Advertisement

ಕ್ರೀಡೆ, ಓದಿಗೆ ಸಮಾನ ಆದ್ಯತೆ ನೀಡಲು ದ್ರಾವಿಡ್‌ ಸಲಹೆ

11:49 AM May 19, 2018 | Team Udayavani |

ಬೆಂಗಳೂರು: ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳ ಜತೆಗೆ ಓದಿನಲ್ಲೂ ಹೆಚ್ಚು ಆಸಕ್ತಿ ವಹಿಸುವ ಮೂಲಕ ಎರಡಕ್ಕೂ ಸಮಾನ ಆದ್ಯತೆ ನೀಡಬೇಕು ಎಂದು ಖ್ಯಾತ ಕ್ರಿಕೆಟಿಗ, ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಸಲಹೆ ನೀಡಿದ್ದಾರೆ.

Advertisement

ಕ್ರಿಕೆಟರ್‌ ಫಾರ್‌ ವೈಲ್ಡ್‌ಲೈಫ್ ಕನ್ಸರ್‌ವೆಷನ್‌ ಸಂಸ್ಥೆಯಿಂದ ವಸಂತನಗರದ ಕರ್ನಾಟಕ ರಾಜ್ಯ ಬಿಲಿಯರ್ಡ್ಸ್‌ ಅಸೋಸಿಯೇಷನ್‌ನಲ್ಲಿ ನಡೆದ “ಟೈಗರ್‌ ಕಪ್‌’ ಹಾಗೂ “ವನ್ಯಜೀವಿ ಸೇವಾ ಪ್ರಶಸ್ತಿ-2018’ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಕ್ರಿಕೆಟ್‌ ಸೇರಿದಂತೆ ಬಹುತೇಕ ಕ್ರೀಡೆಗಳಲ್ಲಿ ಸಾಕಷ್ಟು ಸ್ಪರ್ಧೆಯಿದ್ದು, ಸಾಧನೆಗಾಗಿ ಕಠಿಣ ಪರಿಶ್ರಮ ಮತ್ತು ಆಸಕ್ತಿ ಮೈಗೂಡಿಸಿಕೊಳ್ಳಬೇಕು. ಆದರೆ, ಕ್ರೀಡೆಗಾಗಿ ವಿದ್ಯಾಭ್ಯಾಸ ಕಡೆಗಣಿಸಬಾರದು. ತಮ್ಮ ಆಸಕ್ತಿಯ ಕ್ರೀಡೆ ಹಾಗೂ ವಿದ್ಯಾಭ್ಯಾಸಕ್ಕೆ ಸಮಾನ ಆದ್ಯತೆ ನೀಡಬೇಕು ಎಂದರು.

ರಾಜ್ಯದಲ್ಲಿ ಸಮೃದ್ಧವಾಗಿರುವ ಪರಿಸರ ಹಾಗೂ ವನ್ಯಜೀವಿ ಸಂಪತ್ತಿನ ರಕ್ಷಣೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಶ್ರಮವಹಿಸುತ್ತಿದ್ದಾರೆ. ಕಾಡಿನಲ್ಲಿ ಜೀವನ ಸಾಗಿಸುತ್ತಾ ವನ್ಯಜೀವಿಗಳನ್ನು ಸಂರಕ್ಷಿಸುತ್ತಿರುವ ಸಿಬ್ಬಂದಿಯ ಕಾರ್ಯ ಶ್ಲಾಘನೀಯ. ಜತೆಗೆ ವನ್ಯಜೀವಿ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ವನ್ಯಜೀವಿ ತಜ್ಞ ಸಂಜಯ್‌ ಗುಬ್ಬಿ ಮಾತನಾಡಿ, ಕಠಿಣ ಪರಿಶ್ರಮ ಹಾಗೂ ಧೈರ್ಯವೇ ಸಾಧನೆಗೆ ಅಗತ್ಯವಿರುವ ಪ್ರಮುಖ ಅಂಶಗಳು ಎಂಬುದನ್ನು ವಿದ್ಯಾರ್ಥಿಗಳು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಜತೆಗೆ ಕ್ರಿಕೆಟ್‌ ಇಷ್ಟಪಟ್ಟಂತೆ ವಿದ್ಯಾಭ್ಯಾಸವನ್ನೂ ಇಷ್ಟಪಡಬೇಕು. ಕ್ರೀಡೆ ಇಷ್ಟಪಡಲು ಸಾವಿರ ಕಾರಣಗಳಿದ್ದರೆ ಓದು ಕೂಡ ಅಷ್ಟೇ ಮುಖ್ಯ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

Advertisement

ಕ್ರಿಕೆಟ್‌ ಆಟಗಾರರು ವನ್ಯಜೀವಿ ಸಂರಕ್ಷಣೆ ಕುರಿತ ಜಾಗೃತಿಯಲ್ಲಿ ಹೆಚ್ಚು ಪಾಲ್ಗೊಳ್ಳುತ್ತಿರುವುದು ಸಂತಸದ ವಿಚಾರ. ಈ ಹಿಂದೆ ಅನಿಲ್‌ಕುಂಬ್ಳೆ, ವೆಂಕಟೇಶ್‌ ಪ್ರಸಾದ್‌ ಸೇರಿ ಹಲವು ಆಟಗಾರರು ವನ್ಯಜೀವಿ ಸಂರಕ್ಷಣೆ ಸಪ್ತಾಹಕ್ಕೆ ಕೈ ಜೋಡಿಸಿದ್ದರು. ನೀವು ಕೂಡ ಮುಂದೊಂದು ದಿನ ವನ್ಯಜೀವಿ ಸಂರಕ್ಷಣೆಯನ್ನು ವೃತ್ತಿಯನ್ನಾಗಿಸಿಕೊಳ್ಳಬಹುದು ಎಂದು ನೆರೆದಿದ್ದ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. 

