Advertisement
ಇವತ್ತು ಪ್ರತೀ ದಿನಕ್ಕಿಂತಲೂ ಏನೋ ಬದಲಾದ ಭಾವ! ನನ್ನ ಕಂದ ಇದುವರೆಗೂ “ಅಮ್ಮ’ ಎಂದಿಲ್ಲ. ಆದರೆ ಇಂದು, ನನ್ನನ್ನು ಹುಡುಕುತ್ತಾ, “ಅಮ್ಮ’ ಎನ್ನುತ್ತಾ ಓಡೋಡಿ ಬರುತ್ತಿದ್ದಾನೆ. ಅದನ್ನು ಕೇಳುತ್ತಿದ್ದರೆ ನನಗೆ ಎಲ್ಲಿಲ್ಲದ ಖುಷಿ. ಇದು ಕನಸೋ ಅಥವಾ ನನಸೋ ತಿಳಿಯಲಿಲ್ಲ. ಇನ್ನೂ ಬೆಳಕು ಹರಿಯಬೇಕಿತ್ತು. ಇದೇ ನಿಜವಾಗಿರಲಿ ಎಂದು ಮನಸ್ಸು ಹಂಬಲಿಸಿತು. ಅಂದು ಬೆಳಗ್ಗೆ ಎಂದಿಗಿಂತ ಬೇಗ ಎಚ್ಚರವಾಯಿತು. ನನ್ನ ಕಂದನ ಬರವನ್ನೇ ಎದುರು ನೋಡುತ್ತಿದ್ದೆ. ಅವನು ಬಂದು, ಎಂದಿನಂತೆ ನಕ್ಕ, ಮಾತಾಡಲಿಲ್ಲ. ಅಮ್ಮ ಎನ್ನಲಿಲ್ಲ. ಒಂದೆಡೆ ಖುಷಿಯಾದರೂ ಮನಸ್ಸಿನಲ್ಲಿ ಕನಸು ನನಸಾಗಲಿಲ್ಲ ಎಂಬ ಭಾವ. ಅರಳಿ ನಿಂತ ಹೂವು ಬಾಡಿದ ಹಾಗೆ!
Related Articles
Advertisement
ಹೀಗೆ ಆ ಅಮ್ಮ ತನ್ನ ಕೈಲಾದವೆಲ್ಲವನ್ನೂ ಮಾಡುತ್ತಿದ್ದಳು. ಕೆಲವೊಮ್ಮೆ ವಾಕ್ ಚಿಕಿತ್ಸೆಯಲ್ಲಿ ಸಾಂಪ್ರದಾಯಿಕ ಮಾತಿನ ವಿಧಾನಗಳಲ್ಲಿ ಮಗು ಮಾತನಾಡಲು ಕಲಿಯುತ್ತಿಲ್ಲ ಅಥವಾ ಕಲಿಯಲು ನಿಧಾನವಾಗುತ್ತಿದೆ ಎನಿಸಿದರೆ “ಎಎಸಿ’ ಎಂಬ ಸಂವಹನ ವ್ಯವಸ್ಥೆಯನ್ನು ಬಳಸುತ್ತೇವೆ. ಇದು ನಾವು ನೀವು ಬಳಸುವ ಮೊಬೈಲು ಅಥವಾ ಐಪಾಡ್ ಇದ್ದ ಹಾಗೆ. ಆದರೆ ಇದು ಕೇವಲ ಮಾತನಾಡಲು ಬಳಸುವ ಉಪಕರಣ. ಮೊಬೈಲಿನಲ್ಲಿ ಹೇಗೆ ಬೇರೆ ಬೇರೆ ಆ್ಯಪ್ಲಿಕೇಶನ್‌ಗಳಿವೆಯೋ ಹಾಗೆ ಇದರಲ್ಲೂ ಇದೆ. ಇತ್ತೀಚಿನ ಸಂಶೋಧನೆಯ ಪ್ರಕಾರ, ಇಂಥ ಉಪಕರಣವು ಮಾತನಾಡಲು ಕಲಿಯುತ್ತಿರುವ ಮಕ್ಕಳಿಗೆ ವಿಶೇಷವಾಗಿ ಆಟಿಸಮ್ ಮಕ್ಕಳಿಗೆ ತುಂಬಾ ಉಪಯುಕ್ತ. ಈ ಕಾರಣದಿಂದ ಇದರ ಬಳಕೆಯೂ ಹೆಚ್ಚುತ್ತಿದೆ.
