ರಾಣಿಬೆನ್ನೂರ: ಬೇಸಿಗೆಯಲ್ಲಿ ಜನರಿಗೆ ಕುಡಿಯುವ ನೀರಿನ ಹಾಹಾಕಾರ ಆಗದಂತೆ ತುಂಗಭದ್ರಾ ನದಿಗೆ ಚೆಕ್‌ಡ್ಯಾಂ ನಿರ್ಮಿಸಿ ದೂರದ ದಾವಣಗೆರೆ ಮತ್ತು ಚಿತ್ರದುರ್ಗ ಪಟ್ಟಣಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುವುದು. ಇದರಿಂದ ಗ್ರಾಮದ ಯಾವುದೇ ಭೂಮಿ ಮುಳುಗಡೆಯಾಗದು ಎಂದು ಹಾವೇರಿ ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣನವರ ಹೇಳಿದರು.
ದಾವಣಗೆರೆ ಮತ್ತು ಚಿತ್ರದುರ್ಗ ಪಟ್ಟಣಗಳಿಗೆ ಕುಡಿಯುವ ನೀರು ಸರಬರಾಜುವಿಗಾಗಿ ತಾಲೂಕಿನ ಮಾಕನೂರ ಗ್ರಾಮದ ಬಳಿ ತುಂಗಭದ್ರಾ ನದಿಗೆ ಚೆಕ್‌ಡ್ಯಾಂ ನಿರ್ಮಾಣ ಕಾಮಗಾರಿಯಿಂದ ಗ್ರಾಮ ಉಳಿಸಿ ಚೆಕ್ ಡ್ಯಾಂ ಇಳಿಸಿ ಹೋರಾಟ ಸಮಿತಿ ಹಾವೇರಿ ಮತ್ತು ದಾವಣಗೆರೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯ ಮೇರಿಗೆ ಸೋಮವಾರ ಸ್ಥಳಕ್ಕೆ ಆಗಮಿಸಿ ಕಾಮಗಾರಿ ಪರಿಶೀಲಿಸಿ ಮಾತನಾಡಿದರು.
ದಾವಣಗೇರಿ ಜಿಲ್ಲಾಧಿಕಾರಿ ಮಹಾಂತೇಶ ಬಿಳಗಿ ಮಾತನಾಡಿ, ತುಂಗಭದ್ರಾ ನದಿಗೆ ಚೆಕ್‌ಡ್ಯಾಂ ನಿರ್ಮಾಣ ಕಾಮಗಾರಿಯಿಂದ ಗ್ರಾಮಕ್ಕೆ ಯಾವುದೇ ತೊಂದರೆಯಾಗದಂತೆ ವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗುತ್ತದೆ. ಮಳೆಗಾಲದಲ್ಲಿ ಹರಿಯುವ ನೀರನ್ನು ಅಗತ್ಯಕ್ಕೆ ಅನುಗುಣವಾಗಿ ತಡೆ ಹಿಡಿಯಲಾಗುವುದು. ಸ್ವಯಂ ಚಾಲಿತ ವಾಲ್‌ಗಳ ಮೂಲಕ ನಿಯಂತ್ರಿಸಲಾಗುವುದು. ಅಲ್ಲದೆ ನದಿಯ ಎರಡು ಬದಿ ತಡೆ ಗೋಡೆಗಳನ್ನು ನಿರ್ಮಾಣ ಮಾಡಲಾಗುವುದು ಇದರಿಂದ ನದಿಯ ಅಕ್ಕಪಕ್ಕದ ಜಮೀನು ಮುಳುಗಡೆಯಾಗುವುದಿಲ್ಲ ಎಂದು ಭರವಸೆ ನೀಡಿದರು.
ಒಂದು ವೇಳೆ ಮುಳುಗಡೆಯಾದಲ್ಲಿ ಜಮೀನು ಕಳಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಲಾಗುವುದು. ಇದರಲ್ಲಿ ನಿಮಗೆ ಸಂಶಯಬೇಡ. ಗ್ರಾಮಸ್ಥರ ಸಹಕಾರ ಇರಲಿ. ಇದೇ ರೀತಿ ಅಂಜನಾಪುರ ಕೆರೆಗೆ ಚೆಕ್‌ಡ್ಯಾಂ ನಿರ್ಮಾಣ ಮಾಡಲಾಗಿದ್ದು. ಗ್ರಾಮಸ್ಥರು ಬನ್ನಿ ಒಂದು ಬಾರಿ ನೋಡಿಕೊಂಡು ಬರೋಣ ಎಂದರು.
