Advertisement

ಬಿಟಿಪಿಎಸ್‌ನಿಂದ ವಿವಿಧ ಗ್ರಾಮಗಳಿಗೆ ಕುಡಿಯುವ ನೀರು

02:47 PM Apr 26, 2022 | Team Udayavani |

ಬಳ್ಳಾರಿ: ತಾಲೂಕಿನ ಕುಡತಿನಿ ಬಳಿಯ ಕೆಪಿಸಿಎಲ್‌ ಘಟಕವು ನಾರಾಯಣಪುರ ಡ್ಯಾಂನಿಂದ ಪಡೆಯುತ್ತಿರುವ ಒಟ್ಟು 2.17 ಟಿಎಂಸಿ ನೀರಿನಲ್ಲಿ 0.40 ಟಿಎಂಸಿ ಪ್ರಮಾಣದ ನೀರನ್ನು ಕುಡತಿನಿ ಪಟ್ಟಣ, ಬಳ್ಳಾರಿ ನಗರ, ಹರಗಿನಡೋಣಿ, ಜಾನೆಕುಂಟೆ, ಜಾನೆಕುಂಟೆ ತಾಂಡ, ಬೆಳಗಲ್ಲು, ಬೆಳಗಲ್ಲು ತಾಂಡ ಮತ್ತು ವೇಣಿವೀರಾಪುರ ಗ್ರಾಮಕ್ಕೆ ಕುಡಿಯುವ ನೀರಿಗಾಗಿ ಬಳಕೆ ಮಾಡಲು 130.7 ಕೋಟಿ ರೂಪಾಯಿ ಅಂದಾಜು ವೆಚ್ಚದ ಜನಪರವಾದ ವಿಶೇಷ ಯೋಜನೆ ಜಾರಿಗೆ ತೀವ್ರ ಪ್ರಯತ್ನಗಳು ನಡೆದಿವೆ.

Advertisement

ವಿಧಾನಪರಿಷತ್‌ ಸದಸ್ಯ ವೈ.ಎಂ ಸತೀಶ್‌ ಅವರು, ನಾರಾಯಣಪುರ ಡ್ಯಾಂನಿಂದ ಕುಡತಿನಿಯ ಬಿಟಿಪಿಎಸ್‌/ಕೆಪಿಸಿಎಲ್‌ಗೆ ಸರಬರಾಜು ಆಗುತ್ತಿರುವ ಒಟ್ಟು 2.17 ಟಿಎಂಸಿ ನೀರಿನಲ್ಲಿ ಕುಡಿಯುವ ನೀರಿಗಾಗಿ 0.40 ಟಿ.ಎಂ.ಸಿ ಪ್ರಮಾಣದ ನೀರನ್ನು ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ಹರಗಿನಡೋಣಿ, ಜಾನೆಕುಂಟೆ, ಜಾನೆಕುಂಟೆ ತಾಂಡ, ಬೆಳಗಲ್ಲು, ಬೆಳಗಲ್ಲು ತಾಂಡ ಮತ್ತು ವೇಣಿವೀರಾಪುರ ಗ್ರಾಮಗಳಿಗೆ ಪೂರೈಕೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕೋರಿ ವಿಧಾನಪರಿಷತ್ತಿನಲ್ಲಿ ವಿಷಯ ಪ್ರಸ್ತಾಪಿಸಿದ್ದರು.

ವೈ.ಎಂ. ಸತೀಶ್‌ ಅವರ ಪ್ರಶ್ನೆಗೆ ಉತ್ತರಿಸಿದ ನಗರಾಭಿವೃದ್ಧಿ ಸಚಿವ ಬಿ.ಎ.ಬೈರತಿ ಬಸವರಾಜ್‌ ಅವರು, ಈ ವಿಷಯವನ್ನು ಇಂಧನ ಇಲಾಖೆಗೆ ವರ್ಗಾವಣೆ ಮಾಡಿದ್ದರು. ಈ ಕುರಿತು ಇಂಧನ ಸಚಿವ ವಿ. ಸುನೀಲ್‌ ಕುಮಾರ್‌ ಅವರು ಅಕಾರಿಗಳ ಸಭೆಯನ್ನು ನಡೆಸಿ, ಅಗತ್ಯ ಕ್ರಮಕೈಗೊಳ್ಳಲು ತಿಳಿಸಿದ್ದರು. ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತದ ಹಿರಿಯ ಅಧಿಕಾರಿಗಳು ಬಳ್ಳಾರಿ ಶಾಖೋತ್ಪನ್ನ ವಿದ್ಯುತ್‌ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಪತ್ರ ಬರೆದು, ಒಂದು ಘನ ಮೀಟರ್‌ ಪ್ರಮಾಣದ ನೀರಿನ ಸಂಗ್ರಹ ಮತ್ತು ಪೂರೈಕೆಗೆ ಅಗತ್ಯವಾಗಿರುವ ವೆಚ್ಚದ ಡಿಪಿಆರ್‌ (ಅಂದಾಜು ವೆಚ್ಚದ) ವರದಿಯನ್ನು ಸಿದ್ಧಪಡಿಸಬೇಕು’ ಎಂದು ಆದೇಶ ಜಾರಿ ಮಾಡಿದ್ದಾರೆ.

