ಚಿಕ್ಕಬಳ್ಳಾಪುರ: ಚಳಿಗಾಲ ಕೊನೆಗೊಂಡು ಬೇಸಿಗೆ ಆರಂಭಗೊಳ್ಳುತ್ತಿದ್ದಂತೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸತೊಡಗಿದ್ದು, ನಾಲ್ಕೈದು ತಿಂಗಳಿಗೆ ಚುನಾವಣೆ ಎದುರಾಗಲಿರುವ ಗ್ರಾಪಂಗಳಲ್ಲಿ ರಾಜಕೀಯ ಕದನಕ್ಕಿಂತ ಕುಡಿಯುವ ನೀರಿನ ಸಂಘರ್ಷ ತಾರಕಕ್ಕೇರುವ ಸಾಧ್ಯತೆ ದಟ್ಟವಾಗಿದೆ.
ಜಿಲ್ಲೆಯಲ್ಲಿ ಬೇಸಿಗೆಯ ರಣ ಬಿಸಿಲು ಒಂದೆಡೆ ನೆತ್ತಿ ಸುಡಲು ಆರಂಭಿಸುತ್ತಿದ್ದಂತೆ, ಮತ್ತೂಂದೆಡೆ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ತೀವ್ರ ಪರದಾಟ ಆರಂಭಗೊಂಡಿದ್ದು, ಜಿಲ್ಲೆಯಲ್ಲಿ ಬೇಸಿಗೆಗೂ ಮೊದಲೇ ಬರೋಬ್ಬರಿ 75 ಗ್ರಾಮಗಳಲ್ಲಿ ಹನಿ ನೀರು ಇಲ್ಲದೇ ಸಾರ್ವಜನಿಕರು ಪರದಾಡುವಂತಾಗಿದೆ.
ಅಧಿಕಾರಿಗಳು ಚಿಂತೆಗೀಡು: ಜಿಲ್ಲೆಯಲ್ಲಿ ಕಳೆದ ಆರೇಳು ವರ್ಷಗಳಿಂದ ಸತತವಾಗಿ ಕಾಡುತ್ತಿರುವ ಬರದಿಂದಾಗಿ ನೀರಿನ ಸಮಸ್ಯೆ ಪ್ರತಿ ವರ್ಷ ಬೇಸಿಗೆಯಲ್ಲಿ ತಾರಕಕ್ಕೇರುತ್ತಿದ್ದು, ಈ ವರ್ಷವು ಆರಂಭದಲ್ಲಿಯೇ ನೀರಿನ ಸಮಸ್ಯೆ ಗ್ರಾಮಗಳಲ್ಲಿ ಕಾಣಿಸಿಕೊಂಡಿರುವುದು ಅಧಿಕಾರಿಗಳನ್ನು ಚಿಂತೆಗೀಡು ಮಾಡಿದೆ.
ಮುಂಬರುವ ಗ್ರಾಪಂ ಚುನಾವಣೆಗಳಲ್ಲಿ ಸದಸ್ಯರಾಗಲು ಬಯಸಿರುವ ಆಕಾಂಕ್ಷಿಗಳಲ್ಲಿಯು ನೀರಿನ ಸಂಕಷ್ಟ ನಿದ್ದೆಗೆಡಿಸಿದೆ. ಜಿಲ್ಲೆಯಲ್ಲಿ ಸದ್ಯಕ್ಕೆ ಒಟ್ಟು 75 ಗ್ರಾಮಗಳು ನೀರಿನ ಸಮಸ್ಯಾತ್ಮಕ ಗ್ರಾಮಗಳಾಗಿದ್ದು, ಬೇಸಿಗೆ ಮುಗಿಯುವುದರೊಳಗೆ ಆ ಸಂಖ್ಯೆ ಮೂರಂಕಿ ದಾಟುವುದರಲ್ಲಿ ಯಾವುದೇ ಅನುಮಾನವಿಲ್ಲ. ಜಿಲ್ಲೆಯ ಚಿಂತಾಮಣಿ, ಶಿಡ್ಲಘಟ್ಟ ಹಾಗೂ ಬಾಗೇಪಲ್ಲಿ ತಾಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದ್ದು, ಈಗಾಗಲೇ ಕೆಲವು ಕಡೆ ನೀರಿಗಾಗಿ ಗ್ರಾಮಸ್ಥರು ಧರಣಿ, ಪ್ರತಿಭಟನೆಗೆ ಇಳಿದಿದ್ದಾರೆ.
