Advertisement
ಕಣ್ಣಲ್ಲೇ ಉಳಿದ ಹನಿಯೇ, ನನ್ನಂಥ ಮುಳ್ಳಿಗೆ ಮರುಳಾದ ಹೂವಂಥ ಹುಡುಗನೇ, ನಾನಿಲ್ಲಿ ಕ್ಷೇಮ ಕಣೋ. ಹೇಗಿದ್ದಿಯಾ ನೀನು? ಇನ್ನೂ ನನ್ನ ನೆನಪಲ್ಲೇ ಜೀವ ಸವೆಸುತ್ತಿದ್ದೀಯೇನೋ? ನಂಗೆಲ್ಲಾ ಗೊತ್ತುಂಟೋ. ಸದಾ ನನ್ನ ಹೆಸರನ್ನೇ ಕನವರಿಸುವ ನೀನು, ನಿನ್ನ ನಿಷ್ಕಲ್ಮಷ ಪ್ರೀತಿ, ನಿನ್ನ ಗಾಯಗೊಂಡ ಹೃದಯ, ಛಿದ್ರಗೊಂಡ ಬದುಕು, ಚೂರು ಚೂರಾದ ಕನಸುಗಳು, ಅದೆಲ್ಲದರ ಸಮೇತ ನರಳುತ್ತಿದ್ದೀಯ. ಅದಕ್ಕೆಲ್ಲಾ ಕಾರಣಳಾದವಳು ನಾನು.
Related Articles
Advertisement
ಅವತ್ತೂಂದು ದಿನ ಅಪ್ಪ ತುಂಬಾ ಖುಷಿಯಲ್ಲಿದ್ದ. ನಿನ್ನ ನನ್ನ ಪ್ರೀತಿಯ ವಿಷಯವನ್ನ ಅಪ್ಪನಿಗೆ ಹೇಳ್ಳೋಣ ಅಂದುಕೊಳ್ಳುತ್ತಲೇ ಮನೆಗೆ ಬಂದೆ. ಅಪ್ಪ ಬಾಗಿಲಲ್ಲೇ ಸಿಕ್ಕಿ ಕಣ್ತುಂಬಿಕೊಂಡು ನನ್ನನ್ನ ಅಪ್ಪಿಕೊಂಡ. ಅದೆಂಥಾ ಅಪ್ಪುಗೆ ಗೊತ್ತಾ ಹುಡುಗ?! ಯಾವುದೋ ತಂತು ಕಡಿದುಹೋಗುವುದು ಖಚಿತವಾದಂಥ ಅಪ್ಪುಗೆ. ಆದರೂ ಅಪ್ಪನ ಕಣ್ಣಲ್ಲಿನ ಹೊಳಪು ಯಾವುದೋ ನೆಮ್ಮದಿಯ ಸುದ್ದಿಯನ್ನು ಬಿತ್ತ ರಿಸುತ್ತಿತ್ತು.
ಮಗಳೇ, ಅನ್ನುತ್ತಲೇ ಸಿಹಿಯನ್ನು ಬಾಯಿಗಿಟ್ಟ. ನಿನ್ನ ಬದುಕು ಬಂಗಾರವಾಯ್ತು. ನನ್ನ ಕನಸು ಈಡೇರಿತು ಅನ್ನುತ್ತಲೇ ಮದುವೆಯ ವಿಚಾರ ಹೇಳಿದ. ನನ್ನ ಕಂಗಳಲ್ಲಿ ನೀರಿತ್ತು. ನೀನು ನೆನಪಾದೆ. ಆಗ ನಾನು ಏನು ಮಾಡಬೇಕಿತ್ತು? ನೀನೇ ಹೇಳು… ಅಪ್ಪ-ಅಮ್ಮನ ನಂಬಿಕೆ ನನ್ನ ಬಾಯಿ ಕಟ್ಟಿಹಾಕಿತು. ಅವರ ಪ್ರೀತಿ ನಿನ್ನಿಂದ ದೂರವಾಗುವಂತೆ ಮಾಡಿತು. ಈಗ ಹೇಳು, ನನ್ನದು ಕ್ಷಮಿಸಲಾರದ ತಪ್ಪಾ?
ಮನ್ನಿಸಲಾರದ ಮೋಸವಾ? ಕಡೆ ತನಕ ಕಾಡುವ ವಂಚನೆಯಾ? ಬಿಡುಗಡೆಯೇ ಇಲ್ಲದ ನೋವಾ? ಪರಿಸ್ಥಿತಿ ನನ್ನ ನಿನ್ನ ನಡುವೆ ಖಳನಾಯಕನಂತೆ ವರ್ತಿಸಿಬಿಟ್ಟಿತು. ಇವೆಲ್ಲವನ್ನೂ ನಿಂಗೆ ಹೇಗೆ ಹೇಳಲಿ. ನೀನು ಒಮ್ಮೆಯಾದರೂ, ಮೋಸ ಮಾಡಿದೆ ಅನ್ನುವಂತೆ ನನ್ನತ್ತ ನೋಡಿದ್ದರೆ, ಇವೆಲ್ಲವನ್ನು ನಿಂಗೆ ಹೇಳಿ ಹಗುರಾಗುತ್ತಿದ್ದೆ. ವಿಧಿ ಅದಕ್ಕೂ ಅವಕಾಶ ಕೊಡಲಿಲ್ಲ ನನಗೆ.
ನಿಂಗೆ ಇದೆಲ್ಲ ಯಾವಾಗ ಅರ್ಥವಾಗುತ್ತೋ ಗೊತ್ತಿಲ್ಲ? ನಿಂಗೂ ಒಂದು ಬದುಕಿದೆ. ನಿಂಗೂ ಅಪ್ಪ ಅಮ್ಮ ಇದ್ದಾರೆ. ಅವರ ಕಣ್ಣ ಮುಂದೆ ನಿನ್ನ ಬದುಕು ಬಂಗಾರವಾಗಬೇಕೇ ಹೊರತು ಮಣ್ಣಾಗಬಾರದು. ಹೆತ್ತವರ ಕಣ್ಣಲ್ಲಿ ಖುಷಿ ಕಾಣುವುದಕ್ಕಿಂತ ಮತ್ತೂಂದು ಖುಷಿಯಿದೆಯಾ ಹೇಳು? ನಾಳೆ ನಿಂಗೆ ಹೊಸ ಮುಂಜಾವು ಕಣ್ತೆರೆಯಲಿ. ಬದುಕಿಗೊಂದು ಚಂದದ ತಿರುವು ಸಿಗಲಿ. ಹೊಸ ಕನಸುಗಳು ಕೈ ಹಿಡಿದು ನಡೆಸಲಿ. ಪ್ರೀತಿಯಿಂದ
ಅಮ್ಮು ಮಲ್ಲಿಗೆಹಳ್ಳಿ