Advertisement

ಈ ಊರಿನಲ್ಲಿ ಮಳೆ ಬಂದರೆ ರೈತರು ಸಂತಸ ಪಡುವ ಬದಲು ಮೂಗು ಮುಚ್ಚಿಕೊಂಡು ಹಿಡಿ ಶಾಪ ಹಾಕುತ್ತಾರೆ

02:50 PM Sep 13, 2020 | sudhir |

ಬೆಳಗಾವಿ: ಮಳೆ ಬಂತೆಂದರೆ ಸಾಕು ಬೆಳಗಾವಿ ನಗರದ ಸುತ್ತಲಿನ ರೈತರು ಸಂತಸಪಡುವ ಬದಲು ಮೂಗು ಮುಚ್ಚಿಕೊಂಡು ಹಿಡಿಶಾಪ ಹಾಕುತ್ತಿದ್ದಾರೆ. ಮಳೆ ಆರಂಭವಾದರೆ ಈ ರೈತರ ಕೂಗು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಗೆ ಕೇಳುವುದೇ ಇಲ್ಲ. ನಗರಕ್ಕೆ ಹೊಂದಿಕೊಂಡು ಹರಿಯುವ ಬಳ್ಳಾರಿ ನಾಲಾ ಪ್ರತಿ ವರ್ಷ ಒಂದಿಲ್ಲೊಂದು ಸಮಸ್ಯೆ ಮಾಡುವುದು ಸಹಜವಾಗಿದೆ. ಬಳ್ಳಾರಿ ನಾಲಾದಲ್ಲಿ ಹರಿಯುವ ಚರಂಡಿ ನೀರಿನಿಂದ ನಗರದ ನೂರಾರು ಎಕರೆ ಪ್ರದೇಶ ಸಮಸ್ಯೆಗೀಡಾಗಿದ್ದು, ಈ ಚರಂಡಿ ನೀರಿನಿಂದ ಬೆಳೆ ಫಲವತ್ತಾಗಿ ಬೆಳೆಯದೇ ಕೊಳೆಯುತ್ತಿರುವುದು ಸಾಮಾನ್ಯವಾಗಿದೆ.

Advertisement

ಬೆಳಗಾವಿ ನಗರ, ಅನಗೋಳ, ಶಹಾಪುರ, ವಡಗಾಂವ, ಜುನೆ ಬೆಳಗಾವಿ, ಮಾಧವಪುರ, ಹಲಗಾ ಭಾಗದ ನೂರಾರು ಎಕರೆ ಪ್ರದೇಶಕ್ಕೆ ಚರಂಡಿ ನೀರು ನುಗ್ಗಿ ಅವಾಂತರ ಸೃಷ್ಟಿಸುತ್ತಿದೆ. ಒಂದು ತಿಂಗಳಿಂದ ಶುರುವಾಗಿರುವ ಭಾರೀ ಮಳೆಯಿಂದ ಬಳ್ಳಾರಿ ನಾಲಾ ಒಡೆದು ಹೋಗಿ ಹೊಲಗಳಿಗೆ ನೀರು ನುಗ್ಗುತ್ತಿದೆ. ಈಗ ಮಳೆ ಕಡಿಮೆಯಾದರೂ ಚರಂಡಿ ನೀರು ಹೊಲಗಳಿಗೆ ನುಗ್ಗಿ ಸಮಸ್ಯೆಯನ್ನುಂಟು ಮಾಡುತ್ತಿರುವುದು ರೈತರಲ್ಲಿ ಆತಂಕಕ್ಕೀಡು ಮಾಡಿದೆ. ಪ್ರತಿ ಬಾರಿ ಮಳೆಗಾಲದ ಸಮಯದಲ್ಲಿ ಈ ರೈತರ ಗೋಳು ತಪ್ಪಿದ್ದಲ್ಲ.

ಎರಡು ವರ್ಷಗಳಿಂದ ಟಿಳಕವಾಡಿ, ಚನ್ನಮ್ಮ ನಗರ ಹಾಗೂ ಅನಗೋಳ ಪ್ರದೇಶದ ಚರಂಡಿ ನೀರಿನ ಪೈಪ್‌ಲೈನ್‌ ಮಾಡಿ ಬಳ್ಳಾರಿ ನಾಲೆಗೆ ಜೋಡಿಸಲಾಗಿದೆ. ಜತೆಗೆ ಅನಗೋಳ-ವಡಗಾವಿಯ ಚರಂಡಿ ನೀರಿನ ಪೈಪ್‌ಗ್ಳು ಬ್ಲಾಕ್‌ ಆಗಿದ್ದರಿಂದ ಮತ್ತಷ್ಟು ಸಮಸ್ಯೆ ಆಗಿದೆ. ಹೀಗಾಗಿ ಕಲುಷಿತ ನೀರೆಲ್ಲ ಹೊಲಗಳಲ್ಲಿ ನುಗ್ಗುತ್ತಿದೆ. ಚರಂಡಿ ನೀರು ಹೆಚ್ಚಿನ ಪ್ರಮಾಣದಲ್ಲಿ ನುಗ್ಗುತ್ತಿರುವುದರಿಂದ ಸುತ್ತಲಿನ ಬೋರ್‌ವೆಲ್‌ಗ‌ಳಲ್ಲಿಯೂ ಡ್ರೆŒçನೇಜ್‌ ನೀರು ಮಿಶ್ರಿತವಾಗಿ ಬರುತ್ತಿದೆ.

