Advertisement

ನನಸಾಗದ ಹಸಿರೀಕರಣ ಕನಸು

04:02 PM Dec 17, 2019 | Team Udayavani |

ಗದಗ: ಗದಗ-ಬೆಟಗೇರಿ ನಗರಸಭೆಯಿಂದ ಅವಳಿ ನಗರದ ಪ್ರಮುಖ ಮಾರ್ಗಗಳ ರಸ್ತೆ ವಿಭಜಕಗಳಲ್ಲಿನೆಡಲಾಗಿರುವ ಸಸಿ ಹಾಗೂ ಗಿಡಗಳಿಗೆ ರಕ್ಷಣೆ ಹಾಗೂ ಸೂಕ್ತ ನಿರ್ವಹಣೆ ಇಲ್ಲದೇ ಹಾನಿಗೀಡಾಗಿವೆ. ಹವಾಮಾನ ವೈಪರಿತ್ಯ ಹಾಗೂ ಬಿಡಾಡಿ ದನಗಳ ಹಾವಳಿಯಿಂದಾಗಿ ಸಸಿಗಳು ಹಾನಿಗೀಡಾಗಿದ್ದು, ಲಕ್ಷಾಂತರ ರೂ. ಅನುದಾನ ವ್ಯರ್ಥವಾಗಿದೆ.

Advertisement

ವರ್ಷದ ಹಿಂದೆ ನಗರಸಭೆ ಅಧ್ಯಕ್ಷರಾಗಿದ್ದ ಪೀರಸಾಬ ಕೌತಾಳ ಹಾಗೂ ಬಿ.ಬಿ. ಅಸೂಟಿ ಅವಧಿಯಲ್ಲಿ ನಗರದ ಸೌಂದಯೀಕರಣ ಹಾಗೂ ಹಸಿರೀಕರಣಕ್ಕೆ ಒತ್ತು ನೀಡಲಾಗಿತ್ತು. ನಗರದ ಕಾರ್ಯಪ್ಪ ವೃತ್ತದಿಂದ ರಾಣಿ ಚೆನ್ನಮ್ಮ ವೃತ್ತ, ಚೆನ್ನಮ್ಮ ವೃತ್ತದಿಂದ ಮುಳಗುಂದ ನಾಕಾ ಮಾರ್ಗವಾಗಿ ಬಿಂಕದಕಟ್ಟಿ ಕಿರು ಮೃಗಾಯಲದ ಕ್ರಾಸ್‌ ವರೆಗೆ ಹಾಗೂ ಟಿಪ್ಪು ಸುಲ್ತಾನ್‌ ವೃತ್ತದಿಂದ ಮುಂಡರಗಿ ರಸ್ತೆಯಲ್ಲಿರುವ ತೋಂಟದಾರ್ಯ ಇಂಜಿನಿಯರಿಂಗ್‌ ಕಾಲೇಜು ವೃತ್ತದವರೆಗೆ ಹಾಗೂ ಮುಂಡರಗಿ ಕ್ರಾಸ್‌ನಿಂದ ಪುನಃ ಕಾರ್ಯಪ್ಪ ವೃತ್ತ(ಹಳೇ ಡಿಸಿ ಆಫೀಸ್‌) ವರೆಗೆ ಸೇರಿದಂತೆ 11 ದ್ವಿಪಥ ರಸ್ತೆಗಳಲ್ಲಿ 14 ಕಿ.ಮೀ. ಉದ್ದದಷ್ಟು ರಸ್ತೆಗಳಲ್ಲಿ 80 ಲಕ್ಷ ರೂ. ಹಸಿರೀಕರಣ ಕಾಮಗಾರಿ ಕೈಗೊಳ್ಳಲಾಗಿತ್ತು. ಆ ಪೈಕಿ ಮೊದಲ ಹಂತದಲ್ಲಿ ನಗರದ ಭೀಷ್ಮಕೆರೆಗೆ ಹೊಂದಿಕೊಂಡಿರುವ ಕಾರ್ಯಪ್ಪ ವೃತ್ತದಿಂದ ರಾಣಿ ಚೆನ್ನಮ್ಮ ವೃತ್ತದವರೆಗೆ ಹಾಗೂ ಜಿಲ್ಲಾಡಳಿತ ಭವನದಿಂದ ಬಿಂಕದ ಕಟ್ಟಿ ಸಣ್ಣ ಮೃಗಾಯಲದ ಕ್ರಾಸ್‌ ವರೆಗೆ ಈಗಾಗಲೇ ನಗರಸಭೆಯಿಂದ ಜಾನುವಾರುಗಳು ತಿನ್ನಲಾಗದ ಪೈಕಾಸ್‌, ಪಂಡಾ, ಪ್ರಿಸ್ಟಪಾಮ್‌, ವೈಟಪಾಮ್‌, ತುಳಜಾ ಹಾಗೂ ಹೆಜ್ವಾಡ ತಳಿಯ ಗಿಡಗಳನ್ನು ನೆಡಲಾಗಿತ್ತು.

