ಬೆಂಗಳೂರು: ರಾಜ್ಯದಲ್ಲಿ ಆನ್‌ಲೈನ್ ಸ್ಕಿಲ್ ಗೇಮ್, ಬೆಟ್ಟಿಂಗ್ ಮತ್ತು ಜೂಜಾಟಕ್ಕೆ ಸಂಬಂಧಿಸಿದ ಆ್ಯಪ್‌ಗಳ ನಿಷೇಧದ ನಡುವೆಯೂ ಆ್ಯಪ್‌ಗಳ ಮೂಲಕ ಬೆಟ್ಟಿಂಗ್ ದಂಧೆ ನಡೆಯುತ್ತಿದ್ದು, ಈ ಸಂಬಂಧ ರಾಜ್ಯದಲ್ಲಿ ಮೊದಲ ಎಫ್ಐಆರ್ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಮಡಿವಾಳ ಠಾಣೆಯಲ್ಲಿ ದಾಖಲಾಗಿದ್ದ ಮತ್ತೂಂದು ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಅನ್ನಪೂರ್ಣೇಶ್ವರಿನಗರದ ಮಂಜುನಾಥ್ ಎಂಬುವರು ನೀಡಿದ್ದ ದೂರಿನ ಮೇರೆಗೆ ಅನ್ನಪೂರ್ಣೇಶ್ವರಿನಗರ ಪೊಲೀಸರು ಮುಂಬೈ ಮೂಲದ ಡ್ರೀಮ್ಸ್ ನ್ಪೋರ್ಟ್ಸ್ ಕಂಪನಿಗೆ ಸೇರಿದ ಕ್ರಿಕೆಟ್ ಬೆಟ್ಟಿಂಗ್ ನಡೆಸುವ “ಡ್ರೀಮ್-11′ ಆ್ಯಪ್ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ:- ಸಖತ್ ಸಾಂಗ್ ರಿಲೀಸ್: ‘ಪ್ರೇಮಕ್ಕೆ ಕಣ್ಣಿಲ್ಲಾ’ ಎಂದ ಗೋಲ್ಡನ್ ಸ್ಟಾರ್
ರಾಜ್ಯದಲ್ಲಿ ಆನ್‌ಲೈನ್ ಜೂಜಾಟ, ಬೆಟ್ಟಿಂಗ್ ಮತ್ತು ಸ್ಕಿಲ್ ಗೇಮ್‌ಗಳನ್ನು ನಿಷೇಧಿಸುವ ಸಲುವಾಗಿ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತಂದು ವಿಧಾನಸಭೆ ಅನುಮೋದನೆ ನೀಡಿತ್ತು. ಕಾಯ್ದೆ ಜಾರಿಗೊಂಡ ಬಳಿಕವು ಡ್ರೀಮ್-11 ಆ್ಯಪ್‌ನಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆದಿದೆ ಎಂದು ಆರೋಪಿಸಿ ಮಂಜುನಾಥ್ ದೂರು ನೀಡಿದ್ದರು.
ಹೊಸ ಕಾಯ್ದೆ ಅನ್ವಯ ಆ್ಯಪ್ ಕಂಪನಿ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು. ಹಣವನ್ನು ಪಣವಾಗಿರಿಸಿ ಆಡುವ ಎಲ್ಲ ರೀತಿಯ ಆಟಗಳನ್ನು ಆನ್‌ಲೈನ್ ಜೂಜು ಎಂದೇ ಸರ್ಕಾರ ಪರಿಗಣಿಸಿದೆ. ನಗದು ಮಾತ್ರವಲ್ಲದೆ ವರ್ಚುಯಲ್ ಕರೆನ್ಸಿ, ಡಿಜಿಟಲ್ ಕರೆನ್ಸಿ, ಎಲೆಕ್ಟ್ರಾನಿಕ್ ಮನಿ, ಎಲೆಕ್ಟ್ರಾನಿಕ್ ಟ್ರಾನ್ಸ್‌ಫರ್ ಆಫ್ ಫಂಡ್ಸ್, ಪಾಯಿಂಟ್ಸ್ ರೂಪದ ಹಣ ಸೇರಿ ಯಾವುದೇ ಸ್ವರೂಪದಲ್ಲೂ ಹಣವನ್ನು ಪಣವಾಗಿಟ್ಟು ಜೂಜಿನಲ್ಲಿ ತೊಡಗುವವರ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ ಅಡಿ ಕಾನೂನು ಕ್ರಮಕೈಗೊಳ್ಳಬೇಕಿದೆ ಎಂದು ಪೊಲೀಸರು ಹೇಳಿದರು.