ನಾವು ಅಸಹಾಯಕರಾದಾಗ ಒಂದು ಹುಲ್ಲುಕಡ್ಡಿ ಸಿಕ್ಕಿದರೂ ಅದನ್ನು ಏರಿಕೊಂಡು ನಮ್ಮ ಗಮ್ಯವನ್ನು ತಲುಪುವ ಎಂದೆನಿಸುವುದುಂಟು. ಯಾರೇ ಏನೇ ಸಲಹೆ ಹೇಳಿದರೂ ಅದೊಮ್ಮೆ ಮಾಡಿ ನೋಡುವ ಎಂದುಕೊಂಡು ಕ್ರಿಯಾಶೀಲವಾಗುತ್ತೇವೆ. ಈ ಅಮ್ಮಳಿಗೂ ಅದೇ ಆದದ್ದು. ತನ್ನ ಗೆಳೆಯರಲ್ಲಿ ಯಾರೋ ಒಬ್ಬರು, ತಂತ್ರಜ್ಞಾನವನ್ನು ಬಳಸಿ ಮಗುವಿಗೆ ಸಂವಹನ ಹೇಳಿಕೊಡಬಹುದು ಎಂದು ತಿಳಿಸಿದ್ದೇ ತಡ, ನನ್ನ ಬಳಿ ಬಂದು ನಿಂತಳು.
ಅಂದು ಬೆಳಗ್ಗೆ ಅವನಿಗೆ ಹೊಸ ಐಪಾಡ್ ಬಳಸಲು ಹೇಳಿಕೊಡುತ್ತಿದ್ದೆ. ಹುಡುಗ ಅದೆಷ್ಟು ಚುರುಕು ಎಂದರೆ, ಹೇಳಿಕೊಟ್ಟ ಹತ್ತೇ ನಿಮಿಷಕ್ಕೆ, ಕೆಲವು ಪದಗಳೆಲ್ಲಿದೆ. ಅದರ ಅರ್ಥವೇನು ಎಂದು ತಿಳಿದು ಬಿಟ್ಟ. ಸಾಮಾನ್ಯವಾಗಿ ಇದನ್ನು ಕಲಿಯಲು ಹಲವು ದಿನಗಳಾದರೂ ಬೇಕು. ನಮಗೆಲ್ಲರಿಗೂ ಹೇಳಿಕೊಡೋ ಹುಮ್ಮಸ್ಸು ದುಪ್ಪಟ್ಟಾಯಿತು. ಆಟಿಸಮ್‌ನ ತೀವ್ರತೆಯ ಮೇಲೆ ಮುಂದೆ ಈ ಮಗು ಇದರಿಂದ ಎಷ್ಟು ಮಾತನ್ನು ಕಲಿಯುತ್ತದೆ ಎನ್ನುವುದು ತಿಳಿಯಬಲ್ಲದು. ಕೆಲವರು ಕೆಲವು ವರ್ಷ ಮಾತ್ರ ಬಳಸಬೇಕು. ಆ ಬಳಿಕ ಎಲ್ಲರಂತೆ ಅವರು ಮಾತನಾಡಬಲ್ಲರು. ಇನ್ನು ಕೆಲವರಿಗೆ ಅದು ಅವರ ಬದುಕಿನ ಭಾಗವಾಗಿಯೇ ಉಳಿದು ಬಿಡುವುದುಂಟು. ಹಾಗಾಗಿ ಹೇಳಿ ಕೊಡುವುದರಲ್ಲಿ ತಂದೆ-ತಾಯಿಯ ಪಾತ್ರ ಬಹು