Advertisement
ವೇಣೂರು ಮೇ 4 ಕಳೆದ ಡಿಸೆಂಬರ್‌ನಲ್ಲಿ ಕೊಳವೆಬಾವಿ ಕೊರೆದು ಉತ್ತಮ ನೀರು ಲಭಿಸಿದ್ದರೂ ಪಂಪ್ ಅಳವಡಿಸದೆ ಹಾಗೂ ಪೈಪ್ ಸಂಪರ್ಕ ಕಲ್ಪಿಸದೆ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ ಎಂದು ನಡ್ತಿಕಲ್ಲು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ಸುಮಾರು ಒಂದು ವರ್ಷದ ಹಿಂದೆ ನಡ್ತಿಕಲ್ಲು ಗ್ರಾಮಕ್ಕೆ ಟಾಸ್ಕ್ಪೋರ್ಸ್ ಯೋಜನೆಯಡಿ ಕೊಳವೆಬಾವಿ ಮಂಜೂರುಗೊಂಡು, ಕಳೆದ ಡಿಸೆಂಬರ್‌ನಲ್ಲಿ ಕೊರೆಯಲಾಗಿದೆ.
ಮೂಡುಕೋಡಿ, ಕೊಪ್ಪದಬಾಕಿಮಾರು, ಎರಡಾಲು, ನಡ್ತಿಕಲ್ಲು, ಮಾಂದಡ್ಕ, ಉಂಬೆಟ್ಟು, ಕೊಣಿಲ ಸಹಿತ ಸುತ್ತಮುತ್ತಲಿನ ಸುಮಾರು 60ಕ್ಕೂ ಹೆಚ್ಚು ಮನೆಗಳು ನೀರಿನ ಸಮಸ್ಯೆ ಎದುರಿಸುತ್ತಿವೆ. ನಡ್ತಿಕಲ್ಲಿನ ಕೊಳವೆ ಬಾವಿ ಪಕ್ಕವೇ ನೀರಿನ ಕಾಂಕ್ರಿಟ್ ಟ್ಯಾಂಕ್ ಇದ್ದು, ಉಪಯೋಗ ಮಾಡಿಕೊಂಡರೆ ನೀರಿನ ಸಮಸ್ಯೆ ನೀಗಲಿದೆ. ಪರಾರಿ ಹಾಗೂ ಕುದ್ರುಪಲ್ಕೆ ಗ್ರಾಮಗಳಲ್ಲಿ ಓವರ್ ಹೆಡ್ ಟ್ಯಾಂಕ್‌ಗಳಿವೆ. ಪರಾರಿ ಓವರ್ ಹೆಡ್ ಟ್ಯಾಂಕ್‌ನಿಂದ ಪರಾರಿ, ಪಾಲ್ದಲ್ಕೆ, ಹುಲ್ಲೋಡಿ, ದೋಟ ಪ್ರದೇಶಗಳಿಗೆ ಹಾಗೂ ಕುದ್ರುಪಲ್ಕೆ ಟ್ಯಾಂಕ್‌ನಿಂದ ಕುದ್ರುಪಲ್ಕೆ, ಉಂಬೆಟ್ಟು ಶಾಲಾ ಬಳಿ, ಪಾಡಾರು, ಕೆರೆಮನೆಯ ಸುತ್ತಮುತ್ತ ಪರಿಸರಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಪರಾರಿ, ಕುದ್ರುಪಲ್ಕೆಯಲ್ಲಿರುವ ಕೊಳವೆ ಬಾವಿಯಲ್ಲಿ ಸಾಕಷ್ಟು ನೀರು ಲಭಿಸುತ್ತಿಲ್ಲ. ಹೀಗಾಗಿ ಪೈಪ್‌ಲೈನ್‌ನಲ್ಲಿ ಸರಬರಾಜು ಆಗುವ ನೀರಿನಲ್ಲಿ ಒತ್ತಡ ಇಲ್ಲದಿರುವುದರಿಂದ ಎತ್ತರದ ಪ್ರದೇಶಗಳ ಮನೆಗಳ ನಳ್ಳಿಗಳಲ್ಲಿ ನೀರು ಬರುತ್ತಿಲ್ಲ.
