Advertisement

ಮನೆ ಮನೆಗೆ ಗಂಗೆ: ಆಮೆಗತಿಯ ಕಾಮಗಾರಿ

11:00 PM Dec 04, 2022 | Team Udayavani |

ಉಡುಪಿ : ಗ್ರಾಮೀಣ ಭಾಗದ ಪ್ರತೀ ಮನೆಗೂ ನಳ್ಳಿಯ ಮೂಲಕ ಶುದ್ಧ ಕುಡಿಯುವ ನೀರು (ಮನೆ ಮನೆಗೆ ಗಂಗೆ) ಪೂರೈಸುವ ಜಲಜೀವನ್‌ ಮಿಷನ್‌ ಯೋಜನೆಯ ಕಾಮಗಾರಿ ಆಮೆ ಗತಿಯಲ್ಲಿ ಸಾಗುತ್ತಿದೆ.

Advertisement

ಈ ಯೋಜನೆಯಡಿ ಎಲ್ಲ ಮನೆಗೂ 2024ರ ಅಂತ್ಯದೊಳಗೆ ನೀರು ಪೂರೈಸಲು ಸರಕಾರ ಮುಂದಾಗಿತ್ತು. ಮೊದಲ ಹಂತದ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದೆ. ಆದರೆ ಎರಡು ಮತ್ತು ಮೂರನೇ ಹಂತದ ಕಾಮಗಾರಿಗಳು ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಕಾಣುತ್ತಿಲ್ಲ. ಉಡುಪಿ ಜಿಲ್ಲೆಯಲ್ಲಿ 2,47,188 ಮನೆಗಳಿಗೆ ನಳ್ಳಿ ನೀರಿನ ಸಂಪರ್ಕ ನೀಡುವ ಗುರಿ ಹೊಂದಲಾಗಿದೆ. ಇದರಲ್ಲಿ 1,56,982 ಮನೆಗೆ ನಳ್ಳಿ ಸಂಪರ್ಕ ಕಲ್ಪಿಸುವ ಕಾಮಗಾರಿ ಆರಂಭವಾಗಿದೆ/ಪೂರ್ಣಗೊಂಡಿದೆ. ಶೇ. 63.51ರಷ್ಟು ಪ್ರಗತಿ ಸಾಧಿಸಲಾಗಿದೆ. ಇನ್ನೂ ಸುಮಾರು 90 ಸಾವಿರ ಮನೆಗಳಿಗೆ ಸಂಪರ್ಕ ಕಲ್ಪಿಸಬೇಕಿದೆ. ದ.ಕ.ದಲ್ಲಿ 3,34,184 ಮನೆಗೆ ನಳ್ಳಿ ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿದೆ. ಈಗಾಗಲೇ 2,68,366 ಮನೆಗಳಿಗೆ ಸಂಪರ್ಕ ಕಲ್ಪಿಸುವ ಕಾಮಗಾರಿ ನಡೆಯುತ್ತಿದೆ/ ನಡೆದಿದೆ. ಶೇ. 80.31ರಷ್ಟು ಪ್ರಗತಿ ಸಾಧಿಸಲಾಗಿದೆ. ಸುಮಾರು 65 ಸಾವಿರಕ್ಕೂ ಅಧಿಕ ಮನೆಗಳಿಗೆ ಇನ್ನಷ್ಟೇ ಸಂಪರ್ಕ ಕಲ್ಪಿಸಬೇಕಿದೆ.

ಮಾಡಿರುವ ವೆಚ್ಚ
ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಈ ಯೋಜನೆಗೆ ಅನುದಾನ ನೀಡಲಾಗುತ್ತದೆ. ಕೇಂದ್ರ ಸರಕಾರದ ಪಾಲು ಸೇರಿದಂತೆ ರಾಜ್ಯ ಸರಕಾರ 2018-19ರಿಂದ 2022-23ರ ವರೆಗೆ 8,289.46 ಕೋ.ರೂ.ಗಳನ್ನು ಬಿಡುಗಡೆ ಮಾಡಿದೆ. ಅದರಂತೆ ಉಡುಪಿ ಜಿಲ್ಲೆಯಲ್ಲಿ ಸುಮಾರು 98.62 ಕೋ.ರೂ., ದ.ಕ.ದಲ್ಲಿ 225.03 ಕೋ.ರೂ. ವೆಚ್ಚ ಮಾಡಲಾಗಿದೆ. ಕೆಲವೊಂದು ಕಾಮಗಾರಿಗಳು ಈಗ ಆರಂಭ ವಾಗಿರುವುದರಿಂದ ಅದರ ವೆಚ್ಚ ಅಥವಾ ಆರ್ಥಿಕ ಪ್ರಗತಿ ಇದರಲ್ಲಿ ಸೇರಿಲ್ಲ. ಒಟ್ಟಾರೆಯಾಗಿ ಎರಡು ಜಿಲ್ಲೆಗಳಲ್ಲಿ 2022ರ ಸೆಪ್ಟಂಬರ್‌ ಅಂತ್ಯದ ವೇಳೆಗೆ 323.65 ಕೋ.ರೂ.ಗಳನ್ನು ಈ ಉದ್ದೇಶಕ್ಕೆ ವ್ಯಯ ಮಾಡಲಾಗಿದೆ.

