Advertisement
ಪ್ರಕೃತಿಯ ಇಂತಹ ಪ್ರಶಾಂತವಾದ ವಾತಾವರಣದಲ್ಲಿ ನಾನಿರಲು ಮನವೇಕೋ ಹರುಷದಿ ಸಂಭ್ರಮಿಸುತ್ತಿತ್ತು. ನೀರಾಗಲೇನೆ ನಾ ಮೈಯ ಮೇಲೆ ಜಾರಿ ಹೋಗಲು..ಎಂಬ ಹಾಡನ್ನೇ ಮನವು ಗುನುಗುತ್ತಿತ್ತು. ತಣ್ಣನೆ ಗಾಳಿ ಮೈಸೋಕುತ್ತಿರಲು ಮನದಲ್ಲೇನೋ ತಿಳಿಯದ ಉತ್ಸಾಹ. ಅದೇ ಕ್ಷಣದಲ್ಲಿ ಉದ್ಯಾನದ ದ್ವಾರದ ಕಡೆಯಿಂದ ನೇರಳೆ ಬಣ್ಣದ ಶರ್ಟ್ ಮತ್ತು ಜರಿ ಪಂಚೆಯನ್ನುಟ್ಟು ಒಬ್ಬ ತರುಣ ಬರುತ್ತಿದ್ದ. ನೇರಳೆ ಬಣ್ಣ ನನ್ನ ನೆಚ್ಚಿನ ಬಣ್ಣವಾದ್ದರಿಂದ ಆ ಕಡೆ ಗಮನ ಹರಿಯಿತು. ಆತನ ಮುಖ ಸ್ಪಷ್ಟವಾಗಿರಲಿಲ್ಲ. ಒಂದು ಕ್ಷಣ ಹೃದಯದಲ್ಲಿ ಮಿಂಚಿನ ಸಂಚಾರವಾದಂತೆ ಭಾಸವಾಯಿತು. ಕಳ್ಳ ಕಣ್ಣುಗಳು ಬೇರೆ ಕಡೆ ದೃಷ್ಟಿ ಹಾಯಿಸಲು ಮರೆತವು. ಸಿನೆಮಾ, ಧಾರಾವಾಹಿಗಳಲ್ಲಿ ನೋಡುತ್ತಿದ್ದ ಲವ್ ಎಟ್ ಫಸ್ಟ್ ಸೈಟ್ ದೃಶ್ಯಗಳು ನೆನಪಾದವು. ಆಶ್ಚರ್ಯವೇನೆಂದರೆ ಆತ ನನ್ನನ್ನೇ ನೋಡುತ್ತಾ ಮುಗುಳುನಗೆ ಬೀರುತ್ತಾ, ನನ್ನ ಸನಿಹ ಬಂದು ಕುಳಿತುಕೊಂಡ. ನನ್ನ ಹೃದಯ ಬಡಿತ ಕಿವಿಗಳಿಗೆ ಕೇಳುವಷ್ಟು ಸದ್ದು ಮಾಡುತ್ತಿತ್ತು. ಕೈಗಳು ನಡುಗಲಾರಂಭಿಸಿದವು, ಏನಾಗುತ್ತಿದೆ ಎಂಬ ಪರಿವೇ ಇಲ್ಲದಂತೆ ಸ್ತಬ್ಧಳಾಗಿದ್ದೆ.
Related Articles
Advertisement
ಹರ್ಷಿತಾ ನಟ್ಟಿ
ವಿವೇಕಾನಂದ ಎಂಜಿನಿಯರಿಂಗ್, ಪುತ್ತೂರು