Advertisement

ಕುಡಿಯುವ ನೀರು ಎರಡು ದಿನಕ್ಕೊಮ್ಮೆ ಪೂರೈಕೆ: ಡಿಸಿ ಸೂಚನೆ

12:15 PM Mar 21, 2017 | Team Udayavani |

ಮಂಗಳೂರು: ಪ್ರಸ್ತುತ ಸಂಗ್ರಹ ಇರುವ ನೀರನ್ನು ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ಮೇ ಅಂತ್ಯದವರೆಗೂ ಸಮಸ್ಯೆಯಾಗದಂತೆ ಪೂರೈಕೆ ಮಾಡಲು ಸಾಧ್ಯವಾಗುವಂತೆ ದಿನ ಬಿಟ್ಟು ದಿನ ಸರಬರಾಜು ಮಾಡಬೇಕು ಎಂದು ಡಾ| ಕೆ.ಜಿ. ಜಗದೀಶ ಸೂಚಿಸಿದ್ದಾರೆ.

Advertisement

ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸ್ಥಿತಿಗತಿ ಬಗ್ಗೆ ಚರ್ಚಿಸಲು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕುಡಿಯುವ ನೀರು ಸಮಸ್ಯೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಬರುವ ಮನವಿಗಳಿಗೆ ತತ್‌ಕ್ಷಣ ಸ್ಪಂದಿಸಬೇಕು ಎಂದು ಅವರು ಅಧಿಕಾರಿಗಳಿಗೆ ಆದೇಶಿಸಿದರು.

ಕುಡಿಯುವ ನೀರಿನ ಯೋಜನೆಗಳಿಗೆ ಅನುದಾನದ ಕೊರತೆ ಇಲ್ಲ. ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಅಗತ್ಯಾನುಸಾರ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಇನ್ನೂ ಅನುದಾನ ಬೇಕಿದ್ದಲ್ಲಿ ಸೂಕ್ತ ಪ್ರಸ್ತಾವನೆ ಸಲ್ಲಿಸಬೇಕು. ನೀರಿನ ಸಮಸ್ಯೆಗಳು ತ್ವರಿತವಾಗಿ ಪರಿಹಾರವಾಗಬೇಕೆಂಬುದು ಸರಕಾರದ ಆಶಯವಾಗಿದೆ ಎಂದರು.

ಸಾರ್ವಜನಿಕರಿಗೆ ಆಯಾ ಗ್ರಾಮ ಪಂಚಾಯತ್‌ ಅಥವಾ ನಗರ ಸ್ಥಳೀಯ ಸಂಸ್ಥೆಗಳಲ್ಲೇ ನೀರಿನ ಸಮಸ್ಯೆಗಳಿಗೆ 24 ಗಂಟೆಯೊಳಗೆ ಪರಿಹಾರ ಸಿಗಬೇಕು. ಕುಡಿಯುವ ನೀರಿನ ಸಮಸ್ಯೆಗಳಿಗೆ ಮೇಲಿನ ಕಚೇರಿಗಳವರೆಗೆ ಸಾರ್ವಜನಿಕರು ಬರುವಂತಾಗಬಾರದು. ಈ ನಿಟ್ಟಿನಲ್ಲಿ ತ್ವರಿತವಾಗಿ ಕಾರ್ಯ ನಿರ್ವಹಿಸಬೇಕು ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು.

ಹೊಸ ಕುಡಿಯುವ ನೀರಿನ ಯೋಜನೆಗಳಿಗೆ ವಿದ್ಯುತ್‌ ಸಂಪರ್ಕ ನೀಡಲು ಮೆಸ್ಕಾಂ ವಿಳಂಬಿಸಬಾರದು. ನದೀ ಪಾತ್ರದಲ್ಲಿ ತೋಟಗಳಿಗೆ ತುರ್ತು ಸಂದರ್ಭಗಳಿಗೆ ಹೊರತುಪಡಿಸಿ ಖಾಸಗಿ ಪಂಪ್‌ಸೆಟ್‌ಗಳಲ್ಲಿ ನೀರೆತ್ತದಂತೆ ತೋಟಗಾರಿಕೆ, ಕೃಷಿ, ಮೆಸ್ಕಾಂ ಅಧಿಕಾರಿಗಳು ನಿಗಾ ವಹಿಸಬೇಕು ಎಂದರು.

