ಸುರತ್ಕಲ್: ಕೆಟ್ಟುಹೋಗಿರುವ ಭಗವತಿ ಪ್ರೇಮ್ ಡ್ರೆಜ್ಜರ್ ಹಡಗನ್ನು ನವಮಂಗಳೂರು ಬಂದರು ಮಂಡಳಿಯು ಟಗ್ ಮೂಲಕ ಎಳೆದು ತಂದು ಗುಡ್ಡೆಕೊಪ್ಲ ಸಮುದ್ರತೀರದಲ್ಲಿ ನಿಲ್ಲಿಸಿದ್ದು, ಈ ಬಗ್ಗೆ ಸ್ಪಷ್ಟನೆ ಕೋರಿ ಬಂದರು ಹಾಗೂ ಮೀನುಗಾರಿಕಾ ಇಲಾಖೆ ನೋಟಿಸ್ ಜಾರಿ ಮಾಡಿದೆ.
ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಸೋಮವಾರ ಸ್ಥಳ ಪರಿಶೀಲನೆ ನಡೆಸಿದ್ದು, ಈ ಸಂದರ್ಭ ಸ್ಥಳೀಯರು ಮೀನುಗಾರಿಕೆಗೆ ತಡೆಯಾಗಿರುವ ಡ್ರೆಜ್ಜರನ್ನು ತತ್‌ಕ್ಷಣ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಇದು ಮೀನಿಗೆ ಬೇಕಾದ ಆಹಾರ(ಪಲ್ಕೆ)ಸಿಗುವ ಸ್ಥಳವಾಗಿದೆ ಹಾಗೂ ಸಂತಾನೋತ್ಪತ್ತಿಗಾಗಿ ಮೀನುಗಳು ಬರುವ ಪ್ರಮುಖ ಸ್ಥಳವಾಗಿದೆ. ನಾವು ಈ ಭಾಗದಲ್ಲಿ ಮೀನು ಹಿಡಿಯುತ್ತಿದ್ದೆವು. ಇದೀಗ ಹಡಗಿನಿಂದ ತೊಂದರೆಯಾಗಿದೆ ಎಂದು ಸ್ಥಳೀಯ ಮುಖಂಡರು ದೂರಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿ ಕಾರಿ ಉತ್ತಪ್ಪ, ಮೀನುಗಾರಿಕಾ ಸಹಾಯಕ ನಿರ್ದೇಶಕ ಮಹೇಶ್ ಕುಮಾರ್ ಅವರಿಗೆ ಮೀನುಗಾರ ಮುಖಂಡರಾದ ಶರತ್ ಗುಡ್ಡೆಕೊಪ್ಲ, ಶ್ರೀಕಾಂತ್, ಗಿರಿಧರ್ ಕೋಟ್ಯಾನ್, ಕೇಶವ ಕುಂದರ್, ನರೇಶ್, ಸಚ್ಚೇಂದ್ರ ಗುರಿಕಾರ, ಶಿವರಾಂ ಸುರತ್ಕಲ್ ಮನವಿ ನೀಡಿದರು.
ಡ್ರೆಜ್ಜರ್‌ನ್ನು ಎನ್‌ಎಂಪಿಟಿ ಯಾಕೆ ಇಲ್ಲಿಗೆ ತಂದಿಟ್ಟಿದೆ ಎಂಬ ಬಗ್ಗೆ ಮಾಹಿತಿ ಕೋರಿ ನೋಟಿಸ್ ಜಾರಿ ಮಾಡಲಾಗಿದೆ. ಈಗಾಗಲೇ ಡೀಸೆಲ್, ಆಯಿಲ್ ಖಾಲಿ ಮಾಡಲಾಗಿದ್ದು ಸೋರಿಕೆಯ ಭೀತಿ ಇಲ್ಲ. ಆದರೆ ಇದೀಗ ಮೀನುಗಾರರಿಗೆ ಇಲ್ಲಿ ಸಮಸ್ಯೆಯಾಗುತ್ತಿದೆ. ಮೀನು ಹಿಡಿಯಲು, ಮೀನಿನ ಸಂತಾನೋತ್ಪತ್ತಿಗೆ ತೊಂದರೆಯಾಗುತ್ತಿದೆ ಎಂಬ ದೂರು ಬಂದಿದೆ.
– ಮಹೇಶ್ ಕುಮಾರ್, ಸಹಾಯಕ ನಿರ್ದೇಶಕ, ಮೀನುಗಾರಿಕಾ ಇಲಾಖೆ