Advertisement

ಕನಸುಗಳಿಗೆ  ರೆಕ್ಕೆ ಕಟ್ಟಿ ಹಾರುವ ಸಮಯವಿದು…

03:51 PM Jul 25, 2021 | Team Udayavani |

ಮನುಷ್ಯ ಜೀವನದಲ್ಲಿ ಅನೇಕ ಕನಸುಗಳನ್ನು ಕಾಣುತ್ತಾನೆ. ಆದರೆ ಅವೆಲ್ಲವನ್ನೂ ನನಸು ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗೆ ಕೆಲವೊಂದು ಕನಸುಗಳು ಮಾತ್ರ ನೆನಪಿನಲ್ಲಿ ಸದಾ ಉಳಿಯುವಂತ ಕನಸಾಗಿರುತ್ತವೆ. ಅಂತಹ ಅನೇಕ ಕನಸುಗಳು ಬಾಲ್ಯದಿಂದ ಪ್ರಾರಂಭವಾಗುತ್ತವೆ. ಬಾಲ್ಯದ ಕನಸುಗಳು ಕೆಲವೊಮ್ಮೆ ಹಾಸ್ಯಾಸ್ಪದ ಎನಿಸಿದರೂ ಮನಸ್ಸಿಗೆ ಖುಷಿ ನೀಡುತ್ತವೆ.

Advertisement

ನಾನು 5ನೇ ತರಗತಿ ಓದುತ್ತಿದ್ದ ಸಮಯವದು. ಆ ಕಾಲದಲ್ಲಿ ಚಲನಚಿತ್ರಗಳನ್ನು ನೋಡಿ ಕನಸುಗಳನ್ನು ಕಾಣುತ್ತಿದ್ದೆ. ಒಂದು ದಿನ ಬಿಳಿ ಹೆಂಡ್ತಿ ಎನ್ನುವ ಚಿತ್ರವನ್ನು ನೋಡಿ ನನಗೂ ಕೂಡ ಬಿಳಿ ಹೆಂಡ್ತಿ ಸಿಗಬೇಕು ಎನ್ನುವ ಆಸೆ ನನ್ನಲ್ಲಿತ್ತು. ಇಂತಹ ಅನೇಕ ಹಾಸ್ಯಾಸ್ಪದ ಬಯಕೆಗಳನ್ನು ನಾವು ನೆನಪಿಸಿಕೊಂಡಾಗ ಒಮ್ಮೆಲೇ ನಗು ಬರುತ್ತದೆ. ಮುಂದೆ ಬೆಳೆಯುತ್ತ ಬೆಳೆಯುತ್ತ ಗುರಿಗಳನ್ನು ಕನಸುಗಳಾಗಿಟ್ಟುಕೊಂಡಿರುತ್ತೇವೆ. ಒಂದೊಮ್ಮೆ ಪ್ರಾಥಮಿಕ ಶಿಕ್ಷಣ ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ಶಿಕ್ಷಕರು ನಿಮ್ಮ ಜೀವನದಲ್ಲಿ ಏನಾಗಬೇಕು ಎನ್ನುವ ಗುರಿಯನ್ನು ಹೊಂದಿದ್ದೀರಿ ಎಂದು ಕೇಳಿದಾಗ ತತ್‌ಕ್ಷಣ ಯಾವುದಾದರೂ ಒಂದು ಗುರಿಯನ್ನು ಹೇಳಿ ಬಿಡುತ್ತಿದ್ದೆವು. ಒಮ್ಮೆ ಡಾಕ್ಟರ್‌, ಒಮ್ಮೆ ಪೊಲೀಸ್‌, ಇನ್ನೊಮ್ಮೆ ಲಾಯರ್‌ನಂತಹ ಉತ್ತರಗಳನ್ನು ನಾನು ಹೇಳಿದ್ದೇನೆ.

