Advertisement

ಕನಸಿನ ಲೋಕದ ಮಾಯಾವಿ

03:26 PM Jul 20, 2021 | Team Udayavani |

ಅದಾಗಲೇ ಚಿಟಪಟ ಮಳೆಹನಿಗಳು ಧರೆಯನ್ನು ಚುಂಬಿಸುತ್ತಿದ್ದವು. ವಾತಾವರಣವು ಹಚ್ಚಹಸುರಾಗಿ ಭೂಮಿತಾಯಿ ಹಸುರು ಸೀರೆಯನ್ನುಟ್ಟಂತೆ  ಗೋಚರಿಸುತ್ತಿತ್ತು. ತಮ್ಮ ಗೂಡಿಗೆ ಸೇರಲು ಆತುರದಿಂದ ಬಾನಾಡಿಗಳು ಚಿಲಿಪಿಲಿಗುಟ್ಟುತ್ತಿದ್ದವು. ಉದ್ಯಾನವನದಲ್ಲಿನ ಹೂಗಳೆಲ್ಲ ನನ್ನನ್ನು ಹೂನಗೆ ಬೀರಿ ಸ್ವಾಗತಿಸುತ್ತಿರುವಂತೆ ಭಾಸವಾಯಿತು. ರವಿಯು ಕಾರ್ಮೋಡಗಳ ನಡುವಿನಿಂದ ಇಣುಕಿ ತನ್ನ ಕಿರಣಗಳನ್ನು ಭೂಮಿಗೆ ಬೀರಲು ಕಾತರಿಸುತ್ತಿದ್ದನು. ಅದೇನೋ ತಿಳಿಯದು ಆತ ನನ್ನನ್ನೇ ಕದ್ದು ನೋಡುತ್ತಿರುವನೇನೋ ಎಂದು ಅತಿಯಾಗಿ ಕಲ್ಪಿಸಿಕೊಳ್ಳುತ್ತಿದ್ದೆ.

Advertisement

ಪ್ರಕೃತಿಯ ಇಂತಹ ಪ್ರಶಾಂತವಾದ ವಾತಾವರಣದಲ್ಲಿ ನಾನಿರಲು ಮನವೇಕೋ ಹರುಷದಿ ಸಂಭ್ರಮಿಸುತ್ತಿತ್ತು. ನೀರಾಗಲೇನೆ ನಾ ಮೈಯ ಮೇಲೆ ಜಾರಿ ಹೋಗಲು..ಎಂಬ ಹಾಡನ್ನೇ ಮನವು ಗುನುಗುತ್ತಿತ್ತು. ತಣ್ಣನೆ ಗಾಳಿ ಮೈಸೋಕುತ್ತಿರಲು ಮನದಲ್ಲೇನೋ ತಿಳಿಯದ ಉತ್ಸಾಹ. ಅದೇ ಕ್ಷಣದಲ್ಲಿ ಉದ್ಯಾನದ ದ್ವಾರದ ಕಡೆಯಿಂದ ನೇರಳೆ ಬಣ್ಣದ ಶರ್ಟ್‌ ಮತ್ತು ಜರಿ ಪಂಚೆಯನ್ನುಟ್ಟು ಒಬ್ಬ ತರುಣ ಬರುತ್ತಿದ್ದ. ನೇರಳೆ ಬಣ್ಣ ನನ್ನ ನೆಚ್ಚಿನ ಬಣ್ಣವಾದ್ದರಿಂದ ಆ ಕಡೆ ಗಮನ ಹರಿಯಿತು. ಆತನ ಮುಖ ಸ್ಪಷ್ಟವಾಗಿರಲಿಲ್ಲ. ಒಂದು ಕ್ಷಣ ಹೃದಯದಲ್ಲಿ ಮಿಂಚಿನ ಸಂಚಾರವಾದಂತೆ ಭಾಸವಾಯಿತು.  ಕಳ್ಳ ಕಣ್ಣುಗಳು ಬೇರೆ ಕಡೆ ದೃಷ್ಟಿ ಹಾಯಿಸಲು ಮರೆತವು. ಸಿನೆಮಾ, ಧಾರಾವಾಹಿಗಳಲ್ಲಿ ನೋಡುತ್ತಿದ್ದ ಲವ್‌ ಎಟ್‌ ಫಸ್ಟ್‌ ಸೈಟ್‌ ದೃಶ್ಯಗಳು ನೆನಪಾದವು. ಆಶ್ಚರ್ಯವೇನೆಂದರೆ ಆತ ನನ್ನನ್ನೇ ನೋಡುತ್ತಾ ಮುಗುಳುನಗೆ ಬೀರುತ್ತಾ, ನನ್ನ ಸನಿಹ ಬಂದು ಕುಳಿತುಕೊಂಡ. ನನ್ನ ಹೃದಯ ಬಡಿತ ಕಿವಿಗಳಿಗೆ ಕೇಳುವಷ್ಟು ಸದ್ದು ಮಾಡುತ್ತಿತ್ತು. ಕೈಗಳು ನಡುಗಲಾರಂಭಿಸಿದವು, ಏನಾಗುತ್ತಿದೆ ಎಂಬ ಪರಿವೇ ಇಲ್ಲದಂತೆ ಸ್ತಬ್ಧಳಾಗಿದ್ದೆ.

ಅವನು ನನ್ನ ಬಳಿ ಕುಳಿತಿದ್ದರೂ ಅವನ ಮುಖ ಮಾತ್ರ ಸ್ಪಷ್ಟವಾಗಿರಲಿಲ್ಲ. ಮಂಜು ಮಂಜಾಗಿತ್ತು. ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡಿದಾಗ ಜೋರಾದ ಸದ್ದೊಂದು ಕೇಳಿಬಂತು. ಕಿವಿಗಳಿಗೆ ಬಹಳ ಕರ್ಕಶವಾಗಿತ್ತು. ಏನೆಂದು ನೋಡಿದಾಗ ಮೊಬೈಲ್‌ ರಿಂಗಣಿಸುತ್ತಿತ್ತು.  ನನ್ನ ಪಕ್ಕ ಯಾವ ಯುವಕನೂ  ಇರಲಿಲ್ಲ ಬದಲಾಗಿ ಒಂದು ತಲೆದಿಂಬಿತ್ತು.   ನಾಲ್ಕು ಗೋಡೆಗಳ ಮಧ್ಯೆ ನಾನಿದ್ದೆ.

ಹೌದು.. ನಾ ಕಂಡಿದ್ದೆಲ್ಲ ಕನಸು, ನಿಜವಲ್ಲ!! ಆ ಕನಸಿನ ಲೋಕದ ಮಾಯಾವಿ ನನ್ನ ಮುಗುಳ್ನಗೆಗೆ ಕಾರಣನಾಗಿದ್ದ. ಕನಸಿನ ಲೋಕದ ಮಾಯಾವಿ ನೀ ಕಾಡುತಿರುವೆ ನನ್ನ ಮೀತಿ ಮೀರಿ..

ಎಂದು ಗೀಚಿಯೇ ಬಿಟ್ಟೆ. ಕಂಡ ಕನಸಲ್ಲೂ ಸಿಗುವ ಆನಂದವ ಅನುಭವಿಸಿಬಿಟ್ಟೆ.

Advertisement

 

ಹರ್ಷಿತಾ ನಟ್ಟಿ

ವಿವೇಕಾನಂದ ಎಂಜಿನಿಯರಿಂಗ್‌, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next