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಮನೋಜ್‌ ಕುಮಾರ್‌ ಮಾತನಾಡಿ, ಸಮಾಜ ಹಾಗೂ ಪರಿಸರದ ನಡುವೆ ಇರುವ ನೇರ ಸಂಬಂದಧ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕಿದೆ. ಜೀವ ವೈವಿದ್ಯತೆ ಉಳಿಸಲು ಅರಣ್ಯ ಇಲಾಖೆ ಸಿಬ್ಬಂದಿ ಜತೆ ನಾಗರಿಕರೂ ಕೈ ಜೋಡಿಸಬೇಕು ಎಂದು ಅಭಿಪ್ರಾಯಪಟ್ಟರು.

“ವನ್ಯ ಜೀವಿ ಸೇವಾ 2018′ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅರಣ್ಯ ರಕ್ಷಕ ಯೋಗರಾಜ್‌, ಸೈನಿಕರು ಗಡಿ ಕಾಯುವ ಮೂಲಕ ದೇಶಕ್ಕೆ ಭದ್ರತೆ ನೀಡುವಂತೆ, ಅರಣ್ಯ ಸಂಪತ್ತು ರಕ್ಷಿಸುವ ಮೂಲಕ ಪ್ರತಿಯೊಬ್ಬರ ಉಸಿರು ರಕ್ಷಿಸುವ ಸೈನಿಕರಂತೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತೇವೆ ಎಂದರು.

ಯೋಗರಾಜ್‌ಗೆ ಪ್ರಶಸ್ತಿ: ಲಕ್ಕವಳ್ಳಿ ವನ್ಯಜೀವಿ ವಲಯದಲ್ಲಿ ಅರಣ್ಯ ರಕ್ಷಕ (ಗಾರ್ಡನ್‌) ಆಗಿ ಕಾರ್ಯನಿರ್ವಹಿಸುತ್ತಿರುವ ಯೋಗರಾಜ್‌, ಮಾರುವೇಷದ ಕಾರ್ಯಾಚರಣೆಯಲ್ಲಿ ತಮಿಳುನಾಡು ಮೂಲದ ಕಾಡುಗಳ್ಳರನ್ನು ಬಂಧಿಸುವಲ್ಲಿ ಸಫ‌ಲರಾಗಿದ್ದರು. ಬಳಿಕ 2013ರಲ್ಲಿ ಚಿಪ್ಪುಹಂದಿ ಬೇಟೆಯಾಡಲು ಬಂದಿದ್ದ ಕುಪ್ಪಂ ಮೂಲದ ಮಂದಿಯನ್ನು ಬಂಧಿಸುವಲ್ಲೂ ಯಶಸ್ವಿಯಾಗಿದ್ದರು.

ಈ ಪ್ರಕರಣದಲ್ಲಿ ನ್ಯಾಯಾಲಯ, ಆರೋಪಿಗಳಿಗೆ 3 ವರ್ಷ ಜೈಲು ಹಾಗೂ 50 ಸಾವಿರ ದಂಡ ವಿಧಿಸಿತ್ತು. ವನ್ಯಜೀವಿ ಸಂರಕ್ಷಣೆಗೆ ಯೋಗರಾಜ್‌ ಅವರ ಸೇವೆ  ಪರಿಗಣಿಸಿ “ವನ್ಯ ಜೀವಿ ಸೇವಾ 2018′ ಪ್ರಶಸ್ತಿ ಸಂದಿದೆ. ಈ ಕುರಿತು ಉದಯವಾಣಿಯೊಂದಿಗೆ ಮಾತನಾಡಿದ ಯೋಗರಾಜ್‌,

ನಮ್ಮ ತಂದೆ ಕೂಡ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರಿಂದ ಸಹಜವಾಗಿಯೇ ಚಿಕ್ಕಂದಿನಿಂದಲೇ ಅರಣ್ಯದ ಬಗ್ಗೆ ಹೆಚ್ಚು ಪ್ರೀತಿಯಿತ್ತು. ಬಳಿಕ ಇಲಾಖೆಯಲ್ಲಿಯೇ ಉದ್ಯೋಗ ಸಿಕ್ಕಿದ್ದರಿಂದ ಕಾಡು, ವನ್ಯಜೀವಿಗಳ ಸಂರಕ್ಷಣೆಯೇ ಬದುಕಾಯಿತು. ರಾಜ್ಯದ ಪರಿಸರ ಸಂಪತ್ತು ರಕ್ಷಿಸುವ ಜವಾಬ್ದಾರಿ ತೃಪ್ತಿ ನೀಡಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next