Advertisement

ಕುಡಿವ ನೀರಿನ ಘಟಕ: ನಿಯಮ ರೂಪಿಸಲು ತೀರ್ಮಾನ

10:22 AM Dec 08, 2019 | mahesh |

ಬೆಂಗಳೂರು: ರಾಜ್ಯಾದ್ಯಂತ ಅನುಷ್ಠಾನದಲ್ಲಿರುವ ಶುದ್ಧ ಕುಡಿಯುವ ನೀರು ಘಟಕಗಳ ಕಾರ್ಯನಿರ್ವಹಣೆ ಸಂಬಂಧ ಸೂಕ್ತ ನಿಯಮಾವಳಿ ರೂಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಪ್ರಸ್ತುತ ಅನುಷ್ಠಾನದಲ್ಲಿರುವ ಶುದ್ಧ ಕುಡಿಯುವ ನೀರು ಘಟಕಗಳಲ್ಲಿ ಶೇ.50 ಕ್ಕೂ ಹೆಚ್ಚು ದುರಸ್ತಿ ಸೇರಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ನಿರ್ವಹಣೆ ವಿಚಾರದಲ್ಲಿಯೂ ಸಾಕಷ್ಟು ಗೊಂದಲಗಳಿರುವ
ಕಾರಣ ಇದಕ್ಕಾಗಿಯೇ ನೀತಿ ರೂಪದ ನಿಯಮಾವಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌
ಇಲಾಖೆ ಮುಂದಾಗಿದೆ.

Advertisement

ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಶುದ್ಧ ಕುಡಿಯುವ ನೀರು ಘಟಕಗಳು, ಅವುಗಳ ಸ್ಥಿತಿಗತಿ, ನಿರ್ವಹಣೆ, ವಾರ್ಷಿಕ ವೆಚ್ಚ, ಘಟಕ ಅಳವಡಿಕೆ ವೆಚ್ಚ, ನಿತ್ಯ ನೀರು ಪಡೆಯುತ್ತಿರುವವರ ಸಂಖ್ಯೆ ಎಲ್ಲದರ ಬಗ್ಗೆ ಸಮಗ್ರ ಮಾಹಿತಿ ನೀಡುವಂತೆ ರಾಜ್ಯದ ಎಲ್ಲ ಗ್ರಾಪಂ, ತಾಪಂ, ಜಿಪಂಗಳಿಗೆ ಗ್ರಾಮೀಣಾಭಿವೃದ್ಧಿ, ಪಂಚಾಯತ್‌ ರಾಜ್‌ ಇಲಾಖೆ ಪತ್ರ ಬರೆದು ಸೂಚಿಸಿದೆ.

ನೂತನ ನಿಯಮಾವಳಿ ರಚನೆ ಸಂಬಂಧ ಮುಂದಿನ ಜನವರಿಯಲ್ಲಿ ನಡೆಯಲಿರುವ ರಾಜ್ಯ
ವಿಧಾನಮಂಡಲದ ಅಧಿವೇಶನದೊಳಗೆ ಕರಡು ಸಿದ್ಧಪಡಿಸಲು ಇಲಾಖೆಗೆ ಸೂಚಿಸಲಾಗಿದೆ ಎಂದು
ವಿಶ್ವಸನೀಯ ಮೂಲಗಳು ತಿಳಿಸಿವೆ. ಶುದ್ಧ ಕುಡಿಯುವ ನೀರು ಘಟಕಗಳ ನಿರ್ವಹಣೆ ಹೊಣೆ ಆಯಾ ಗ್ರಾಪಂಗಳಿಗೆ ನೀಡುವುದು. ಆದಷ್ಟೂ ಕಡಿಮೆ ವೆಚ್ಚದಲ್ಲಿ ಘಟಕ ಅನುಷ್ಠಾನ ಮಾಡುವುದು. ನಿರುದ್ಯೋಗಿ ಯುವಕರು ಅಥವಾ ಯುವ ಸಂಘಗಳು, ಮಹಿಳಾ ಸ್ವ ಸಹಾಯ ಸಂಘಗಳಿಗೆ ನಿರ್ವಹಣೆ ಹೊಣೆಗಾರಿಕೆ ನೀಡುವುದು. ನಿತ್ಯ ಘಟಕ ಬಳಕೆ ಮತ್ತಿತರ ಮಾಹಿತಿ ಆನ್‌ಲೈನ್‌ ಮೂಲಕ ಇಲಾಖೆಯ ಕೇಂದ್ರ ಕಚೇರಿಗೆ ರವಾನೆಯಾಗುವುದು ನೂತನ ನಿಯಮಾವಳಿಯಲ್ಲಿ ಸೇರಲಿದೆ ಎಂದು ಹೇಳಲಾಗಿದೆ.

