Advertisement
ಡ್ಯಾಂನಲ್ಲಿ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಡ್ರೆಜ್ಜಿಂಗ್ ಮಾಡುವ ಮೂಲಕ ಡ್ಯಾಂನ ನೀರಿನ ಸಂಗ್ರಹ ವನ್ನು ಸ್ವಲ್ಪ ಏರಿಸುವುದು, ಆ ಮೂಲಕ ದೊರೆಯುವ ಮರಳನ್ನು ಸರಕಾರಿ ಕಾಮಗಾರಿಗಳಿಗೆ ಬಳಸಲು ಚಿಂತಿಸಲಾಗಿದೆ.
ಡ್ಯಾಂನ ಆಳದಲ್ಲಿ ತುಂಬಿರುವ ಬೃಹತ್ ಪ್ರಮಾಣದ ಮರಳನ್ನು ತುರ್ತಾಗಿ ಡ್ರೆಜ್ಜಿಂಗ್ ಮೂಲಕ ವಿಲೇವಾರಿ ಮಾಡಲು ಕೇಂದ್ರ ಪರಿಸರ ಇಲಾಖೆ ಇತ್ತೀಚೆಗೆ ಜಿಲ್ಲಾಡಳಿತಕ್ಕೆ ಅನುಮತಿ ನೀಡಿತ್ತು. ಅದರಂತೆ ದ.ಕ. ಜಿಲ್ಲಾಡಳಿತವು ಡ್ಯಾಂನ ಮರಳನ್ನು ತೆಗೆಯಲು ನಿರ್ಧರಿಸಿದ್ದು, ಟೆಂಡರ್ ಪ್ರಕ್ರಿಯೆ ಕೊನೆಯ ಹಂತದಲ್ಲಿದೆ. ಸಹಾಯಕ ಆಯುಕ್ತರ ನೇತೃತ್ವದಲ್ಲಿ ಮನಪಾ ಅಧಿಕಾರಿಗಳನ್ನು ಒಳಗೊಂಡ ಸಮಿತಿಯೊಂದನ್ನು ಜಿಲ್ಲಾಧಿಕಾರಿ ರಚನೆ ಮಾಡಿದ್ದರು.
Related Articles
Advertisement
ತುಂಬೆ ಡ್ಯಾಂನ ಪಂಪಿಂಗ್ ಜಾಗದಲ್ಲಿ ಇರುವ ಬಾವಿಯಲ್ಲಿ ಯಥೇತ್ಛವಾಗಿ ಮರಳು ತುಂಬಿ ಪಂಪಿಂಗ್ ಸಮಸ್ಯೆ ಆದಾಗ, ಬಾವಿಯಲ್ಲಿ ತುಂಬಿರುವ ಮರಳನ್ನು ಈ ಹಿಂದೆ ತೆಗೆಯಲಾಗಿತ್ತು. ಹಲವು ದಿನಗಳ ಹಿಂದೆ ಕೂಡ ಇದೇ ರೀತಿ ಬಾವಿಯ ಮರಳನ್ನು ತೆಗೆಯಲಾಗಿದ್ದು, ಅದಕ್ಕಾಗಿ ಒಂದು ದಿನ ನೀರು ಸರಬರಾಜು ಸ್ಥಗಿತಗೊಳಿಸಲಾಗುತ್ತಿತ್ತು. ಆದರೆ, ಡ್ಯಾಂ ಪೂರ್ಣ ಸಂಗ್ರಹವಾಗಿರುವ ಮರಳನ್ನು ಇಲ್ಲಿಯವರೆಗೆ ತೆಗೆದಿರಲಿಲ್ಲ. ಹೀಗಾಗಿ ಯಾವ ಪ್ರಮಾಣದಲ್ಲಿ ಮರಳು ಇಲ್ಲಿ ಲಭ್ಯವಿದೆ ಎಂಬ ಲೆಕ್ಕಾಚಾರ ಸಿಗುತ್ತಿಲ್ಲ.