Related Articles
· ಪೈಪ್‌ಲೈನ್‌ನಲ್ಲಿ ವೇಗವಾಗಿ ದಿನವೊಂದಕ್ಕೆ ಒಂದೆರಡು ಗಂಟೆ ನೀರು ಬರುವಂತಾಗಬೇಕು.
· ವಿದ್ಯುತ್ ವೋಲ್ಟೆàಜ್ ಸಮಸ್ಯೆಗೆ ಬದಲಿ ವ್ಯವಸ್ಥೆಯಾಗಲಿ.
· ನಡ್ತಿಕಲ್ಲಿನಲ್ಲಿ ಕೊರೆಯಲಾಗಿರುವ ಕೊಳವೆಬಾವಿಗೆ ಶೀಘ್ರ ಪಂಪ್ ಅಳವಡಿಸಿ ಗ್ರಾಮಕ್ಕೆ ನೀರು ಪೂರೈಕೆ ಮಾಡಲಿ.
Advertisement
ದೂರು ಬಂದಿಲ್ಲನಡ್ತಿಕಲ್ಲು, ಮೂಡುಕೋಡಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಇರುವ ಬಗ್ಗೆ ಪಂ.ಗೆ ದೂರು ಬಂದಿಲ್ಲ. ನಡ್ತಿಕಲ್ಲಿನಲ್ಲಿ ಕೊಳವೆಬಾವಿ ತೆಗೆದಿರುವ ಬಗ್ಗೆ ಮಾಹಿತಿ ಇಲ್ಲವಾಗಿದ್ದು, ನೀರು ಸರಬರಾಜು-ನೈರ್ಮಲ್ಯ ಸಮಿತಿ ಮೂಲಕ ಗ್ರಾಮಗಳಿಗೆ ನೀರು ಪೂರೈಕೆ ನಿರ್ವಹಿಸ ಲಾಗುತ್ತಿದೆ. ನೀರಿನ ಸಮಸ್ಯೆಗಳಿರುವ ಕುಟುಂಬ ಲಿಖೀತ ದೂರು ನೀಡಲಿ.
– ಮೋಹಿನಿ ವಿ. ಶೆಟ್ಟಿ, ಅಧ್ಯಕ್ಷೆ, ಗ್ರಾ.ಪಂ. ವೇಣೂರು ಜಿಲ್ಲಾಧಿಕಾರಿಗೆ ದೂರು
ಇಲ್ಲಿನ ನೀರಿನ ಸಮಸ್ಯೆ ಮನಗಂಡು ನಡ್ತಿಕಲ್ಲಿನಲ್ಲಿ ಕೊರೆಯಲಾದ ಕೊಳವೆ ಬಾವಿಗೆ ಪಂಪ್ ಅಳವಡಿಸುವಂತೆ ವೇಣೂರು ಗ್ರಾ.ಪಂ.ನಲ್ಲಿ ಕೇಳಿಕೊಂಡಿದ್ದು, ಇನ್ನೇನು ಒಂದು ತಿಂಗಳಲ್ಲಿ ಮಳೆ ಬರುತ್ತದೆ ಪಂಪ್ ಯಾಕೆ? ಎಂಬ ಉತ್ತರ ನೀಡಿರುತ್ತಾರೆ. ಗ್ರಾಮಸ್ಥರ ಪರವಾಗಿ ಸೋಮವಾರ ಜಿಲ್ಲಾಧಿಕಾರಿಗೆ ಲಿಖೀತ ದೂರು ನೀಡುತ್ತೇನೆ.
