Advertisement

ವಿಜೃಂಭಣೆಯ ದ್ರೌಪತಿ ದೇವಿ ಒಣಕರಗ ಮಹೋತ್ಸವ

03:13 PM Apr 05, 2018 | Team Udayavani |

ಆನೇಕಲ್‌: ಪಟ್ಟಣದ ಧರ್ಮರಾಯಸ್ವಾಮಿ ದೇವಾಲಯದ ದ್ರೌಪತಿ ದೇವಿ ಒಣಕರಗ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಒಣ ಕರಗ ಉತ್ಸವ ನಡೆಯುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಭಾಗಗಳಿಂದ ಇಲ್ಲಿಗೆ ಜನ ಕರಗ ವೀಕ್ಷಿಸಲು ಆಗಮಿಸಿದ್ದರು. ಬುಧವಾರ ಬೆಳಗಿನ ಜಾವ 2:50 ಗಂಟೆಗೆ ಕರಗ ದೇವಾಲಯ ದಿಂದ ಹೊರಬರುತ್ತಿದ್ದಂತೆ ವೀರ ಕುಮಾರರು ಅಲಗು ಸೇವೆ ಮಾಡಿ ಬರಮಾಡಿಕೊಂಡರು. ಕರಗವನ್ನು ಹೊತ್ತ ರಮೇಶ್‌ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ವಾದ್ಯ ಹಾಗೂ ತಾಳ ಮದ್ದಳೆಗೆ ಹೆಜ್ಜೆ ಹಾಕಿ ನೃತ್ಯ ಮಾಡುತ್ತಿದ್ದಾಗ ಭಕ್ತರು ಗೋವಿಂದ ಗೋವಿಂದ ನಾಮ ಘೋಷಗಳನ್ನು ಕೂಗಿದರು.

Advertisement

ಹಸಿಕರಗದಲ್ಲಿ ತಂಬಿಟ್ಟು ನೀರು ಕಡಿಮೆಯಾಗುವುದಕ್ಕೆ ಒಣ ಕರಗ ಎನ್ನುವ ವಾಡಿಕೆ ಇದೆ. ದೇವಾಲಯದಿಂದ ಹೊರಟ ಕರಗ ಹೊತ್ತ ರಮೇಶ್‌ ಸಂತೆ ಮಾಳದಲ್ಲಿ ಹರಡುವ ಬೆಂಕಿ ಕೆಂಡದ ಮೇಲೆ ಕುಣಿದರು. ವೀರ ವಸಂತ (ತಿಮಿರಾಸುರ)ನನ್ನು ಸಂಹರಿಸಲು ದ್ರೌಪದಿ ರೌದ್ರಾವತಾರ ತಾಳುತ್ತಾಳೆಂಬ ಭಾವನೆಯಿಂದ ಕೆಂಡದಿಂದ ಮಡಿಲು ತುಂಬಲಾಗುತ್ತದೆ. 

ಕೆಂಡದ ಮೇಲೆ ಕುಣಿದ ನಂತರ ಕರಗ ವೀರ ವಸಂತನ ಶಿರಸ್ಸನ್ನು ಛೇದಿಸಲಾಗುವ ಜಾಗಕ್ಕೆ ಬಂದು ಅಲ್ಲಿಂದ ತಿಲಕ್‌ ವೃತ್ತ ಬಳಿ ಬಂದು ನರ್ತನ ಮಾಡಿತು. ಹಸಿ ಕರಗದ ದಿನ ಹೆಚ್ಚಿನ ಜನಸಂಖ್ಯೆಯನ್ನು ನಿಯಂತ್ರಿಸಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ತಿಲಕ್‌ ವೃತ್ತದಲ್ಲಿ ಪೊಲೀಸರು ಕರಗವನ್ನು ಕುಣಿಯಲು ಹೆಚ್ಚಿನ ಜಾಗ ಮಾಡಿಕೊಟ್ಟಿದ್ದರು. ತಿಲಕ್‌ ವೃತ್ತದಿಂದ ಹೊರಟ ಕರಗ ಕಾಲೋನಿ, ತಿಗಳರ ಬೀದಿ, ಹೂವಾಡಿಗರ ಬೀದಿ, ಹೊಸೂರು ಬಾಗಿಲು ಮೂಲಕ ಕೆಇಬಿ ಬಳಿ ಬಂದು ನರ್ತನ ಮಾಡುತ್ತಿದ್ದಂತೆ ನೆರೆದಿದ್ದ ಸಾವಿರಾರು ಜನ ಸಂತಸಗೊಂಡರು. ಅಲ್ಲಿಂದ ನೇರವಾಗಿ ರಾಮ ದೇವಾಲಯದಿಂದ ತಾಲೂಕು ಕಚೇರಿ ರಸ್ತೆಯ ಮೂಲಕ 5 ಗಂಟೆಗೆ ದೇವಾಲಯಕ್ಕೆ ತಲುಪಿತು.

ದೇವಾಲಯದ ಆವರಣದಲ್ಲಿ ಒಂದು ಸುತ್ತು ಪ್ರದಕ್ಷಿಣೆ ಹಾಕಿ ಕರಗವನ್ನು ಹೊತ್ತು ರಮೇಶ್‌ ಕುಣಿದು ನಂತರ ದೇವಾಲಯದ ಮುಖ್ಯದ್ವಾರದಲ್ಲಿ ಮಂಡಿಯೂರಿ ದೇವಾಲಯ ತಲುಪಿದರು. 

ಸಂತಸಗೊಂಡ ಅರ್ಜುನಪ್ಪ: ಕರಗ ಹೊರಲು ಹೆಸರುವಾಸಿಯಾಗಿದ್ದ ಅರ್ಚಕರ ಕುಟುಂಬದ ಅರ್ಜುನಪ್ಪ ನಂತರ ರಮೇಶ್‌ ಕರಗವನ್ನು 2016ರಲ್ಲಿ ಹೊತ್ತಿದ್ದರು. ತದ ನಂತರ 2018ರಲ್ಲಿ ಮತ್ತೆ ರಮೇಶ್‌ ಕರಗ ಹೊತ್ತು ಹಸಿ ಕರಗಕ್ಕಿಂತ ಒಣ ಕರಗವನ್ನು ಹೆಚ್ಚು ಯಶಸ್ವಿಯಾಗಿ ನಡೆಸಿಕೊಟ್ಟಿದ್ದ ರಿಂದ ಪೂಜಾರಿ ಅರ್ಜುನಪ್ಪ ತಮ್ಮ ಹಿರಿಯ ವಯಸ್ಸಿನಲ್ಲಿ ತೀವ್ರ ಸಂತಸಪಟ್ಟಿದ್ದು ಕಂಡು ಬಂತು. 15 ದಿನಗಳಿಂದ ಆನೇಕಲ್‌ ಪಟ್ಟಣದ ಜನತೆಗೆ ಹಬ್ಬದ ವಾತಾವರಣ ಸೃಷ್ಟಿಸಿದ್ದ ಕರಗ ಉತ್ಸವ ಒಣ ಕರಗ ನಡೆದು ಮುಕ್ತಾಯಗೊಂಡಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next