ಕಾಮಗಾರಿ ವಿವರ
ಉಡುಪಿ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 337 ಕಾಮಗಾರಿಯನ್ನು ಅಂದಾಜು 132.10 ಕೋ.ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಇದರಲ್ಲಿ 290 ಪೂರ್ಣಗೊಂಡಿವೆ. 2ನೇ ಹಂತದಲ್ಲಿ 68 ಕಾಮಗಾರಿಗಳನ್ನು ಅಂದಾಜು 225.36 ಕೋ.ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳ ಲಾಗಿದ್ದು, ಇದರಲ್ಲಿ 3 ಕಾಮಗಾರಿ ಮಾತ್ರ ಪೂರ್ಣಗೊಂಡಿವೆ.

ಮೂರನೇ ಹಂತದಲ್ಲಿ 122 ಕಾಮಗಾರಿ ಅಂದಾಜು 331.98 ಕೋ.ರೂ. ವೆಚ್ಚದಲ್ಲಿ ನಡೆಸಲು ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳಬೇಕಿದೆ. ದ.ಕ.ದಲ್ಲಿ ಮೊದಲ ಹಂತದಲ್ಲಿ 458 ಕಾಮಗಾರಿಯನ್ನು ಅಂದಾಜು 149 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, 370 ಕಾಮಗಾರಿ ಮುಗಿದಿದೆ. ಶೇ. 87.43 ಕೋ.ರೂ. ವೆಚ್ಚವಾಗಿದೆ. ಎರಡನೇ ಹಂತದಲ್ಲಿ 236 ಕೋ.ರೂ. ವೆಚ್ಚದಲ್ಲಿ 134 ಕಾಮಗಾರಿ ನಡೆಸಲು ಉದ್ದೇಶಿಸಿದ್ದು, ಮೂರನೇ ಹಂತದಲ್ಲಿ 187.41 ಕೋ.ರೂ. ವೆಚ್ಚದಲ್ಲಿ 108 ಕಾಮಗಾರಿ ನಡೆಸಲು ಉದ್ದೇಶಿಸಲಾಗಿದೆ. ಎರಡು ಮತ್ತು ಮೂರನೇ ಹಂತದಲ್ಲಿ ಯಾವುದೇ ಕಾಮಗಾರಿ ಪೂರ್ಣಗೊಂಡಿಲ್ಲ. ಕ್ರಮವಾಗಿ ಶೇ. 14.59, ಶೇ. 0. 4.0 ಕೋಟಿ ರೂ. ವೆಚ್ಚವಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Advertisement

ಪ್ರತೀ ಮನೆಗೆ ನಳ್ಳಿಯ ಮೂಲಕ ಶುದ್ಧ ಕುಡಿಯುವ ನೀರಿ ಪೂರೈಸುವ ಸಂಬಂಧ ಬಹುತೇಕ ಕಡೆಗಳಲ್ಲಿ ಕಾಮಗಾರಿ ಆರಂಭವಾಗಿ ಪೂರ್ಣಗೊಂಡಿದೆ. ಹಂತ ಹಂತವಾಗಿ ಕಾಮಗಾರಿ ನಡೆಯುತ್ತಿರು ವುದರಿಂದ ನಿರ್ದಿಷ್ಟ ಕಾಲಮಿತಿಯೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಕೊರೊನಾ ದಿಂದ ಎರಡು ವರ್ಷ ಯೋಜನೆಯ ಅನುಷ್ಠಾನಕ್ಕೆ ಹೊಡೆತ ಬಿದ್ದಿರು ವುದು ಕೂಡ ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ. ಕೇಂದ್ರ ಹಾಗೂ ರಾಜ್ಯದಿಂದ ಅನುದಾನದ ಲಭ್ಯತೆ ಆಧಾರದಲ್ಲಿ ಕಾಮಗಾರಿ ನಡೆಸುತ್ತಿದ್ದೇವೆ ಎಂದು ಜಲಜೀವನ್‌ ಮಿಷನ್‌ ಯೋಜನೆಗೆ ಸಂಬಂಧಿಸಿದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next