಕು ಎಂದು ಗ್ರಾಮದ ಮೋಹನ್, ಕೃಷ್ಣಪ್ಪ ಇನ್ನಿತರರು ಆಗ್ರಹಿಸಿದ್ದಾರೆ.