ಭತ್ತ, ತರಕಾರಿ ಬೆಳೆಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಈಈ ಭಾಗದ ರೈತರು ಹೊಲಗಳಿಗೆ ಹೋದರೆ ಗಬ್ಬು ನಾರುತ್ತಿರುತ್ತದೆ. ಮೂಗು ಮುಚ್ಚಿಕೊಂಡೇ ಹೊಲದಲ್ಲಿ ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಹೊಲಗಳಲ್ಲಿ ಚರಂಡಿ ನೀರು ಆವೃತಗೊಂಡಿದ್ದರಿಂದ ರೈತರು ಕೆಲಸ ಮಾಡುವಾಗ ಕಾಲುಗಳು ಕೊಳೆಯುತ್ತಿವೆ. ಇದರಿಂದ ರೈತರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕಳೆ ತೆಗೆಯಲು ಹೋದಾಗ ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ.

ಬಳ್ಳಾರಿ ನಾಲಾದಿಂದ ಈ ರೀತಿ ಮಳೆಗಾಲದಲ್ಲಿ ಕಷ್ಟಪಟ್ಟು ಬೆಳೆದ ಬೆಳೆಗಳು ನೀರು ಪಾಲಾಗುತ್ತಿದೆ. ಅಲ್ಲದೇ ಬಳ್ಳಾರಿ ನಾಲಾ ಅಲ್ಲಲ್ಲಿ ಬಿರುಕು ಬಿಟ್ಟಿರುವುದರಿಂದ ಈ ಸಮಸ್ಯೆ ಉದ್ಭವಿಸಿದೆ. ಭತ್ತ, ಶೇಂಗಾ, ಬೇಳೆ ಕಾಳು ಗದ್ದೆಗಳಲ್ಲಿ ನೀರು ನುಗ್ಗಿದೆ. ರೈತರು ಸಂಕಷ್ಟ ಅನುಭವಿಸುತ್ತಿದ್ದರೂ ಅಧಿಕಾರಿಗಳು ಮತ್ತು ಜನಪ್ರತಿನಿ ಧಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

Advertisement

ಬಳ್ಳಾರಿ ನಾಲೆಗೆ ಕಲುಷಿತ ನೀರು ನುಗ್ಗಿ ರೈತರನ್ನು ಸಂಕಷ್ಟಕ್ಕೀಡು ಮಾಡಿದೆ. ಚರಂಡಿ ನೀರು ಬರದಂತೆ ತಡೆಯುವಂತೆ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ನಾಲಾ ಹೂಳೆತ್ತುವ ಮೂಲಕ ನೀರು ಸರಾಗವಾಗಿ ಹೋಗುವಂತೆ ಮಾಡಬೇಕು.
– ರಾಜು ಮರವೆ, ರೈತ ಮುಖಂಡರು

ಬಳ್ಳಾರಿ ನಾಲಾದಲ್ಲಿ ಹರಿದು ಬರುತ್ತಿರುವ ಕಲುಷಿತ ನೀರು ಸಂಸ್ಕರಣೆ ಮಾಡಲು ಎಸ್‌ಟಿಪಿ ಘಟಕ ನಿರ್ಮಾಣವಾಗುತ್ತಿದೆ. ಬಳ್ಳಾರಿ ನಾಲೆಯಿಂದ ಆಗುತ್ತಿರುವ ಅನೇಕ ಸಮಸ್ಯೆಗಳಿಗೆ ಈ ಘಟಕದಿಂದ ಪರಿಹಾರ ಸಿಗಲಿದೆ. ಘಟಕದಲ್ಲಿ ಸಂಸ್ಕರಣ ಆಗುವ ನೀರು ಕುಡಿಯಲು ಹೊರತುಪಡಿಸಿ ಇನ್ನುಳಿದ ಎಲ್ಲದಕ್ಕೂ ಬಳಸಬಹುದಾಗಿದೆ.
– ಜಗದೀಶ, ಆಯುಕ್ತರು, ಮಹಾನಗರ ಪಾಲಿಕೆ.

– ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next