– ಅನೂಪ್ ಜೆ. ಪಾಯಸ್, ಸದಸ್ಯರು, ನೀರು ಮತ್ತು ನೈರ್ಮಲ್ಯ ಸಮಿತಿ ನಳ್ಳಿ ನೀರು ಬರುತ್ತಿಲ್ಲ
ಎತ್ತರ ಪ್ರದೇಶಕ್ಕೆ ಪಂ.ನ ನಳ್ಳಿ ನೀರು ಬರುತ್ತಿಲ್ಲ. ಸಿಂಟೆಕ್ಸ್ ಟ್ಯಾಂಕನ್ನು ಭೂಮಿಯೊಳಗೆ ಹೂತಿದ್ದು, ಅದಕ್ಕೆ ಸಂಪರ್ಕ ಕಲ್ಪಿಸಿದ್ದೇವೆ. ನಡ್ತಿಕಲ್ಲಿನ ಕೊಳವೆಬಾವಿಗೆ ಪಂಪ್ ಅಳವಡಿಸಿ ಸಂಪರ್ಕ ಕಲ್ಪಿಸಿದರೆ ಕುಡಿಯುವ ನೀರಿಗೆ ಸಮಸ್ಯೆಯಾಗದು.
– ಶ್ರೀಧರ ಮೂಲ್ಯ, ನಡ್ತಿಕಲ್ಲು ಪಂಪ್ ಅಳವಡಿಕೆ
ವೇಣೂರು ಗ್ರಾ.ಪಂ. ವ್ಯಾಪ್ತಿಯಲ್ಲಿ 3-4 ಕೊಳವೆಬಾವಿಗೆ ತಾತ್ಕಾಲಿಕ ಸಂಪರ್ಕ ಕಲ್ಪಿಸಲಾಗಿದೆ. ಒಂದು ಕೊಳವೆ ಬಾವಿಯ ಪಂಪ್‌ಗೆ ತಿಂಗಳೊಂದಕ್ಕೆ ರೂ. 5ರಿಂದ 8 ಸಾವಿರ ವಿದ್ಯುತ್ ಬಿಲ್ ಬರುತ್ತಿದೆ. ಅಗತ್ಯಬಿದ್ದರೆ ನಡ್ತಿಕಲ್ಲಿನ ಕೊಳವೆಬಾವಿಗೆ ತಾತ್ಕಾಲಿಕ ಪಂಪ್ ಅಳವಡಿಕೆ ಮಾಡಲಾಗುವುದು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕ್ರಿಯಾಯೋಜನೆ ಇಟ್ಟು ಪಂಪ್ ಅಳವಡಿಸಲಾಗುವುದು.
– ಕೆ. ವೆಂಕಟಕೃಷ್ಣರಾಜ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಉದಯವಾಣಿ ಆಗ್ರಹ
ನಡ್ತಿಕಲ್ಲಿನ ಕೊಳವೆಬಾವಿಗೆ ಶೀಘ್ರ ಪಂಪ್ ಅಳವಡಿಸಿ ಸಂಪರ್ಕ ಕಲ್ಪಿಸಬೇಕು. ಪಾಳುಬಿದ್ದಿರುವ ಟ್ಯಾಂಕನ್ನು ದುರಸ್ತಿಗೊಳಿಸಿ ಅದಕ್ಕೆ ನೀರು ಪೂರೈಕೆ ಮಾಡಿ ಗ್ರಾಮಗಳಿಗೆ ಸರಬರಾಜು ಮಾಡುವುದು. ಎತ್ತರದ ಗ್ರಾಮಗಳ ಮನೆಗಳಿಗೆ ದಿನವೊಂದಕ್ಕೆ 1 ಗಂಟೆ ಕಾಲ ಪಂಪ್ ಮೂಲಕ ನೇರವಾಗಿ ನೀರು ಸರಬರಾಜು ಮಾಡುವುದು. ಪದ್ಮನಾಭ ವೇಣೂರು