Advertisement

ಗ್ರಾಮ ಪಂಚಾಯತ್‌ಗಳಲ್ಲೇ ಕುಡಿಯುವ ನೀರು ಪರೀಕ್ಷೆ

10:10 AM Mar 18, 2020 | mahesh |

ಮಂಗಳೂರು: ಗ್ರಾಮೀಣ ಭಾಗಗಳಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆಯನ್ನು ಆಯಾ ಗ್ರಾಮ ಪಂಚಾಯತ್‌ ಮಟ್ಟದಲ್ಲಿಯೇ ನಡೆಸುವುದನ್ನು ಕಟ್ಟುನಿಟ್ಟುಗೊಳಿಸಲು ಸರಕಾರ ನಿರ್ಧರಿಸಿದೆ. ಎಲ್ಲ ಗ್ರಾ.ಪಂ.ಗಳು ಈ ಬೇಸಗೆಯಲ್ಲಿ ಕಡ್ಡಾಯ ವಾಗಿ ನೀರಿನ ಪರೀಕ್ಷೆ ನಡೆಸುವಂತೆ ಸೂಚಿಸಲಾಗಿದ್ದು, “ಫೀಲ್ಡ್‌ ಟೆಸ್ಟ್‌ ಕಿಟ್‌’ ಪೂರೈಕೆ ಪ್ರಾರಂಭಗೊಂಡಿದೆ.

Advertisement

ತೆರೆದಬಾವಿ, ಕೊಳವೆಬಾವಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಬಾವಿ ಇತ್ಯಾದಿ ಗಳಲ್ಲಿ ಇರಬಹುದಾದ ಆರೋಗ್ಯಕ್ಕೆ ಮಾರಕ ಆರ್ಸೆನಿಕ್‌, ಫ್ಲೋರೈಡ್‌ ಮತ್ತು ನೀರಿನ ಗಡಸುತನ ಇತ್ಯಾದಿಗಳನ್ನು ಪ್ರಾಥಮಿಕ ಹಂತದಲ್ಲಿಯೇ ಪತ್ತೆಹಚ್ಚುವ ಉದ್ದೇಶದಿಂದ ಕೆಲವು ವರ್ಷಗಳ ಹಿಂದೆ ಹಲವು ಗ್ರಾ.ಪಂ.ಗಳಿಗೆ ಇಂಥ ಕಿಟ್‌ಗಳನ್ನು ನೀಡಲಾಗಿತ್ತು. ಆದರೆ ಪರಿಣಾಮ ಕಾರಿಯಾಗಿ ಬಳಕೆಯಾಗಿರಲಿಲ್ಲ. ಆದ್ದರಿಂದ ಗ್ರಾಮೀಣ ನೀರು ಸರಬರಾಜು ಇಲಾಖೆ ಈ ಬಾರಿ ಎಲ್ಲ ಗ್ರಾ.ಪಂ.ಗಳಿಗೂ ಕಿಟ್‌ ವಿತರಿಸಿ ಪಿಡಿಒ, ವಾಟರ್‌ಮನ್‌, ಗ್ರಾ.ಪಂ. ಸಿಬಂದಿಗೆ ತರಬೇತಿ ನೀಡಲಾಗುತ್ತದೆ.

ಒಂದು ಕಿಟ್‌ನಿಂದ 100 ಮಾದರಿ ಪರೀಕ್ಷೆ
ಒಂದು ಕಿಟ್‌ನಿಂದ ಕನಿಷ್ಠ 100ರಷ್ಟು ನೀರಿನ ಮಾದರಿಗಳನ್ನು ಪರೀಕ್ಷಿಸಬಹುದು. ಕಿಟ್‌ ನಲ್ಲಿರುವ ಪರೀಕ್ಷಕ ರಾಸಾಯನಿಕಗಳ ಬಾಳಿಕೆ 1 ವರ್ಷ ಮಾತ್ರ. ಉಡುಪಿಯಲ್ಲಿ ಈ ಬಾರಿ ಎಲ್ಲ ಗ್ರಾ.ಪಂ.ಗಳಿಗೂ ಇಂತಹ ಕಿಟ್‌ಗಳನ್ನು ನೀಡಲಾಗಿದ್ದರೆ, ದ.ಕ.ದಲ್ಲಿ ಟೆಂಡರ್‌ ಪ್ರಕ್ರಿಯೆ ಇನ್ನಷ್ಟೇ ನಡೆಯಬೇಕಿದೆ.

ಪ್ರಯೋಗಾಲಯ ಕೊರತೆ
ಉಡುಪಿ ಜಿಲ್ಲಾ ಮಟ್ಟದಲ್ಲಿ ಮಾತ್ರ ಪ್ರಯೋಗಾಲಯವಿದ್ದರೆ ದ.ಕ.ದಲ್ಲಿ ಜಿಲ್ಲಾ ಮಟ್ಟದ ಒಂದು ಹಾಗೂ ಬೆಳ್ತಂಗಡಿ, ಪುತ್ತೂರು ತಾಲೂಕು ಮಟ್ಟದಲ್ಲೂ ಇವೆ.