Advertisement

ಬರ ಪರಿಹಾರ
ಮಂಗಳೂರು ಮತ್ತು ಬಂಟ್ವಾಳ ತಾಲೂಕನ್ನು ರಾಜ್ಯ ಸರಕಾರ ಬರಪೀಡಿತ ಎಂದು ಘೋಷಿಸಿರುವುದರಿಂದ 2 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ಎರಡೂ ತಾಲೂಕುಗಳಿಗೆ ತಲಾ 30 ಲಕ್ಷ ರೂ. ಬಿಡುಗಡೆ ಮಾಡಲು ಅವರು ಸೂಚಿಸಿದರು.

ಲಕ್ಯಾದಿಂದ ನೀರು
ಮಂಗಳೂರು ಮಹಾನಗರಪಾಲಿಕೆಗೆ ಕುದುರೆಮುಖ ಲಕ್ಯಾ ಡ್ಯಾಂನಿಂದ ನೀರನ್ನು ಶಾಶ್ವತವಾಗಿ ಪಂಪಿಂಗ್‌ ಮಾಡಲು ಅನುಮತಿಸಲು ಕುದುರೆಮುಖ ಸಂಸ್ಥೆಗೆ ಪತ್ರ ಬರೆಯಲಾಗಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು. ಮನಪಾ ಆಯುಕ್ತ ಮುಹಮ್ಮದ್‌ ನಝೀರ್‌ ಮಾತನಾಡಿ, ತುಂಬೆ ನೇತ್ರಾವತಿ ಡ್ಯಾಂನಲ್ಲಿ ಸೋಮವಾರ 5 ಮೀಟರ್‌ ನೀರು ಸಂಗ್ರಹಣೆಯಾಗಿದೆ ಎಂದು ವಿವರಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಉಪ ಕಾರ್ಯದರ್ಶಿ ಎನ್‌.ಆರ್‌. ಉಮೇಶ್‌, ಅಪರ ಜಿಲ್ಲಾಧಿಕಾರಿ ಕುಮಾರ್‌, ಮಂಗಳೂರು ಉಪವಿಭಾಗಾಧಿಕಾರಿ ರೇಣುಕಾ ಪ್ರಸಾದ್‌, ತಹಶೀಲ್ದಾರ್‌, ತಾಲೂಕು ಪಂಚಾಯತ್‌ ಕಾರ್ಯನಿರ್ವಹಣಾಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.

ಖಾಸಗಿ ಮೂಲಗಳಿಂದಲೂ ನೀರಿನ ವ್ಯವಸ್ಥೆ
ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡ ಸಂದರ್ಭದಲ್ಲಿ ಹೊಸ ಬೋರ್‌ವೆಲ್‌ ಕೊರೆಯಲು ಕಾಯದೆ, ಖಾಸಗಿ ಬೋರ್‌ವೆಲ್‌ಗ‌ಳನ್ನು ತಹಶೀಲ್ದಾರ್‌ ಮೂಲಕ ಅಭಿಗ್ರಹಣ ಮಾಡಿ, ಅಲ್ಲಿಂದ ನೀರು ಪಡೆದು ಸಾರ್ವಜನಿಕರಿಗೆ ಪೂರೈಕೆ ಮಾಡಬೇಕು. ಸ್ಥಳೀಯ ಮಟ್ಟದಲ್ಲಿ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮಕರಣಿಕರು ಪರಿಶೀಲನೆ ಮಾಡಿ, ನೀರಿನ ಸಮಸ್ಯೆ ಎದುರಾಗಬಹುದಾದ ಪ್ರದೇಶಗಳನ್ನು ಗುರುತಿಸಿ, ಅಗತ್ಯ ಕ್ರಮ ಕೈಗೊಳ್ಳಬೇಕು. ಗ್ರಾ.ಪಂ. ಹಾಗೂ ಪಟ್ಟಣ ಪ್ರದೇಶಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಕೆಯ ಬಗ್ಗೆ ಪ್ರತೀ ವಾರ ಜಿಲ್ಲಾಧಿಕಾರಿ ಕಚೇರಿಗೆ ವರದಿ ನೀಡ ಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next