ವಿಧಾನಪರಿಷತ್‌ ಸದಸ್ಯ ವೈ.ಎಂ. ಸತೀಶ್‌ ಅವರು, ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು, ಇಂಧನ ಸಚಿವ ವಿ. ಸುನೀಲ್‌ ಕುಮಾರ್‌ ಮತ್ತು ನಾನು ವೈಯಕ್ತಿಕವಾಗಿ ಈ ಕುರಿತು ಅಧಿ ಕಾರಿಗಳ ಜೊತೆ ವಿವಿಧ ಹಂತಗಳಲ್ಲಿ ನಿರಂತರ ಸಭೆಗಳನ್ನು ನಡೆಸುತ್ತಿದ್ದೇವೆ. ನೀರು ಪೂರೈಕೆಗೆ ಅಧಿಕಾರಿಗಳು ತಾತ್ವಿಕ ಒಪ್ಪಿಗೆಯನ್ನು ಸೂಚಿಸಿ, ಡಿಪಿಆರ್‌ (ಅಂದಾಜು ವೆಚ್ಚ) ಸಿದ್ಧಪಡಿಸಲು ಆದೇಶ ನೀಡಿದ್ದಾರೆ. ಈ ಯೋಜನೆಯು ಜನಪರವಾಗಿದೆ. ಕಾರಣ ಈ ಯೋಜನೆಯು ಶೀಘ್ರದಲ್ಲೇ ಜಾರಿ ಆಗುವ ವಿಶ್ವಾಸವಿದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ಯೋಜನೆ ಜಾರಿ ಆದಲ್ಲಿ ಬಳ್ಳಾರಿ ನಗರದ ಪಕ್ಕದಲ್ಲೇ ಇರುವ ಹರಗಿನಡೋಣಿ, ಜಾನೆಕುಂಟೆ, ಜಾನೆಕುಂಟೆ ತಾಂಡ, ಬೆಳಗಲ್ಲು, ಬೆಳಗಲ್ಲು ತಾಂಡ ಮತ್ತು ವೇಣಿವೀರಾಪುರ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಅಲ್ಲದೇ, ಬಳ್ಳಾರಿ ನಗರಕ್ಕೆ 24/7 ಕುಡಿಯುವ ನೀರು ಪೂರೈಸಲು ಅಗತ್ಯವಿರುವ ಹೆಚ್ಚುವರಿ ನೀರನ್ನು ಅಲ್ಲೀಪುರ ಕುಡಿಯುವ ನೀರಿನ ಕೆರೆಯಲ್ಲಿ ಸಂಗ್ರಹ ಮಾಡಲು ಅನುಕೂಲವಾಗಲಿದೆ ಎಂದು ನಗರ ಶಾಸಕ ಜಿ. ಸೋಮಶೇಖರರೆಡ್ಡಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

ಮೂಲಗಳ ಪ್ರಕಾರ, ಕುಡತಿನಿಯ ಕೆಪಿಸಿಎಲ್‌ನಿಂದ ಕುಡತಿನಿ ಪಟ್ಟಣ, ಹರಗಿನಡೋಣಿ, ಜಾನೆಕುಂಟೆ, ಜಾನೆಕುಂಟೆ ತಾಂಡ, ಬೆಳಗಲ್ಲು, ಬೆಳಗಲ್ಲು ತಾಂಡ ಮತ್ತು ವೇಣಿವೀರಾಪುರ ಗ್ರಾಮಗಳಿಗೆ ಪೈಪ್‌ಲೈನ್‌ ಅಳವಡಿಸಲು ಮತ್ತು ಅಲ್ಲೀಪುರ ಕೆರೆಯಲ್ಲಿ ನೀರನ್ನು ಸಂಗ್ರಹ ಮಾಡಲು ಅಂದಾಜು 130.7 ಕೋಟಿ ರೂಪಾಯಿಗೂ ಹೆಚ್ಚಿನ ವೆಚ್ಚದ ಡಿಪಿಆರ್‌ ಸಿದ್ಧವಾಗುತ್ತಿದೆ. ಇಂಧನ ಇಲಾಖೆಯ ಮಟ್ಟದಲ್ಲಿ ಹಲವು ಸುತ್ತಿನ ಮಾತುಕತೆಗಳ ನಂತರ ಸರ್ಕಾರದ ಮಟ್ಟದಲ್ಲಿ ಒಪ್ಪಿಗೆ ಸಿಕ್ಕು, ಯೋಜನೆ ಖಂಡಿತವಾಗಿಯೂ ಜಾರಿ ಆಗಲಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಯೋಜನೆಗೆ ಅಗತ್ಯವಿರುವ ಹಣವನ್ನು ಜಿಲ್ಲಾ ಖನಿಜ ನಿಧಿ (ಡಿಎಂಎಫ್‌)ಯಿಂದ ಮತ್ತು ಇನ್ನಿತರೆ ಮೂಲಗಳಿಂದ ಪಡೆಯಲು ಅವಕಾಶವಿರುತ್ತದೆ. ಕಾರಣ ಸರ್ಕಾರದ ಹಂತದಲ್ಲಿ ಯೋಜನೆಗೆ ಒಪ್ಪಿಗೆ ಸಿಕ್ಕಲ್ಲಿ ತ್ವರಿತವಾಗಿ ಕಾಮಗಾರಿ ಪೂರ್ಣಗೊಂಡು ದಶಕಗಳ ಕಾಲದಿಂದಲೂ ಕುಡಿಯುವ ನೀರಿಗಾಗಿ ಪರದಾಡುತ್ತಿರುವ-ಹೋರಾಡುತ್ತಿರುವ ಹರಗಿನಡೋಣಿ, ಜಾನೆಕುಂಟೆ, ಜಾನೆಕುಂಟೆ ತಾಂಡ, ಬೆಳಗಲ್ಲು, ಬೆಳಗಲ್ಲು ತಾಂಡ ಮತ್ತು ವೇಣಿವೀರಾಪುರ ಗ್ರಾಮಗಳ ಜನರ ಬೇಡಿಕೆ ಈಡೇರಿದಂತೆ ಆಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next