ಕರಾವಳಿಯಲ್ಲಿ ಕಬ್ಬಿಣ ಅಂಶ ಹೆಚ್ಚು
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕುಡಿಯುವ ನೀರು ಕಲುಷಿತಗೊಂಡು ಪ್ರಾಣಾಪಾಯ ಸಂಭವಿಸಿದ್ದೂ ಇದೆ. ಕರಾವಳಿಯಲ್ಲಿ ಅಂತಹ ಆತಂಕ ವಿಲ್ಲದಿದ್ದರೂ ಹಲವೆಡೆ ಕೊಳವೆ ಬಾವಿ ನೀರಿನಲ್ಲಿ ಕಬ್ಬಿಣದ ಅಂಶ ಮಿತಿಗಿಂತ ಹೆಚ್ಚು ಇರುವುದು ಕಂಡು ಬಂದಿದೆ. ಈ ಕಿಟ್‌ ಮೂಲಕ ಸಂಶಯ ನಿವಾರಿಸಿಕೊಳ್ಳಬಹುದು.

Advertisement

ಪ್ರಸ್ತುತ ಜಿಲ್ಲಾ ಮತ್ತು ತಾಲೂಕು ಮಟ್ಟದ ಪ್ರಯೋಗಾಲಯಗಳ ಮೂಲಕ ಗ್ರಾ.ಪಂ.ಗಳ ಕುಡಿಯುವ ನೀರಿನ ಮೂಲಗಳ ಗುಣಮಟ್ಟ ವನ್ನು ಪರೀಕ್ಷಿಸಲಾಗುತ್ತದೆ. ಮುಂಗಾರುಪೂರ್ವ ಮತ್ತು ಮುಂಗಾರು ಅನಂತರ ಎಂದು ಎರಡು ಬಾರಿ ಪರೀಕ್ಷೆಗೊಳಪಡಿಸಲಾಗುತ್ತದೆ. ಈ ರೀತಿ ಉಡುಪಿ ಜಿಲ್ಲೆ ಯಲ್ಲಿ ವರ್ಷಕ್ಕೆ ಸರಾಸರಿ 2,500ಕ್ಕೂ ಹೆಚ್ಚು; ದ.ಕ. ಜಿಲ್ಲೆಯಲ್ಲಿ ಸರಾಸರಿ 4,000ದ ವರೆಗೆ ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ. ಮುಂದೆ ಗ್ರಾ.ಪಂ.ಗಳಿಂದಲೇ ಪ್ರಾಥಮಿಕ ಪರೀಕ್ಷೆ ನಡೆದರೆ ಪರೀಕ್ಷೆಗೊಳಪಡುವ ಮಾದರಿಗಳ ಪ್ರಮಾಣ ಮೂರುಪಟ್ಟು ಹೆಚ್ಚಾಗುವ ನಿರೀಕ್ಷೆ ಇದೆ.

ಉಡುಪಿ ಜಿಲ್ಲೆಯ ಎಲ್ಲ ಗ್ರಾ.ಪಂ.ಗಳಿಗೂ ಕಿಟ್‌ಗಳನ್ನು ವಿತರಿಸಿ ಅಗತ್ಯ ತರಬೇತಿ ನೀಡ ಲಾಗಿದೆ. ಇದರಿಂದ ಗ್ರಾ.ಪಂ. ಮಟ್ಟದಲ್ಲೇ ನೀರಿನ ಪರೀಕ್ಷೆ ಸಾಧ್ಯವಾಗಲಿದೆ.
– ರಾಮಯ್ಯ, ಭೂವಿಜ್ಞಾನಿ, ಕುಡಿಯುವ ನೀರು ವಿಭಾಗ, ಉಡುಪಿ ಜಿಲ್ಲೆ

ದ.ಕ. ಜಿಲ್ಲೆಯ ಎಲ್ಲ ಗ್ರಾ.ಪಂ.ಗಳಿಗೂ ಫೀಲ್ಡ್‌ ಟೆಸ್ಟ್‌ ಕಿಟ್‌ ವಿತರಿಸಲಿದ್ದು, ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಎಲ್ಲ ಗ್ರಾ.ಪಂ.ಗಳು ಕಿಟ್‌ ಬಳಕೆ ಮಾಡುವಂತೆ ಸೂಚನೆ ನೀಡಲಾಗುವುದು, ತರಬೇತಿ ಕೂಡ ನೀಡಲಾಗುವುದು.
– ಡಾ| ಸೆಲ್ವಮಣಿ ಆರ್‌., ದ.ಕ. ಜಿ.ಪಂ. ಸಿಇಒ

- ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next