ರೈತ ಮುಖಂಡ ಈರಣ್ಣ ಹಲಗೇರಿ ಮಾತನಾಡಿ, ಬƒಹತ್ ಗಾತ್ರದಲ್ಲಿ ನಿರ್ಮಾಣವಾಗುತ್ತಿರುವ ಕಾಮಗಾರಿ ನೋಡಿದ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಮುಂಜಾಗೃತ ಕ್ರಮವಾಗಿ ಉಭಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಜನರ ಕಷ್ಟಕ್ಕೆ ಸ್ಪಂದಿಸಿ ಎರಡು ಜಿಲ್ಲೆಯ ಜಿಲ್ಲಾಧಿಕಾರಿಗಳು ಕಾಮಗಾರಿ ಸ್ಥಳಕ್ಕೆ ಆಗಮಿಸಿ ಜನರ ಸಂಶಯವನ್ನು ತಿಳಿಗೊಳಿಸಿದ್ದೀರಿ. ಇದು ಇಲ್ಲಿಗೆ ಮುಗಿಯುವುದಿಲ್ಲ ಕಾಮಗಾರಿ ಸಂಪೂರ್ಣ ಮುಗಿದ ಮೇಲೆ ಇದರ ಪರಿಣಾಮ ತಿಳಿಯಲಿದೆ. ಆಗೊಂದು ವೇಳೆ ಜಮೀನು ಮುಳುಗಡೆಯಾದಲ್ಲಿ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಗ್ರಾಪಂ ಸದಸ್ಯ ಡಾ| ಮಹಾಂತೇಶ ಹುಚ್ಚಣ್ಣನವರ ಮಾತನಾಡಿ, ಗ್ರಾಮದ ರುದ್ರಭೂಮಿಗೆ ರಸ್ತೆ ಇಲ್ಲದ ಪರಿಣಾಮ ಬಹುತೇಕ ಗ್ರಾಮಸ್ಥರು ಶವಸಂಸ್ಕಾರವನ್ನು ತುಂಗಭದ್ರ ನದಿ ತೀರದಲ್ಲಿ ನೆರವೇರಿಸುತ್ತಿದ್ದು. ಚೆಕ್‌ಡ್ಯಾಂ ನಿರ್ಮಾಣ ಮಾಡುತ್ತಿರುವುದರಿಂದ ನದಿತೀರ ಮುಳುಗಡೆಯಾಗುತ್ತಿದೆ. ಆಗ ಗ್ರಾಮಸ್ಥರಿಗೆ ಶವಸಂಸ್ಕಾರ ಮಾಡಲು ತೊಂದರೆಯಾಗಲಿದೆ ಆದಷ್ಟು ಬೇಗ ರುದ್ರಭೂಮಿಗೆ ರಸ್ತೆ ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿದರು.
ಆಗ ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣನವರು ಮಾತನಾಡಿ, ಪರಿಶೀಲಿಸಿ ಸೂಕ್ತಕ್ರಮ ಕೈಗೊಳ್ಳಲು ತಹಶೀಲ್ದಾರ ಶಂಕರ ಜಿ.ಎಸ್ ಅವರಿಗೆ ಸೂಚನೆ ನೀಡಿದರು. ಗ್ರಾಪಂ ಉಪಾಧ್ಯಕ್ಷ ದೇವೇಂದ್ರಪ್ಪ ಎಲಜಿ, ಸದಸ್ಯರಾದ ಶಿವನಗೌಡ ನಂದಿಗಾವಿ, ಕೆಂಚನಗೌಡ ಮುದಿಗೌಡರ, ಹನುಮಂತಗೌಡ ದೊಡ್ಡಗೌಡ್ರ, ತಹಶೀಲ್ದಾರ ಶಂಕರ ಜಿ.ಎಸ್, ಪಿಡಿಓ ನಾಗರಾಜ, ಕಾರ್ಯದರ್ಶಿ ಚಂದ್ರಪ್ಪ ಬೇವಿನಮರದ, ಗ್ರಾಮ ಲೆಕ್ಕಾಧಿಕಾರಿ ಬಸವರಾಜ ಗೂಳೆದ, ಹೋರಾಟ ಸಮಿತಿಯ ಸದಸ್ಯರಾದ ಭೀಮಪ್ಪ ಪೂಜಾರ, ಹನುಮಂತಪ್ಪ ಕುಂಬಳೂರ, ಮಲ್ಲಿಕಾರ್ಜುನ ಹಲಗೇರಿ, ಸಿದ್ದನಗೌಡ ದೊಡ್ಡಗೌಡರ, ಚಂದ್ರಗೌಡ ಭರಮಗೌಡ್ರರ, ಸಂತೋಷ ಹಲಗೇರಿ, ರಾಜು ಬಾತಿ, ನಾಗೇಂದ್ರಪ್ಪ ಕ್ಯಾತಾರಿ ರಾಜಪ್ಪ ಬಾರ್ಕಿ ಇದ್ದರು.