ಡ್ರೆಜ್ಜಿಂಗ್ ಯಾಕಾಗಿ?ಸೋಮವಾರ ತುಂಬೆ ಡ್ಯಾಂನಲ್ಲಿ ನೀರಿನ ಸಂಗ್ರಹ 4.82 ಮೀಟರ್‌ನಷ್ಟಿದೆ. ಆದರೆ, ನದಿಯಲ್ಲಿ ನೀರಿನ ಜತೆಗೆ ಮರಳು ಕೂಡ ಬಂದು ಡ್ಯಾಂ ಭಾಗದ ತಳಮಟ್ಟದಲ್ಲಿ ಸಂಗ್ರಹವಾಗಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಜತೆಗೆ ಹಳೆ ಡ್ಯಾಂನಲ್ಲಿ ಮಳೆಗಾಲದ ಸಂದರ್ಭ ಎಲ್ಲ ಗೇಟುಗಳನ್ನು ತೆರೆಯುತ್ತಿದ್ದ ಕಾರಣದಿಂದ ಮರಳು ಡ್ಯಾಂನಿಂದ ಹೊರಭಾಗಕ್ಕೆ ಹೋಗುತ್ತಿತ್ತು. ಆದರೆ, ಹೊಸ ಡ್ಯಾಂ ಆದ ಬಳಿಕ ಇಲ್ಲಿ ಕೆಲವು ಗೇಟ್‌ಗಳನ್ನು ಬಂದ್ ಮಾಡಿದ್ದ ಕಾರಣ ಅಲ್ಲಿ ಮರಳು ಸಂಗ್ರಹವಾಗಿದೆ. ಭಾರೀ ಪ್ರಮಾಣದಲ್ಲಿ ಹೂಳು/ಮರಳು ತುಂಬಿದರೆ, ನೀರು ಹತ್ತಿರದ ಪ್ರದೇಶಗಳಿಗೆ ನುಗ್ಗುವ ಅಪಾಯವನ್ನು ನಿರಾಕರಿಸುವಂತಿಲ್ಲ. ಹಾಗಾಗಿ ಡ್ರೆಜ್ಜಿಂಗ್‌ಗೆ ತೀರ್ಮಾನಿಸಲಾಗಿದೆ. ಮೀನುಗಾರಿಕಾ ಬಂದರ್‌ನ ರೀತಿಯಲ್ಲಿ ಡ್ರೆಜ್ಜಿಂಗ್
ನಗರದ ಮೀನುಗಾರಿಕಾ ಬಂದರ್‌ನಲ್ಲಿ ಮೀನುಗಾರಿಕಾ ದೋಣಿಗಳ ಸಾಗಾಟಕ್ಕೆ ಅನುಕೂಲ ಕಲ್ಪಿಸಲು ಮಾಡಲಾಗುತ್ತಿರುವ ಡ್ರೆಜ್ಜಿಂಗ್‌ಗೆ ಬಳಕೆ ಮಾಡುವ ರೀತಿಯ ಬೃಹತ್ ಗಾತ್ರದ ಯಂತ್ರವನ್ನೇ ತುಂಬೆ ಡ್ಯಾಂನಲ್ಲೂ ಬಳಕೆ ಮಾಡುವ ಸಾಧ್ಯತೆ ಇದೆ. ಡ್ಯಾಂ ಪೂರ್ಣ ಮರಳನ್ನು ತೆಗೆದು ಅದನ್ನು ಸರಕಾರಿ ಕಾಮಗಾರಿಗಳಿಗೆ ಬಳಕೆ ಮಾಡುವ ಬಗ್ಗೆ ಈಗಾಗಲೇ ಜಿಲ್ಲಾಡಳಿತ ನಿರ್ಧರಿಸಿದೆ. ಡ್ರೆಜ್ಜಿಂಗ್‌ಗೆ ಅನುಮತಿ
ತುಂಬೆ ಡ್ಯಾಂನಲ್ಲಿ ತುಂಬಿರುವ ಹೂಳು/ಮರಳನ್ನು ಡ್ರೆಜ್ಜಿಂಗ್ ಮಾಡಲು ಅನುಮತಿ ನೀಡಲಾಗಿದೆ. ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಕೆಲವೇ ದಿನದಲ್ಲಿ ಡ್ರೆಜ್ಜಿಂಗ್ ಕೆಲಸ ಆರಂಭವಾಗಲಿದೆ. ನೀರು ಸಂಗ್ರಹಕ್ಕೆ ಲಾಭ, ಮರಳು ಲಭ್ಯತೆ ಹಿನ್ನೆಲೆಯಲ್ಲಿ ಡ್ರೆಜ್ಜಿಂಗ್ ಮಾಡಲಾಗುತ್ತದೆ.
– ಶಶಿಕಾಂತ್ ಸೆಂಥಿಲ್,
ಜಿಲ್ಲಾಧಿಕಾರಿ,ದ.ಕ