ದೊಡ್ಡದು. ಯಾಕೆಂದರೆ, ಈ ಸಾಧನವು ನಮ್ಮ ಭಾಷೆಯಲ್ಲಿರುವ ಪದಗಳನ್ನೆಲ್ಲ ಒಟ್ಟಿಗೆ ನಮ್ಮ ಮುಂದಿಡುತ್ತದೆ. ಅದನ್ನು ಹೇಗೆ ಬಳಸಬೇಕು, ಒಂದೊಂದು ಪದದ ಅರ್ಥವೇನು ಎಂಬುದನ್ನು ನಾವೇ ಹೇಳಿಕೊಡಬೇಕು. ಹೀಗೆ ಹೇಳಿಕೊಡುವಾಗ, ಮಗು ಇದ್ದಲ್ಲೆಲ್ಲ, ಹೋದಲ್ಲೆಲ್ಲ ಈ ಸಾಧನವನ್ನು ಕೊಂಡೊಯ್ಯಬೇಕು. ಯಾವಾಗ ಮಗುವಿಗೆ “ಇದು ನನ್ನದು, ನನ್ನ ಧ್ವನಿಯಿದು’ ಎಂದು ಅರ್ಥವಾಗುತ್ತದೋ ಅಂದು ನಾವು ಶೇ. 50 ರಷ್ಟು ಗೆದ್ದ ಹಾಗೆ.ಯಾಕೆಂದರೆ ನನ್ನದು ಅನ್ನೋ ನಂಬಿಕೆಯೇ ಬದಲಾವಣೆಯ ಮೊದಲ ಮೆಟ್ಟಿಲು, ಮಹತ್ವವಾದುದೂ ಸಹ. ಇದಾದ ಅನಂತರ ಮಗು ಪ್ರತಿಯೊಂದು ಪದವನ್ನೂ ಬಳಸಲು ಮುನ್ನುಗ್ಗುತ್ತದೆ. ಇದರೊಟ್ಟಿಗೆ ಪದಗಳ, ಭಾಷೆಯ ಪ್ರಯೋಗ ಮಾಡುತ್ತದೆ. ತನ್ನದೇ ಲೋಕದಲ್ಲಿರಬೇಕು ಎಂದು ಆಶಿಸುವ ಮಗುವಿಗೆ ಇದೊಂದು ಪ್ರಮುಖ ಹಂತ. ಈ ದಿನಕ್ಕೆಂದೇ ಮಗುವಿನ ತಂದೆ -ತಾಯಿ ಕಾಯುತ್ತಿರುತ್ತಾರೆ. ಹಾಗಾಗಿ ಅದೊಂದು ಸುವರ್ಣ ದಿನ.
ಅಬ್ಟಾ! ಮಾತನಾಡಲು ಹೇಳಿಕೊಡಲು ಏನೆಲ್ಲ ಮಾಡುತ್ತಾರೆ ಕೆಲವರು. ನಾವು ಒಮ್ಮೆ ಯೋಚಿಸೋಣ, ನಮ್ಮ ಭಾಷೆಯಲ್ಲಿರುವ ಪ್ರತಿಯೊಂದು ಅಕ್ಷರವನ್ನು, ಪದವನ್ನು ಅರ್ಥವತ್ತಾಗಿ ಬಳಸಲಿಕ್ಕೆ ನಾವು ಚಿಕ್ಕವರಿರುವಾಗಲೇ ಹೇಗೆ ಕಲಿತೆವು? ಅದೊಂದು ಅಚ್ಚರಿಯೇ ತಾನೇ?
ಸ್ಫೂರ್ತಿ
ತಸ್ಮೇನಿಯಾ