ಕ್ರಮೇಣ ನಮ್ಮ ಮನಸ್ಸು ವಾಸ್ತವವನ್ನು ಅರ್ಥ ಮಾಡಿಕೊಳ್ಳಲು ಆರಂಭಿಸಿದಾಗ ನಮ್ಮ ನಿಲುವುಗಳು ಕನಸುಗಳು ಬೇರೆಯಾಗಿ ಬಿಡುತ್ತವೆ. 10ನೇ ತರಗತಿಯವರೆಗೆ ಯಾವುದೇ ನಿರ್ದಿಷ್ಟ ಗುರಿಯಿಟ್ಟುಕೊಳ್ಳದ ನನಗೆ ಪಿಯುಸಿ ಆರಂಭದಲ್ಲಿ ಒಂದು ಕಂಪೆನಿ ಸ್ವಂತವಾಗಿ ಮಾಡಬೇಕು ಎನ್ನುವ ಗುರಿಯಿಟ್ಟುಕೊಂಡು ವಾಣಿಜ್ಯ ವಿಷಯವನ್ನು ತೆಗೆದುಕೊಂಡೆ. ಅನಂತರ ಪಿಯುಸಿ ಕೊನೆಯ ಹಂತಕ್ಕೆ ಬರುವಾಗ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಬೇಕು. ನಾನು ಉತ್ತಮ ನಿರೂಪಕನಾಗಬೇಕು ಎನ್ನುವ ಕನಸು ಹುಟ್ಟಿಕೊಂಡಿತು. ಅನಂತರ ಪತ್ರಿಕೋದ್ಯಮದಲ್ಲಿ ಮುನ್ನಡೆಯಲು ಪ್ರಾರಂಭಿಸಿದೆ. ಅನಂತರ ಕೆಲ ದಿನಗಳಲ್ಲಿ ಚಿತ್ರನಟನಾಗಬೇಕು ಎನ್ನುವ ಆಸೆಯೂ ಹುಟ್ಟಿಕೊಂಡಿತು. ಆದರೆ ಈ ಆಸೆ ನನ್ನ ಪ್ರಯತ್ನಕ್ಕೂ ಮೀರಿದ್ದಾಗಿದೆ ಎಂದು ಅರಿತುಕೊಂಡು ಸುಮ್ಮನಾದೆ. ಕೆಲವೊಮ್ಮೆ ಅನಿವಾರ್ಯ ಸಮಯ, ನೋವು, ಹತಾಶೆಗಳು ಜೀವನದ ಅನೇಕ ಕನಸುಗಳನ್ನು ನುಚ್ಚುನೂರಾಗಿಸುತ್ತವೆ. ಆ ಕನಸುಗಳಿಗೆ ರೆಕ್ಕೆ ಕಟ್ಟಿ ಹಾರುವ ಸಮಯಗಳು ನಮಗೆ ಸಿಗಬಹುದು ಎನ್ನುವ ನಿರೀಕ್ಷೆ ಜೀವನಕ್ಕೆ ಅನೇಕ ಮಾರ್ಗಗಳನ್ನು ತೋರಿಸಬಲ್ಲುದು.

ಆದರೆ, ಇದೀಗ ನನ್ನಲ್ಲಿರುವ ಕನಸು, ಆಸೆಗಳನ್ನು ಹೆಚ್ಚಾಗಿ ಕಾಣುವುದನ್ನು ನಿಲ್ಲಿಸಿದ್ದೇನೆ. ಯಾಕೆಂದರೆ ಕೊರೊನಾದಂತಹ ಮಹಾಮಾರಿಯಿಂದ ಜನಜೀವನ ಹದಗೆಟ್ಟಿರುವ ಕಾರಣ ಈ ಸಮಯದಲ್ಲಿ ಕಂಡ ಕನಸುಗಳೆಲ್ಲವೂ ಆಕಾಶಕ್ಕೆ ಏಣಿ ಇಟ್ಟಂತೆ ಎನಿಸುತ್ತವೆ. ಹಾಗಾಗಿ ಕೊರೊನಾ ಮುಗಿದಿದೆ. ಮುಂದಿನ ದಿನಗಳಲ್ಲಿ ಕನಸುಗಳನ್ನು ಕಾಣುವುದು ಹಾಗೂ ಅದನ್ನು ನನಸಾಗಿಸುವ ಯೋಚನೆ ನನ್ನಲ್ಲಿದೆ.

 

Advertisement

ಭರತ್‌

ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ,

ತುಮಕೂರು

Advertisement

Udayavani is now on Telegram. Click here to join our channel and stay updated with the latest news.

Next