ನಿರ್ವಹಣೆ ಕೊರತೆ-ದನಗಳ ಕಾಟ: ಆಯ್ದ ರಸ್ತೆಗಳಲ್ಲಿ ಸುಮಾರು 500 ಸಸಿಗಳನ್ನು ನೆಡಲಾಗಿದ್ದು, ನಾನಾ ಕಾರಣದಿಂದ ಬಹುತೇಕ ಗಿಡಗಳು ಒಣಗಿ ಹೋಗಿವೆ. ಜನರಲ್‌ ಕಾರ್ಯಪ್ಪ ಸರ್ಕಲ್‌ನಿಂದ ಕಿತ್ತೂರು ರಾಣಿ ಚನ್ನಮ್ಮ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ಭೀಷ್ಮಕೆರೆ ಮಾರ್ಗದಲ್ಲಿ ಮಾತ್ರ ಸುಮಾರು 20ಕ್ಕೂ ಹೆಚ್ಚು ಗಿಡಗಳು ಸಮೃದ್ಧವಾಗಿ ಬೆಳೆದು ನಿಂತಿವೆ. ಇನ್ನುಳಿದೆಡೆ ಅಲ್ಲೊಂದು-ಇಲ್ಲೊಂದು ಗಿಡಗಳು ಕಂಡು ಬರುತ್ತಿದ್ದರೂ ಅವು ಮೂರು ಅಡಿಗಿಂತ ಎತ್ತರಕ್ಕೆ ಚಿಗುರುತ್ತಿಲ್ಲ. ಅಷ್ಟರಲ್ಲೇ ಗಿಡಗಳಿಗೆ ಬೀಡಾದಿ ದನಗಳು ಬಾಯಿ ಹಾಕುತ್ತವೆ. ನಿಯಮಿತವಾಗಿ ಗಿಡಗಳಿಗೆ ನೀರು ಪೂರೈಕೆಯಾಗದೇ, ಬಿರು ಬಿಸಿಲಿನಿಂದಾಗಿ ಗಿಡಗಳು ಒಣಗುತ್ತವೆ. ಅವುಗಳಿಗೆ ಮಳೆ ಬಂದಾಗಲೇ ನೀರು ಎನ್ನುವಂತಾಗಿದರೂ ಹಲವು ಸಸಿಗಳು ಪದೇ ಪದೇ ಚಿಗುರುತ್ತಿವೆ.

ಇನ್ನೂ ಕೆಲವು ಮಳೆಗಾಲದಲ್ಲೂ ಚೇತರಿಸಿಕೊಳ್ಳಲಾಗದೇ ಒಣಗಿ ನಿಂತಿವೆ ಎನ್ನುತ್ತಾರೆ ಸ್ಥಳೀಯರು. ಆದರೆ, ಹಸಿರು ಸೌಂದರ್ಯವನ್ನು ಇಮ್ಮಡಿಗೊಳಿಸುವ ಪೈಕಾಸ್‌, ಪಂಡಾ, ಪ್ರಿಸ್ಟಪಾಮ್‌, ವೈಟಪಾಮ್‌, ತುಳಜಾ ಹಾಗೂ ಹೆಜ್ವಾಡ ತಳಿಯ ಗಿಡಗಳ ಪೈಕಿ ಕೆಲವು ಸ್ಥಳೀಯ ವಾತಾವರಣಕ್ಕೆ ಒಂದಿಕೊಳ್ಳುತ್ತಿಲ್ಲ. ಬೇಸಿಗೆಯಲ್ಲಿ ನಗರಸಭೆ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಿದರೂ ಅವು ಬದುಕುಳಿಯಲಿಲ್ಲ. ಹೀಗಾಗಿ ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳುವಂಥ ಸಸಿಗಳನ್ನು ನೆಡಬೇಕಿದೆ ಎಂದು ನಗರಸಭೆ ಅಧಿಕಾರಿಗಳು ಜಾರಿಕೊಳ್ಳುತ್ತಾರೆ. ಒಟ್ಟಾರೆ ನಗರದ ಹಸರೀಕರಣ ವಿಚಾರದಲ್ಲಿ ಅಧಿಕಾರಿಗಳ ಪೂರ್ವಪರ ಅಧ್ಯಯನ ಕೊರತೆಯೋ, ಸೌಂದಯೀಕರಣದಲ್ಲಿ ಜನಪ್ರತಿನಿಧಿಗಳ ಪ್ರತಿಷ್ಠೆಯೋ ಗೊತ್ತಿಲ್ಲ. ಆದರೆ, ಸಾರ್ವಜನಿಕರ ತೆರಿಗೆ ರೂಪದಲ್ಲಿ ಸಂಗ್ರಹವಾಗಿದ್ದ ಲಕ್ಷಾಂತರ ರೂಪಾಯಿ ಪೋಲಾಗಿದೆ ಎಂಬುದು ಬೇಸರದ ಸಂಗತಿ.

 

Advertisement

-ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next