ಶಿರಸಿ: ಕಳೆದ ಏಪ್ರೀಲ್ ಮೇ ತಿಂಗಳಲ್ಲಿ, ಅದೂ ಬಿಡಿ, ಜೂನ್ ಮೊದಲ ವಾರ ಕೂಡ ಬಿರು ಬೇಸಿಗೆ ವಾತಾವರಣದಿಂದ ಪ್ರಮುಖವಾಗಿ ಏಟಾಗಿದ್ದು, ಬರಲಿರುವ ಅಡಕೆ ಬೆಳೆಗೆ. ಅಡಕೆ ಬೇಸಾಯಕ್ಕೆ ದೊಡ್ಡ ಏಟು ಬಿದ್ದಿದೆ. ಕಾಯಿ ಕಚ್ಚಿರಬೇಕಾಗಿದ್ದ ಸಿಂಗಾರಗಳು ಒಣಗಿದರೆ, ಅಡಕೆ ಮರಗಳೂ ಸೋತಿವೆ, ಹಲವಡೆ ಸತ್ತಿವೆ.
ಮಲೆನಾಡಿನ ಜಿಲ್ಲೆಯ ಸಾಂಪ್ರದಾಯಿಕ ಅಡಕೆ ಬೆಳೆಗಾರರ ಪಾಲಿಗೆ ಕಷ್ಟದ ಬಾಗಿಲು ತೆರೆದ ಕಳೆದ ಬೇಸಿಗೆ ಕಾಲದಲ್ಲಿ ಒಂದೇ ಒಂದು ಮಳೆ ಕೂಡ ಬಾರದೇ ಇರುವುದು ಈ ಇಕ್ಕಟ್ಟನ್ನು ದ್ವಿಗುಣಗೊಳಿಸಲು ಕಾರಣವಾಗಿದೆ. 23 ಸಾವಿರ ಹೆಕ್ಟೇರ್ ಅಡಕೆ ತೋಟದಲ್ಲಿ ಬೆಳೆ ಹಾನಿಯಾಗಿದೆ ಎಂದೂ ಅಂದಾಜಿಸಲಾಗಿದೆ. ಮಳೆಗಾಲದಲ್ಲಿ ಕೊನೇ ಗೌಡ ಮದ್ದು ಸಿಂಪರಣೆಗೆ ಮರ ಏರಿದಾಗ ಇನ್ನಷ್ಟು ಅಸಲಿಯತ್ತು ಗೊತ್ತಾಗಲಿದೆ.
ಈ ಬಾರಿಯ ಬೇಸಿಗೆಯ ತಾಪಮಾನ ಹಾಗೂ ನೀರಿನ ಕೊರತೆ ಕಾರಣದಿಂದ ಮಲೆನಾಡಿಗೂ ಬಿಸಿ ತಟ್ಟಿದೆ. ಕಳೆದ ವರ್ಷದ ಮುಂಗಾರಿನಲ್ಲಿ ಮಳೆ ಪ್ರಮಾಣ ಜಾಸ್ತಿಯಾಗಿತ್ತು. ಇದರಿಂದ ಅಡಕೆ ತೋಟದಲ್ಲಿ ಕೊಳೆ ವಿಪರೀತ ಬಾಧಿಸಿತ್ತು. ದೊಡ್ಡ ಪ್ರಮಾಣದಲ್ಲಿ ಬೆಳೆಯಿದ್ದರೂ ಇಳುವರಿ ಕುಂಠಿತಗೊಳ್ಳುವುದಕ್ಕೆ ಕಾರಣವಾಗಿತ್ತು. ಈಗ ಬರದ ಛಾಯೆ ಕಷ್ಟಕ್ಕೆ ಕಾರಣವಾಗಿದೆ. ಬಾಣಲೆಯಿಂದ ಬೆಂಕಿಗೆ ಈಗಲೇ ಬೆಳೆಗಾರ ಬೀಳುವಂತಾಗಿದೆ.ಬೇಸಿಗೆಯಲ್ಲಿ ಜಲ ಕೊರತೆಯಿಂದ ಅರೆಬಯಲುಸೀಮೆ ಪ್ರದೇಶದಲ್ಲಿ ನೀರುಣಿಸುವುದಕ್ಕೆ ಸಾಧ್ಯವಾಗದೇ ಸಾಕಷ್ಟು ಅಡಕೆ ತೋಟಗಳು ಒಣಗಿವೆ. ಇನ್ನು ಮಲೆನಾಡಿನ ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರ ತಾಲೂಕುಗಳ ಸಾಕಷ್ಟು ಕಡೆಗಳಲ್ಲಿ ತೋಟಕ್ಕೆ ನೀರುಣಿಸಿದ್ದರೂ ಬಿಸಿಲ ತಾಪಕ್ಕೆ ನಲುಗಿವೆ. ನಿರೀಕ್ಷೆಗೂ ಮೀರಿ ತಾಪ ಉಂಟಾಗಿದ್ದರಿಂದ ಈ ಪರಿಸ್ಥಿತಿ ಆಗಿದೆ ಎನ್ನುತ್ತಾರೆ ತೋಟಗಾರಿಕಾ ಅಧಿಕಾರಿಗಳು. ಶಿರಸಿ ತಾಲೂಕಿನಲ್ಲಿ 8455, ಸಿದ್ದಾಪುರ 4790, ಯಲ್ಲಾಪುರ 4119, ಮುಂಡಗೋಡ 1090, ಹೊನ್ನಾವರ 4371, ಕುಮಟಾ 69.90, ಭಟ್ಕಳ 63.2 0 ಹೆ. ಬೆಳೆ ಹಾನಿ ಆಗಿದೆ. ಬೋರ್ಡೋ ದ್ರಾವಣ ಸಿಂಪರಣೆಗೆ ಎಕರೆಗೆ 100 ಲೀ. ಮದ್ದೇ ಕಡಿಮೆ ಸಾಕು ಎಂಬ ಮಾತುಗಳೂ ರೈತಾಪಿ ವಲಯದಲ್ಲಿ ವ್ಯಕ್ತವಾಗಿದೆ.