ಚಿಂತಾಮಣಿ-45 ಗ್ರಾಮಗಳಲ್ಲಿ ನೀರಿಲ್ಲ: ಚಿಂತಾಮಣಿ ತಾಲೂಕಿನ ಒಂದರಲ್ಲಿಯೇ 45 ಗ್ರಾಮಗಳಲ್ಲಿ ಕುಡಿಯುವ ನೀರಿಲ್ಲದೇ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಖಾಸಗಿ ಕೊಳವೆ ಬಾವಿ ಅಥವಾ ಟ್ಯಾಂಕರ್ ನೀರಿಗಾಗಿ ಕೆಲಸ ಕಾರ್ಯ ಬಿಟ್ಟು ಕಾಯಬೇಕಿದೆ. ಚಿಂತಾಮಣಿಯಲ್ಲಿ 45 ಗ್ರಾಮಗಳ ಪೈಕಿ 13 ಗ್ರಾಮಗಳಿಗೆ ನಿತ್ಯ ಟ್ಯಾಂಕರ್ ಮೂಲಕ ಪ್ರತಿ ದಿನ 37 ಟ್ಯಾಂಕರ್ ನೀರು ಸರಬರಾಜು ಮಾಡ ಬೇಕಿದ್ದು, 32 ಗ್ರಾಮಗಳಿಗೆ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಒದಗಿಸಲಾಗುತ್ತಿದೆ. ಇನ್ನೂ ಬಾಗೇಪಲ್ಲಿ ಎರಡನೇ ಸ್ಥಾನದಲ್ಲಿದ್ದು ಒಟ್ಟು 14 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ.
ಜನ ಜೀವನದ ಮೇಲೆ ಹೊಡೆತ: ಬೇಸಿಗೆ ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಲಿದ್ದು, ಜಿಲ್ಲಾಡಳಿತ ಈಗಲೇ ಎಚ್ಚೆತ್ತುಕೊಂಡು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದಿದ್ದರೆ ಜನರು ಹಾಹಾಕಾರ ಪಡಬೇಕಿದೆ. ಈಗಾಗಲೇ ಹಾಲಿನ ಉತ್ಪಾದನೆ ಕುಸಿತವಾಗಿ ಹೈನೋದ್ಯಮಕ್ಕೆ ಹೊಡೆತ ಬಿದ್ದಿದೆ. ಇನ್ನೂ ನೀರು ಸಮರ್ಪಕವಾಗಿ ಸಿಗದಿದ್ದರೆ ಹೈನೋದ್ಯಮದ ಮೇಲೆ ಇನ್ನಷ್ಟು ಹೊಡೆತ ಬೀಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಜನ ನೀರಿಗಾಗಿ ದಂಗೆ ಏಳುವ ಮುನ್ನ ಅಧಿಕಾರಿಗಳು ಪರ್ಯಾಯ ಕ್ರಮಗಳತ್ತ ಗಮನ ಹರಿಸಬೇಕಿದೆ.
ಜಿಲ್ಲೆಯಲ್ಲಿ ಒಟ್ಟು 75 ಸಮಸ್ಯಾತ್ಮಕ ಗ್ರಾಮಗಳಿಗೆ ಕುಡಿಯುವ ನೀರನ್ನು ಟ್ಯಾಂಕರ್ ಹಾಗೂ ಖಾಸಗಿ ಕೊಳವೆಬಾವಿಗಳ ಮೂಲಕ ಸರಬರಾಜು ಮಾಡಲಾಗುತ್ತಿದೆ. ಬೇಸಿಗೆ ಶುರುವಾದಂತೆ ಸಮಸ್ಯಾತ್ಮಕ ಗ್ರಾಮಗಳ ಸಂಖ್ಯೆ ಹೆಚ್ಚಾಗಲಿದೆ. ಸರ್ಕಾರ ಕುಡಿಯುವ ನೀರಿಗೆ 1ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಅಗತ್ಯ ಇರುವೆಡೆ ಕಾಮಗಾರಿ ಕೈಗೊಳ್ಳಲಾಗಿದೆ. 5 ಕೋಟಿ ರೂ.ಗೆ ಪ್ರಸ್ತಾವನೆ ಕಳುಹಿಸಲಾಗಿದೆ
.-ಶಿವಕುಮಾರ್ ಲಾಕೋರ್, ಕಾರ್ಯಪಾಲಕ ಅಭಿಯಂತರರು. ನೀರು ಸರಬರಾಜು ಮಂಡಳಿ
-ಕಾಗತಿ ನಾಗರಾಜಪ್ಪ