ನವದೆಹಲಿ: ಜಗತ್ತಿನ ಅತಿ ದೊಡ್ಡ ಹೆದ್ದಾರಿ ಮಾರ್ಗ ಎಂಬ ಖ್ಯಾತಿ ಪಡೆದಿರುವ ಅಟಲ್ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾ(ಅಕ್ಟೋಬರ್ 03, 2020) ಉದ್ಘಾಟಿಸುವ ಮಾಜಿ ಪ್ರಧಾನಿ ವಾಜಪೇಯಿ ಅವರ ಗೆಳೆಯನ ದಶಕಗಳಷ್ಟು ಹಳೆಯ ಕನಸು ಕೊನೆಗೂ ನನಸಾದಂತಾಗಿದೆ.
ಅಟಲ್ ಬಿಹಾರಿ ವಾಜಪೇಯಿ ಅವರ ಗೆಳೆಯ ಅರ್ಜುನ್ ಗೋಪಾಲ್ ಅವರು ಈ ರೋಹ್ಟಾಂಗ್ ನ ಸುರಂಗ ಮಾರ್ಗದ ಬೀಜ ಬಿತ್ತಿದವರು. ಇಲ್ಲೊಂದು ಸುರಂಗ ಮಾರ್ಗವನ್ನು ನಿರ್ಮಿಸಬೇಕೆಂದು ಸಲಹೆ ನೀಡಿದ್ದು ತಮ್ಮ ತಂದೆ ಎಂಬುದಾಗಿ ಅರ್ಜುನ್ ಗೋಪಾಲ್ ಅಲಿಯಾಸ್ ತ್ಸಿಡಾವಾ ಅವರ ಪುತ್ರರಾದ ಅಮರ್ ಸಿಂಗ್, ರಾಮ್ ದೇವ್ ನೆನಪಿಸಿಕೊಂಡಿದ್ದಾರೆ.
ಹಿಮಾಚಲ್ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಕೂಡಾ ಈ ಹಿಂದೆ ಈ ಘಟನೆಯನ್ನು ನೆನಪಿಸಿಕೊಂಡಿದ್ದು, ವಾಜಪೇಯಿ ಅವರು ಸುರಂಗ ಮಾರ್ಗವನ್ನು ನಿರ್ಮಾಣ ಮಾಡಬೇಕೆಂಬ ಸಲಹೆಯನ್ನು ಪಡೆದಿದ್ದು ಗೆಳೆಯ ಅರ್ಜುನ್ ಗೋಪಾಲ್ ಅವರಿಂದಾಗಿ ಎಂದು ತಿಳಿಸಿದ್ದರು.
ಇದನ್ನೂ ಓದಿ: ಹೊಸ ಫೀಚರ್ ಹೊರತಂದ ಗೂಗಲ್ ಮ್ಯಾಪ್: ಇದೀಗ ನ್ಯಾವಿಗೇಶನ್ ಮತ್ತಷ್ಟು ಸುಲಭ !
ಲಾಹೌಲ್-ಸ್ಪೀತಿ ಜಿಲ್ಲೆಯ ಥೋಲಾಂಗ್ ಗ್ರಾಮದಿಂದ ಪಿಟಿಐ ಜತೆ ಮಾತನಾಡಿದ ಅಮರ್ ಸಿಂಗ್ (75ವರ್ಷ), 1998ರಲ್ಲಿ ನಮ್ಮ ತಂದೆ ದೆಹಲಿಯಲ್ಲಿ ವಾಜಪೇಯಿ ಅವರನ್ನು ಭೇಟಿಯಾಗಿ “ಲಾಹೌಲ್-ಸ್ಪೀತಿ ಜಿಲ್ಲೆಯ ಜನರ ಓಡಾಟಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ರೋಹ್ಟಾಂಗ್ ಪಾಸ್ ಅಡಿ ಸುರಂಗ ಮಾರ್ಗ ನಿರ್ಮಿಸುವಂತೆ ಮನವಿ ಮಾಡಿಕೊಂಡಿರುವುದಾಗಿ ತಿಳಿಸಿದರು.
ನಮ್ಮ ತಂದೆ ಅರ್ಜುನ್ ಗೋಪಾಲ್ 2008ರಲ್ಲಿ ವಿಧಿವಶರಾಗಿದ್ದು, ಕೊನೆಗೂ ತಂದೆಯ ದಶಕಗಳ ಕಾಲ ಹಳೆಯ ಕನಸು ನನಸಾಗಿದೆ. ಇದರಿಂದ ನನ್ನ ಸಂತೋಷಕ್ಕೆ ಪಾರವೇ ಇಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.