ರಾಜ್ಯದಲ್ಲಿ ಗ್ರಾಪಂಗೆ ಒಂದರಂತೆ 6,021 ಶುದ್ಧ ಕುಡಿಯುವ ನೀರು ಘಟಕ ಅಳವಡಿಸಲು ಮೊದಲಿಗೆ
ತೀರ್ಮಾನಿಸಲಾಗಿತ್ತು. ನಂತರ ಗ್ರಾಪಂಗೆ ಎರಡು ಘಟಕ ಅಳವಡಿಕೆ ನಿರ್ಧಾರ ಮಾಡಲಾಯಿತು. ತದ
ನಂತರ ಪ್ರತಿ ಗ್ರಾಮದಲ್ಲೂ ಶುದ್ಧ ಕುಡಿಯುವ ನೀರು ಘಟಕ ಅಳವಡಿಕೆಯಾಗಬೇಕೆಂಬ ತೀರ್ಮಾನದಡಿ 29 ಸಾವಿರ ಗ್ರಾಮಗಳಿಗೆ ಯೋಜನೆ ರೂಪಿಸಲಾಯಿತು. ಪ್ರಸ್ತುತ 17 ಸಾವಿರ ಶುದಟಛಿ ಕುಡಿಯುವ ನೀರು ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಶೇ.50ಕ್ಕೂ ಹೆಚ್ಚು ಘಟಕಗಳು ದುರಸ್ತಿಗೊಳಪಟ್ಟಿವೆ.

ಶುದ್ಧ ಕುಡಿಯುವ ನೀರು: ಈ ಮಧ್ಯೆ, ಶುದ್ಧ ಕುಡಿಯುವ ನೀರು ಘಟಕ ಅಳವಡಿಕೆಯಲ್ಲಿ ಭ್ರಷ್ಟಾಚಾರ ಆಗಿದೆ. ಮೂರ್‍ನಾಲ್ಕು ಲಕ್ಷ ರೂ.ಗಳ ವೆಚ್ಚದಲ್ಲಿ ಅಳವಡಿಸಬಹುದಾದ ಘಟಕಗಳಿಗೆ ಹದಿನೈದು ಲಕ್ಷ ರೂ. ವೆಚ್ಚ ಮಾಡಲಾಗಿದೆ ಎಂಬ ಆರೋಪವೂ ಕೇಳಿ ಬಂದಿತ್ತು. ಘಟಕಗಳ ನಿರ್ವಹಣೆಗಾಗಿ ಖಾಸಗಿ ಏಜೆನ್ಸಿಯೊಂದಕ್ಕೆ ವಹಿಸಲಾಗಿ ಆ ಸಂಸ್ಥೆಯೂ ಸರಿಯಾಗಿ ಕಾರ್ಯನಿರ್ವಹಿಸಲಿಲ್ಲ ಎಂಬ ಬಗ್ಗೆ ವಿಧಾನಮಂಡಲ ಅಧಿವೇಶನದಲ್ಲೂ ಪ್ರಸ್ತಾಪವಾಗಿತ್ತು. ಹೀಗಾಗಿ, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದ ಎಲ್ಲ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆ ಬೆಳಗಾವಿಯಲ್ಲಿ ನಡೆಸಿ ಶುದ್ಧ ಕುಡಿಯುವ ನೀರಿನ ಘಟಕಗಳ ಕಾರ್ಯನಿರ್ವಹಣೆ ಕುರಿತು ಸಮಗ್ರವಾಗಿ ಚರ್ಚಿಸಿ ಸೂಕ್ತ ನಿಯಮಾವಳಿ ರೂಪಿಸಲು ನಿರ್ಧಾರ ಮಾಡಲಾಗಿದೆ ಎಂದು ಹೇಳಲಾಗಿದೆ.

Advertisement

ಹಿಂದಿನ ಕಾಂಗ್ರೆಸ್‌ ಹಾಗೂ ಜೆಡಿಎಸ್‌- ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಅಳವಡಿಸಲಾಗಿರುವ ಶುದ್ಧ ಕುಡಿಯುವ ನೀರು ಘಟಕಗಳು ಉದ್ದೇಶಿತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಶೇ.50ರಷ್ಟು ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ, ಇದಕ್ಕೆ ಸೂಕ್ತ ನಿಯಮಾವಳಿ ಅಗತ್ಯ. ಘಟಕಗಳ ಕಾರ್ಯನಿರ್ವಹಣೆಗಳ ಬಗ್ಗೆ ಈಗಾಗಲೇ ಎಲ್ಲ ಗ್ರಾಪಂ, ತಾಪಂ, ಜಿಪಂಗಳಿಗೆ ಪತ್ರ ಬರೆದು ಮಾಹಿತಿ ಪಡೆಯಲಾಗಿದೆ.
 ಕೆ.ಎಸ್‌. ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ

● ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next